ಅಂತರಾಷ್ಟ್ರೀಯ ಐರನ್ ಮ್ಯಾನ್​ ಇವರೇ ನೋಡಿ: ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2023 | 6:49 PM

ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ 3.9 ಕಿ.ಮೀ ಈಜು, 180 ಕಿ. ಮೀ ಸೈಕ್ಲಿಂಗ್‍ ಹಾಗೂ 42 ಕೀ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್​​​ ಆಗಿ ಸದಾನಂದ ಅಮರಾಪುರ ಹೊರಹೊಮ್ಮಿದ್ದಾರೆ.

ಅಂತರಾಷ್ಟ್ರೀಯ ಐರನ್ ಮ್ಯಾನ್​ ಇವರೇ ನೋಡಿ: ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿ
ಸದಾನಂದ ಅಮರಾಪುರ ಅವರನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗೌರವಿಸಿದರು.
Follow us on

ಧಾರವಾಡ: ಜುಲೈ 2 ರಂದು ಕಜಕಿಸ್ಥಾನ ದೇಶದ ರಾಜಧಾನಿ ಆಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ್ (International Iron Man) ಸ್ಪರ್ಧೆ ಆಯೋಜಿಸಲಾಗಿತ್ತು. 3.9 ಕಿ.ಮೀ ಈಜು, 180 ಕಿ. ಮೀ ಸೈಕ್ಲಿಂಗ್‍ ಹಾಗೂ 42 ಕೀ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್​​ ಸದಾನಂದ ಅಮರಾಪುರ ಅವರು ಸಾಧನೆ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿಯಾಗಿದ್ದು, ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಂತರರಾಷ್ಟ್ರೀಯ ಐರನ್ ಮ್ಯಾನ್ ಆಗಿರುವ ಸದಾನಂದ ಅಮರಾಪುರ ಅವರನ್ನು ತಮ್ಮ ಕಚೇರಿಗೆ ಕರೆದು ಆತ್ಮೀಯವಾಗಿ ಅಭಿನಂದಿಸಿ, ಗೌರವಿಸಿದರು.

ವಿದ್ಯಾರ್ಥಿ ದೆಸೆಯಿಂದಲೂ ಕ್ರೀಡಾಪಟುವಾಗಿದ್ದ ಸದಾನಂದ ಅಮರಾಪುರ ಅವರು ಈ ಅಂತರರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ 62 ದೇಶಗಳಿಂದ ಭಾಗವಹಿಸಿದ್ದ 1200 ಸ್ಪರ್ಧಾಳುಗಳನ್ನು ಹಿಂದಿಕ್ಕಿ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಇವರು ದಿವಂಗತ ಹನುಮಂತಪ್ಪ ನಿ. ಅಮರಾಪುರ ಡಿವೈಎಸ್ಪಿ ರವರ ಪುತ್ರರಾಗಿದ್ದಾರೆ. ತಂದೆಯಂತೆ ಕುಸ್ತಿಯಲ್ಲಿ ಆಸಕ್ತಿ ಹೊಂದಿರುವ ಇವರು ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: Dharawad News: ಪಿಎಂಎಸ್ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾಕ್ಕೆ 60 ಸಾವಿರ ದಂಡ; ವಿಮೆ ಹಣ 2 ಲಕ್ಷ ಪಾವತಿಗೆ ಆದೇಶ

2010ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಗದಾಳ, ಇನಾಮ ಹೊಂಗಲ್, ಉಗರಗೋಳ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 2018ರಲ್ಲಿ ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ ಹುದ್ದೆಗೆ ಬಡ್ತಿ ಹೊಂದಿದ ಇವರು ಗ್ರಾಮೀಣ ಕೂಲಿ ಕಾರ್ಮಿಕರಿಗಾಗಿ ಸೇವೆ ಸಲ್ಲಿಸಿದ್ದಕ್ಕೆ ಅತ್ಯುತ್ತಮ ಸಹಾಯಕ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಕ್ರೀಡಾ ಸ್ಪೂರ್ತಿಯನ್ನು ಗ್ರಾಮಗಳ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು, ಊಟ ಮತ್ತು ಸೈಕಲ್ ಮೂಲಕ ಬೆಳಗಿನ ಹಳ್ಳಿಗಳಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತಿರುವ ಯುವ ಅಧಿಕಾರಿ ಸದ್ಯ ಹುಬ್ಬಳ್ಳಿ ತಾಲೂಕು ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆಲಸದ ಒತ್ತಡದ ಮಧ್ಯೆಯೂ ದೇಹದ ತೂಕವನ್ನು ನಿಯಂತ್ರಿಸಿಕೊಳ್ಳಲು ಪ್ರಾರಂಭಿಸಿದ ಇವರ ಸೈಕ್ಲಿಂಗ್ ಇಂದು ಈ ಸಾಧನೆಯ ಮಟ್ಟಕ್ಕೆ ಬೆಳೆಸಿದೆ. ಬಿಡುವಿನ ಮತ್ತು ರಜಾ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದ ಸೈಕ್ಲಿಂಗ್‍ಗಳೊಂದಿಗೆ ಅಭ್ಯಾಸ ಮಾಡುತ್ತಾ ಹವ್ಯಾಸವಾಗಿ ಪ್ರಾರಂಭಗೊಂಡ ಸೈಕ್ಲಿಂಗ್, ಓಟ, ಈಜು ಇಂದು ಹಲವಾರು ಪ್ರಶಸ್ತಿಗಳಿಗೆ ಕಾರಣವಾಗಿದೆ.

