ಹುಬ್ಬಳ್ಳಿ, ಫೆ.27: ಬಿಜೆಪಿಯ ಹಿರಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಫೇಸ್ಬುಕ್ (Facebook) ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಖಾತೆಗೆ 7.50 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲೇ ಲಾಭ ಬಂದಿದೆ. ನೀವ ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಲಾಗಿದೆ.
ಅಲ್ಲದೆ, ಕ್ರಿಸ್ಟಿನಾ ಪೆನಾಟೆ ಎಂಬುವರ ಸಲಹೆ ಪಡೆಯಬಹುದು ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ತಂದೆಯ ಫೇಸ್ಬುಕ್ ಖಾತೆ ಹ್ಯಾಕ್ ಆಗಿರುವ ಮಾಹಿತಿ ನೀಡಿದ ಪುತ್ರ ಸಂಕಲ್ಪ ಶೆಟ್ಟರ್, ಯಾರೂ ಕೂಡ ಹಣ ಹಾಕಬಾರದು ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ಲಿಂಗಾಯತ ಪ್ರಭಾವಿ ನಾಯಕ ನಾಯಕ ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ತತ್ವಸಿದ್ಧಾಂತಗಳನ್ನು ಬಿದಿಗಿಟ್ಟು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧವೇ ಸೋಲು ಅನುಭವಿಸಿದ್ದರು. ಬಳಿಕ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಎಲ್ಸಿ ಆಗಿದ್ದರು.
ಇದನ್ನೂ ಓದಿ: ಸಮುದ್ರದಲ್ಲಿ ಮೋದಿ ನವಿಲುಗರಿ ನೆಟ್ಟರೆ ಚಿಗುರುತ್ತಾ: ಖರ್ಗೆ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಕಿಡಿಕಿಡಿ
ಒಟ್ಟಾರೆಯಾಗಿ ಎಂಟು ತಿಂಗಳು ಕಾಂಗ್ರೆಸ್ನಲ್ಲಿದ್ದ ಶೆಟ್ಟರ್ ಕಳೆದ ತಿಂಗಳಷ್ಟೇ ಬಿಜೆಪಿಗೆ ಘರ್ವಾಪ್ಸಿ ಆಗಿದ್ದಾರೆ. ಅಷ್ಟಕ್ಕೂ ಶೆಟ್ಟರ್ ಕಾಂಗ್ರೆಸ್ ತೊರೆಯಲು ಕಾರಣವೇನು ಎನ್ನುವುದನ್ನು ನೋಡುವುದಾದರೆ ಕಾಂಗ್ರೆಸ್ ಸ್ಥಳೀಯ ಮುಖಂಡರಿಂದ ಜಗದೀಶ್ ಶೆಟ್ಟರ್‌ಗೆ ವಿರೋಧವಿತ್ತು. ಶೆಟ್ಟರ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿರುವ ಆರೋಪವೂ ಇದೆ. ಸಚಿವ ಸ್ಥಾನ ಸಿಗಲಿದೆ ಎಂದು ಶೆಟ್ಟರ್ ನಂಬಿದ್ದರು. ಆದರೆ, ಸಿಗದಿದ್ದಕ್ಕೆ ತೀವ್ರ ನಿರಾಸೆ ಅನುಭವಿಸಿದ್ದರಂತೆ. ಬಿಜೆಪಿಯಲ್ಲಿ ಬಿ.ಎಲ್.ಸಂತೋಷ್ ಹಿಡಿತ ಕಡಿಮೆಯಾಗಿದ್ದೂ ಬಿಜೆಪಿಗೆ ವಾಪಸ್ ಬರಲು ಕಾರಣ ಎನ್ನಲಾಗಿತ್ತು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಮಂಗಳಾ ಅಂಗಡಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಬಗ್ಗೆ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾಗುವುದಕ್ಕೂ ಮುನ್ನ ಚರ್ಚೆಯಾಗಿತ್ತು. ಆದರೆ, ಶೆಟ್ಟರ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಲೆಕ್ಕಾಚಾರಗಳು ಬದಲಾಗಿದ್ದವು. ಶೆಟ್ಟರ್, ಅಂಗಡಿ ಇಬ್ಬರೂ ಬೀಗರಾಗಿರುವ ಹಿನ್ನೆಲೆ ಅವರಿಗೆ ರಾಜಕೀಯ ಲಾಭ ದೊರೆಯುವ ಮಾತುಗಳು ಮುನ್ನೆಲೆಗೆ ಬಂದಿದ್ದವು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಶೆಟ್ಟರ್, ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದರು. ಅಲ್ಲದೆ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿ ಬರುತ್ತಿದೆ. ಯಾವ ಉದ್ದೇಶದಿಂದ ನನ್ನ ಹೆಸರು ಕೇಳಿ ಬರ್ತಿದೆ ಎಂಬುದು ಗೊತ್ತಿಲ್ಲ. ಆ ಕುರಿತು ಇಂದಿನ ಸಭೆಯಲ್ಲಿ ಯಾವುದೂ ಚರ್ಚೆ ಆಗಲ್ಲ. ಲೋಕಸಭೆ ಚುನಾವಣೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 27 February 24