ಸರ್ಕಾರಿ ಸಾರಿಗೆ ಸಂಸ್ಥೆಗೂ ಆದಾಯದ ವ್ಯಾಮೋಹ: ಕೆಟ್ಟಿತು ಸರ್ಕಾರಿ ಬಸ್​​ಗಳ ಅಂದ

ವಾಯುವ್ಯ ಸಾರಿಗೆ ಸಂಸ್ಥೆಯು ಆದಾಯಕ್ಕಾಗಿ ಧಾರವಾಡ-ಬೆಳಗಾವಿ ಬಸ್‌ಗಳಿಗೆ ಕಪ್ಪು ಜಾಹೀರಾತು ಸ್ಟಿಕ್ಕರ್‌ಗಳನ್ನು ಅಂಟಿಸಿ ವಿರೂಪಗೊಳಿಸಿದೆ. ಇದರಿಂದ ಬಸ್‌ಗಳ ಸೌಂದರ್ಯ ಕೆಟ್ಟು, ರಾತ್ರಿ ಕಾಣಿಸದೆ ಅಪಘಾತ ಭೀತಿ ಹೆಚ್ಚಿದೆ. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆದರೆ ಸಾರಿಗೆ ಸಂಸ್ಥೆ ಮಾತ್ರ ನಿಯಮಬದ್ಧವೆಂದು ಸಮರ್ಥಿಸಿಕೊಂಡಿದೆ.

ಸರ್ಕಾರಿ ಸಾರಿಗೆ ಸಂಸ್ಥೆಗೂ ಆದಾಯದ ವ್ಯಾಮೋಹ: ಕೆಟ್ಟಿತು ಸರ್ಕಾರಿ ಬಸ್​​ಗಳ ಅಂದ
ಸರ್ಕಾರಿ ಬಸ್​ಗಳಿಗೆ ಜಾಹೀರಾತು ಅಂಟಿಸಿರುವುದು
Edited By:

Updated on: Jan 20, 2026 | 7:55 PM

ಧಾರವಾಡ, ಜನವರಿ 20: ಸರಕಾರಿ ಬಸ್ಸುಗಳು (government Buses) ಅಂದರೆ ಅದಕ್ಕೊಂದು ನಿಯಮ, ಶಿಸ್ತು, ಅಂದ ಇರಬೇಕು. ಇದೇ ಕಾರಣಕ್ಕೆ ಬಸ್ಸುಗಳ ಬಣ್ಣದ ವಿನ್ಯಾಸವನ್ನು ರೂಪಿಸುವಾಗ ಸಾರ್ವಜನಿಕರಿಂದ ಸಾಕಷ್ಟು ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತೆ. ಹೀಗೆ ವಿನ್ಯಾಸಗೊಂಡು ಧಾರವಾಡ (Dharwad) ಜಿಲ್ಲೆಯಲ್ಲಿ ರಸ್ತೆಗಿಳಿದ ಸರಕಾರಿ ಬಸ್ಸುಗಳ ಆಕಾರವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಆದಾಯದ ಬೆನ್ನು ಬಿದ್ದಿರುವ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ಸುಗಳ ಅಂದವನ್ನೇ ಕೆಡಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಯುವ್ಯ ಸಾರಿಗೆ ಸಂಸ್ಥೆಯ ಆದಾಯದ ವ್ಯಾಮೋಹ

ಕಪ್ಪು ಬಣ್ಣದ ಸ್ಟಿಕ್ಕರ್ಸ್​ಗಳಿಂದ ತುಂಬಿ ಹೋಗಿರುವ ಬಸ್ಸುಗಳನ್ನು ನೋಡಿದರೆ ಎಂಥವರಿಗೂ ಇವು ಸರಕಾರಿ ಬಸ್ಸುಗಳಾ ಅನ್ನೋ ಅನುಮಾನ ಮೂಡುತ್ತದೆ. ಇದಕ್ಕೆ ಕಾರಣ ವಾಯುವ್ಯ ಸಾರಿಗೆ ಸಂಸ್ಥೆಯ ಆದಾಯದ ಮೇಲಿರುವ ವ್ಯಾಮೋಹ. ಒಂದು ಸಂಸ್ಥೆ ಚೆನ್ನಾಗಿ ನಡೆಯಬೇಕೆಂದರೆ, ಲಾಭದಾಯಕವಾಗಿ ನಡೆಯಬೇಕೆಂದರೆ ಅದಕ್ಕೆ ಆದಾಯದ ಮೂಲ ಬೇಕೇಬೇಕು. ಹಾಗಂತ ಎಲ್ಲ ನೈತಿಕತೆಯನ್ನು ಬದಿಗೊತ್ತಿ ಆದಾಯವನ್ನೇ ನೆಚ್ಚಿಕೊಂಡು ಜಾಹಿರಾತಿಗೆ ಹೋದರೆ ಏನೆಲ್ಲಾ ಆಗಬಹುದು ಅನ್ನೋದಕ್ಕೆ ಈ ಬಸ್ಸುಗಳೇ ಸಾಕ್ಷಿ.

ಇದನ್ನೂ ಓದಿ: ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್​​ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು!