ಹುಬ್ಬಳ್ಳಿ ಸೈಕ್ಲಿಂಗ್ ವತಿಯಿಂದ 2017ರಲ್ಲಿ ಆಯೋಜಿಸಿದ್ದ ಎಂ.ಟಿ.ಬಿ ಚಾಂಪಿಯನಿಷಿಪ್‍ನಲ್ಲಿ 8ನೇ ಸ್ಥಾನ, ಗೋವಾದಲ್ಲಿ 2017ರ ಅಕ್ಟೋಬರ್‌ನಲ್ಲಿ ನಡೆದ ಟಫ್ ಮ್ಯಾನ್ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ಹುಬ್ಬಳ್ಳಿ ಫಿಟ್ನೆಸ್ ಕ್ಲಬ್‍ನಿಂದ ಆಯೋಜಿಸಿದ್ದ ಡುವಾತ್ಲಾನ್‍ನಲ್ಲಿ ಪ್ರಥಮ, 2019 ರಲ್ಲಿ ಒಂದೇ ವರ್ಷದಲ್ಲಿ 100, 200, 300, 400 ಮತ್ತು 600 ಕೀ ಮೀ ಸೈಕ್ಲಿಂಗ್‍ನಲ್ಲಿ ಸೂಪರ್ ರಾಡರ್ ಆಗಿದ್ದಾರೆ.

2019 ರಲ್ಲಿ ಕೊಲ್ಲಾಪುರದಲ್ಲಿ ಅಯೋಜಿಸಿದ್ದ ಸ್ಪರ್ಧೆಯಲ್ಲಿ ಲೋಹ ಪುರುಷ ಆಗಿದ್ದಾರೆ. 2020ರ ಫೆಬ್ರವರಿಯಲ್ಲಿ ನಾಗಪುರದಲ್ಲಿ ನಡೆದ ಟೈಗರ್ ಮ್ಯಾನ್ ಡುವಾತ್ಲಾನ್ ಆಗಿದ್ದಾರೆ. 2021ರಲ್ಲಿ ಒರಿಸ್ಸಾದಲ್ಲಿ ಹಕ್ರೋಲಿಯನ್ ಟೈಯತ್ಲಾನ್ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್ 2021ರಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ವ್ಯಸನ ಮುಕ್ತ ಭಾರತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಜಾಗೃತಿಗಾಗಿ 3,800 ಕೀ.ಮೀ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 14 ದಿನ 14 ಗಂಟೆಗಳ ಕಾಲ ಕ್ರಮಿಸಿ ಪೂರ್ಣಗೊಳಿಸಿದ್ದಾರೆ. 2022 ರಲ್ಲಿ ಗೋವಾದಲ್ಲಿ ನಡೆದ ಹಾಫ್ ಐರನ್ ಮ್ಯಾನ್ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮುಂದೆ ನಾಲ್ಕು ಬೇಡಿಕೆ ಇಟ್ಟ ವರೂರು ಜೈನ ಸ್ವಾಮೀಜಿ: ಜಿ ಪರಮೇಶ್ವರ ಹೇಳಿಕೆ

ಹವ್ಯಾಸದಿಂದ ಕನಸನ್ನು ನನಸಾಗಿಸಿಕೊಂಡ ಸದಾನಂದ ಅವರ ಸತತ ಪರಿಶ್ರಮ, ಛಲ, ತಾಳ್ಮೆ ಯುವಕರಿಗೆ ಮಾದರಿಯಾಗಿದೆ. ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ದೇಸಿ ಕ್ರೀಡೆಗಳ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ.

ಗ್ರಾಮೀಣ ಸರಕಾರಿ ಶಾಲೆಗಳಲ್ಲಿ 8 ಹೈಟೆಕ್ ಆಟದ ಮೈದಾನಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಕ್ರೀಡೋತ್ಸವಕ್ಕೆ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾಗಿರುವ ಇವರ ಪತ್ನಿ ಮುಕ್ತಾ ಅವರು ಪತಿಗೆ ಬೆನ್ನೆಲುಬಾಗಿ ನಿಂತು, ಸಾಧನೆಗೆ ಕಾರಣರಾಗಿದ್ದಾರೆ.

ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ, ಕ್ರೀಡಾ ಮಾರ್ಗದರ್ಶನ ಮಾಡುತ್ತಾರೆ. ಒಲಂಪಿಕ್‍ನಲ್ಲಿ ಭಾರತೀಯರಿಗೆ ಹೆಚ್ಚಿನ ಅವಕಾಶಗಳಿವೆ. ಆದರೆ ಉತ್ತಮ ತರಬೇತಿಯ ಅವಶ್ಯಕತೆ ಎಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ.

ಇತ್ತೀಚಿಗೆ ಸ್ವಗ್ರಾಮವಾದ ಹಾವೇರಿಯ ಇಚ್ಚಂಗಿಯಲ್ಲಿ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಮುಕ್ತ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಿ ದೇಶದ ನೂರಾರು ಜನ ಕುಸ್ತಿಪಟುಗಳು ಭಾಗವಹಿಸುವಂತೆ ಮಾಡ, ತಮ್ಮ ಕ್ರೀಡಾಸಕ್ತಿಯನ್ನು ಮೆರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.