ಮಾರ್ಚ್ 4 ರಿಂದ ಸಾರಿಗೆ ನೌಕರರ ಸಂಘಟನೆಗಳಿಂದ ಪ್ರತಿಭಟನೆ, ಬೇಡಿಕೆಗಳೇನು?
2021-22 ರ ಸನ್ನಿವೇಶ ಮತ್ತೆ ಪುನರಾವರ್ತನೆಯಾಗಲಿದೆಯಾ? ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಬ್ಧವಾಗಲಿದೆಯಾ? ಬಸ್ ಸಿಗದೆ ಪ್ರಯಾಣಿಕರು ಪರಿತಪಿಸಬೇಕಾದಂಥ ಸ್ಥಿತಿ ನಿರ್ಮಾಣವಾಗುತ್ತಾ? ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 4 ರಿಂದ ಕೆಲ ಸಾರಿಗೆ ನೌಕರರ ಸಂಘಟನೆಗಳು ನಡೆಸಲಿರುವ ಪ್ರತಿಭಟನೆ ಹುಟ್ಟು ಹಾಕಿರುವ ಪ್ರಶ್ನೆಗಳಿವು.
ಬೆಂಗಳೂರು, ಫೆ.21: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ (Protest) ಸಜ್ಜಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಾರಿಗೆ ಸಂಚಾರವು ಸ್ತಬ್ಧವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಮಾರ್ಚ್ 4 ರಿಂದ ಸಾರಿಗೆ ನೌಕರರು ಆಹೋರಾತ್ರಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಪ್ಲಾನ್ ರೂಪಿಸಿದ್ದಾರೆ. ಸೇವೆಯಿಂದ ವಜಾ ಆಗಿರುವ ಸಿಬ್ಬಂದಿಗೆ ನ್ಯಾಯ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿವೃತ್ತಿ ನೌಕರರು ಹಾಗೂ ಹಾಲಿ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ (Freedom Park) ಕುಟುಂಬ ಸಮೇತ ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ಹಿಂದಿನ ಸರ್ಕಾರ ನೌಕರರಿಗೆ ಭರವಸೆ ನೀಡಿ ಕೈತೊಳೆದುಕೊಂಡಿದೆ, ಹೀಗಾಗಿ ಹಾಲಿ ಸರ್ಕಾರ ನೌಕರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ರಾಜ್ಯ ಸಾರಿಗೆ ನಿಗಮದ ಕೂಟ ಒತ್ತಾಯಿಸಿದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬಸ್ ಗಳು ನಿಲ್ಲುತ್ತೆ, ಮುಷ್ಕರಕ್ಕೂ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳೇನು?
- 2020ರ ಜ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳದ ಬಾಕಿ ಹಣ ನೀಡಬೇಕು.
- 2020ರ ಜ.1ರಿಂದ ರಿಂದ ನಿವೃತ್ತ ನೌಕರರ ವೇತನ ಹೆಚ್ಚಳದ ಫಿಕ್ಸೇಷನ್ ಆಗಬೇಕು.
- 38 ತಿಂಗಳ ತುಟ್ಟಿ ಭತ್ಯೆ ಬಾಕಿ ಹಣ ನೀಡಬೇಕು.
- 2021ರ ಮುಷ್ಕರದ ವೇಳೆ BJP ಸರ್ಕಾರ ತೆಗೆದುಕೊಂಡಿರುವ ಎಲ್ಲಾ ರೀತಿಯ ಶಿಕ್ಷೆಗಳು ಹಿಂಪಡೆಯಬೇಕು.
- ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳೇ ಓಡಿಸಬೇಕು.
- ಕೇಂದ್ರ ಸರ್ಕಾರ FAME-2 ಯೋಜನೆ ( ಎಲೆಕ್ಟ್ರಿಕ್ ಬಸ್‌ಗಳನ್ನು) ಖಾಸಗಿಯವರ ಮೂಲಕ ಓಡಿಸುವ ಖಾಸಗೀಕರಣವನ್ನು ವಿರೋಧಿಸಬೇಕು.
