ಸಮುದ್ರದಲ್ಲಿ ಮೋದಿ ನವಿಲುಗರಿ ನೆಟ್ಟರೆ ಚಿಗುರುತ್ತಾ: ಖರ್ಗೆ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಕಿಡಿಕಿಡಿ
ದ್ವಾರಕೆಯನ್ನು ನೋಡಲು ನವಿಲುಗರಿ ಹಿಡಿದುಕೊಂಡು ಸಮುದ್ರದ ಆಳಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಕ್ಕೆ ಬಿಜೆಪಿ ನಾಯಕ ಜಗದೀಶ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖರ್ಗೆ ವಿರುದ್ಧ ಅವರು ಕಿಡಿ ಕಾರಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಸಮುದ್ರದ ಆಳದಲ್ಲಿ ನವಿಲುಗರಿ ನೆಟ್ಟರೆ ಚಿಗುರುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಮಜುನ ಖರ್ಗೆ (Mallikarjun Kharge) ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ (Jagadish Shettar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಅರ್ಥವೇ ಇಲ್ಲ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಇಡೀ ದೇಶ ಆರಾಧನೆ ಮಾಡುವ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣಾ ಫಲಿತಾಂಶದ ನಂತರ ಅದು ಗೊತ್ತಾಗಲಿದೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ತಿಳಿಯಲಿದೆ. ಫಲಿತಾಂಶ ಬರುವವರೆಗೂ ಏನೂ ಹೇಳಲಾಗದು. ಕುದುರೆ ವ್ಯಾಪಾರವೊ ಏನೋ ನನಗೆ ಗೊತ್ತಿಲ್ಲ ಎಂದರು.
ಕಳಸಾ ಬಂಡೂರಿ ಯೋಜನೆ ವಿಳಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಮನೋಹರ್ ಪರಿಕ್ಕರ್ ಗೋವಾ ಸಿಎಂ ಇದ್ದಾಗ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದೆ. ಮನೋಹರ್ ಪರಿಕ್ಕರ್ ಮನವೊಲಿಕೆ ಸಹ ಆಗಿತ್ತು. ಆದರೆ, ಆ ವೇಳೆ ಗೋವಾ ಕಾಂಗ್ರೆಸ್ನವರೇ ವಿರೋಧ ಮಾಡಿದ್ದರು. ಅಲ್ಲಿನ ಕಾಂಗ್ರೆಸ್ ನಾಯಕರಿಗೆ ತಿಳಿಹೇಳಿ ಅಂತ ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಹೇಳಿದ್ದೆ. ಕೆಲವರಿಂದಾಗಿ ಇದು ವಿಳಂಬವಾಗುತ್ತಿದೆ. ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಗೋವಾ ವಿದ್ಯುತ್ ಯೋಜನೆಗೆ ಅರಣ್ಯ ನಾಶ ಮಾಹಿತಿಯನ್ನೂ ಇಟ್ಟುಕೊಂಡು ನಾವು ಪೈಟ್ ಮಾಡಬೇಕಾಗುತ್ತದೆ. ವಿದ್ಯುತ್ ಯೋಜನೆಗೆ ಅನುಮತಿ ಕೊಡುವುದಾದರೆ, ಮಹದಾಯಿ ಯೋಜನೆಗೆ ಅನುಮತಿ ಬೇಡಿಕೆ ಇಡುತ್ತೇವೆ ಎಂದು ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಶ್ರೀಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿದ ಪ್ರಧಾನಿ ಮೋದಿ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಜೈಶಂಕರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಅವರು ಸದ್ಯ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸಬಹುದು. ಆದರೆ, ಕರ್ನಾಟಕದಿಂದಲೇ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗದು. ಬೇರೆ ರಾಜ್ಯದಿಂದಲೂ ಸ್ಪರ್ಧಿಸಬಹುದು ಎಂದರು.
ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೆಲ ಮುಖಂಡರ ಮರು ಸೇರ್ಪಡೆ ಕುರಿತು ಚರ್ಚೆ ಆಗಿದೆ. ನಾಳೆ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ 90 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರ್ಪಡೆ ಮಾಡಲಾಗುತ್ತದೆ. ಎಲ್ಲಾ ವಿವಾದಕ್ಕೂ ನಾಳೆ ತೆರೆ ಬೀಳಲಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Tue, 27 February 24