ಕಾಂಗ್ರೆಸ್ನಲ್ಲಿ ಇಂದಿರಾ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು: ಸಿಎಂ ಕೋಲೆ ಬಸವ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು
ಅಮಿತ್ ಶಾ ಹೇಳಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾರೆ ಎಂದು ಮುಖ್ಯಂಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್, ಕಾಂಗ್ರೆಸ್ನಲ್ಲಿ ಇಂದಿರಾ ಗಾಂಧಿ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು ಎಂದರು.
ಹುಬ್ಬಳ್ಳಿ, ಫೆ.25: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೆಲ ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್ಗೆ ಹೋಗಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ (Congress) ಇತಿಹಾಸ ತೆಗೆದು ನೋಡಲಿ. ಏಕೆಂದರೆ, ಕಾಂಗ್ರೆಸ್ನಲ್ಲಿ ಇಂದಿರಾ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ. ಅಮಿತ್ ಶಾ ಹೇಳಿದ್ದಕ್ಕೆ ರಾಜ್ಯ ಬಿಜೆಪಿ (BJP) ನಾಯಕರು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶೆಟ್ಟರ್ ಈ ರೀತಿ ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಕಾಂಗ್ರೆಸ್ ಸೇರಿ ಅಂತಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವವರು ಯಾರಿದ್ದಾರೆ ಎಂದು ಕೇಳಿದರು. ಅಲ್ಲದೆ, ಮೂಲ ಕಾಂಗ್ರೆಸ್ಸಿಗರೇ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಭ್ರಮೆಯಲ್ಲಿದ್ದಾರೆ ಎಂದರು.
ಮುಂದಿನ ಒಂಬತ್ತು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಶೆಟ್ಟರ್, ಇದು ಕಾಂಗ್ರೆಸ್ನ ಕೊನೆಯ ಸರ್ಕಾರ. ಮುಂದೆ ಯಾವತ್ತೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ; ಸದ್ಯದಲ್ಲೇ ಎಲ್ಲವೂ ಇತ್ಯರ್ಥವಾಗಲಿದೆ
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಜಗದೀಶ್ ಶೆಟ್ಟರ್, ಈ ಬಗ್ಗೆ ಇನ್ನು ಅಧಿಕೃತವಾಗಿ ಯಾವುದೇ ಘೋಷಣೆ ಆಗಿಲ್ಲ. ಗೊಂದಲಗಳ ವಿಚಾರ ಕೇವಲ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತೆ ಅಷ್ಟೇ ಎಂದರು. ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಬೇಡಿಕೆ ಇಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಸದ್ಯದಲ್ಲೇ ಇತ್ಯರ್ಥ ಆಗಲಿದೆ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್!
ಈ ಮಾಸಾಂತ್ಯದಲ್ಲಿ 100 ಸೀಟು ಘೋಷಣೆ ವಿಚಾರ ಕೇವಲ ಮಾಧ್ಯಮ ಸೃಷ್ಟಿ ಅಷ್ಟೇ. ಅಲ್ಲಿಯವರೆಗೂ ಕಾದು ನೋಡಬೇಕು ಎಂದರು. ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರ ವಿಜಯೋತ್ಸವ ವಿಚಾರವಾಗಿ ಮಾತನಾಡಿದ ಶೆಟ್ಟರ್, ಈ ವಿಚಾರದಲ್ಲಿ ಸರ್ವ ಪಕ್ಷದಿಂದ ಸ್ಪಷ್ಟ ನಿರ್ಧಾರವಾದಾಗ ಮಾತ್ರ ಎಲ್ಲವೂ ಬಗೆ ಹರಿಯಲಿದೆ ಎಂದರು.
ಎಲ್ಲ ಗೊಂದಲಗಳಿಗೂ ತೆರೆ
ಹುಬ್ಬಳ್ಳಿಯಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿ ಉದ್ಘಾಟನೆಗೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್, ನಾನು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಅಂತಾ ಮೊದಲೇ ಹೇಳಿದ್ದೆ. ಇನ್ನೊಂದು ವಾರದಲ್ಲಿ ಎಲ್ಲ ಗೊಂದಲಗಳಿಗೂ ತೆರೆ ಬೀಳುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