- ಭ್ರಷಾಚಾರದ ಆಡಳಿತಕ್ಕೆ ಕಡಿವಾಣ ಹಾಕಬೇಕು.
- ಆಡಳಿತ ವರ್ಗ ಏಕ ಪಕ್ಷೀಯವಾಗಿ ಸುತ್ತೋಲೆಗಳನ್ನು ತರುವ ಪದ್ಧತಿ ನಿಲ್ಲಿಸಿ, ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಿ ಉತ್ತಮ ಕೈಗಾರಿಕಾ ಬಾಂದವ್ಯ ರೂಪಿಸಬೇಕು.
- ಸರ್ಕಾರಿ ನೌಕರರ ಸಂಬಳ ಸಾರಿಗೆ ನೌಕರರಿಗೂ ವಿಸ್ತರಣೆ ಮಾಡಬೇಕು.
ಇದನ್ನೂ ಓದಿ: ಜ್ಞಾನ ದೇಗುಲ ಘೋಷ ವಾಕ್ಯದ ವಿವಾದ ಬೆನ್ನಲ್ಲೇ ವಿಡಿಯೋ ಬಿಡುಗಡೆ; ಶಿಕ್ಷಕರಾಗಿ ನ್ಯಾಯದ ಪಾಠ ಮಾಡಿದ H.C.ಮಹದೇವಪ್ಪ
ಇನ್ನೂ 2021ರಲ್ಲಿ ಮುಷ್ಕರ ನಡೆಸಿದಾಗ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಒಕ್ಕೂಟದ ಜೊತೆ ಸಂಧಾನ ಮಾಡಿದ್ದ ಬಿಜೆಪಿ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟಿತ್ತು. ಅದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹಾಲಿ ಸರ್ಕಾರ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಒಕ್ಕೂಟ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಾವಿರಾರು ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ. ಸಾಂಕೇತಿಕ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಕೂಟ ಎಚ್ಚರಿಕೆ ನೀಡಿದೆ.
ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದ ಇಂದಿಗೂ ಅಧಿಕ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ. ಅವರಿಗೆ ನ್ಯಾಯ ನೀಡುವ ಜೊತೆಗೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ನೌಕರರ ಜೊತೆಗೆ ಮಾತಾಡುತ್ತೇನೆ. ಇದು ಬಜೆಟ್ ಸಮಯ ಚರ್ಚೆಗಳು ನಡೆಯುತ್ತಿವೆ. ನಮ್ಮ ಇಲಾಖೆಗೆ ಎಷ್ಟು ಅನುದಾನ ಕೊಡುತ್ತಾರೆ ಎಂದು ನೋಡಿಕೊಂಡು ಮಾತಾಡ್ತಿನಿ. ಹದಿನೈದು ದಿನಗಳ ಹಿಂದೆ ಸಾರಿಗೆ ನೌಕರರ ಮುಖಂಡರ ಜೊತೆಗೆ ಮಾತಾಡಿದ್ದೀನಿ. ನಮ್ಮದೆಲ್ಲ ಒಂದೇ ಕುಟುಂಬ ಅಂದ್ರು ಎಂದು ತಿಳಿಸಿದರು.
ಒಟ್ನಲ್ಲಿ ಸಾರಿಗೆ ನೌಕರರು ಮಾರ್ಚ್ ನಾಲ್ಕರಿಂದ ಅಹೋರಾತ್ರಿ ಧರಣಿಗೆ ಪ್ಲಾನ್ ಮಾಡಿಕೊಂಡಿದೆ. ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ ಅಂದರೆ ಬಸ್ ಗಳು ನಿಲ್ಲುತ್ತೆ ಮುಷ್ಕರಕ್ಕೂ ಹೋಗಬೇಕಾಗುತ್ತದೆ ಅನ್ನೋ ಎಚ್ಚರಿಕೆ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