ಇದೀಗ ಧಾರವಾಡ ಜಿಲ್ಲೆಯ 76 ಹಾಗೂ ಬೆಳಗಾವಿ ಜಿಲ್ಲೆಯ 60 ಬಸ್ಸುಗಳ ಮೇಲೆ ಜಾಹಿರಾತು ಮುದ್ರಿಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಆ ಏಜೆನ್ಸಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದ್ದು, ಇಡೀ ಬಸ್ಸುಗಳ ಮೇಲೆ ಜಾಹೀರಾತಿನ ಕಪ್ಪು ಬಣ್ಣದ ಸ್ಟಿಕ್ಕರ್ಸ್ ಅಂಟಿಸಿ, ಇಡೀ ಬಸ್ಸನ್ನು ಕೆಂಪು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿಸಿಬಿಟ್ಟಿದ್ದಾರೆ. ಒಂದು ಕಡೆ ಇದು ಬಸ್ಸುಗಳ ಅಂದವನ್ನು ಕೆಡಿಸಿದ್ದು, ಮತ್ತೊಂದು ಕಡೆ ಮುದ್ರಣವಾದ ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಬಹುತೇಕ ಬಸ್ಸುಗಳ ಸ್ಥಿತಿಯೇ ಸರಿಯಾಗಿಲ್ಲ. ಮೊದಲೇ ಅನೇಕ ಬಸ್ಸುಗಳು ಎಲ್ಲೆಂದರಲ್ಲೇ ಕೆಟ್ಟು ನಿಲ್ಲುವ ಸ್ಥಿತಿಯಲ್ಲಿವೆ. ಇದರಿಂದಾಗಿ ನಿತ್ಯವೂ ಜನರು ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುತ್ತಲೇ ಇರುತ್ತಾರೆ. ಇಂಥದ್ದರೊಳಗೆ ಬಸ್ಸಿನ ಬಣ್ಣವನ್ನೇ ಕುರೂಪಗೊಳಿಸದರೆ ಜನರು ಆಕ್ರೋಶಗೊಳ್ಳದೇ ಮತ್ತೇನು ಮಾಡಿಯಾರು?

ಆರಂಭದಲ್ಲಿ ಕೇವಲ ಕಪ್ಪು ಬಣ್ಣದ ಜಾಹಿರಾತುಗಳಷ್ಟೇ ಬಂದಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಇದೀಗ ನೇರಳ ಬಣ್ಣವೂ ಇದರೊಂದಿಗೆ ಸೇರಿಕೊಂಡಿದೆ. ಜಾಹಿರಾತು ನೀಡೋ ಕಂಪನಿಯವರು ತಮಗೆ ಬೇಕಾದ ರೀತಿಯ ಸ್ಟಿಕ್ಕರ್ಸ್ ಅಂಟಿಸೋ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ ಯಾರು ಏನೇ ಪ್ರಶ್ನೆ ಮಾಡಿದರೂ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ.

ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಅವರನ್ನು ಕೇಳಿದರೆ, ಈಗಾಗಲೇ ಇಂಥದ್ದೊಂದು ಪ್ರಯೋಗ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಅದನ್ನು ಇಲ್ಲಿಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಸಾರಿಗೆ ನಿಯಮಗಳು ಹಾಗೂ ರಾಜ್ಯ ಸರಕಾರದ ನಿಯಮಗಳ ಪ್ರಕಾರವೇ ನಾವು ಇದನ್ನು ಮಾಡುತ್ತಿದ್ದೇವೆ. ಎಲ್ಲಿಯೂ ಇದರಲ್ಲಿ ಲೋಪವಾಗಿಲ್ಲ ಅನ್ನೋದು ಅವರ ಸ್ಪಷ್ಟನೆ.

ಇದೆಲ್ಲಾ ಒಂದು ಕಡೆಯಾದರೆ, ರಾತ್ರಿ ಹೊತ್ತು ಈ ಕಪ್ಪು ಬಣ್ಣದ ಬಸ್ಸುಗಳು ಕಾಣಿಸೋದೇ ಇಲ್ಲ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಕೂಡ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ, ಅಕ್ಕಪಕ್ಕದಿಂದ ಬರುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ರಾತ್ರಿ ಹೊತ್ತು ಈ ಬಸ್ಸುಗಳು ಕಾಣೋದೇ ಇಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚಾಗೋ ಆತಂಕವೂ ಶುರುವಾಗಿದೆ. ಆದರೂ ಇದರ ಬಗ್ಗೆ ಸಂಸ್ಥೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ: ಬಂದ್​ ಆಗುತ್ತಾ ಚಿಗರಿ ಬಸ್​ ಓಡಾಟ?

ಸದ್ಯಕ್ಕೆ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ 136 ಬಸ್ಸುಗಳಿಗೆ ಕಪ್ಪು ಬಣ್ಣದ ದೌರ್ಭಾಗ್ಯವನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಸುಗಳಿಗೂ ಈ ದೌರ್ಭಾಗ್ಯ ಬರೋದು ಗ್ಯಾರಂಟಿ ಅನ್ನೋ ಶೈಲಿಯಲ್ಲಿಯೇ ವ್ಯವಸ್ಥಾಪಕ ನಿರ್ದೇಶಕರು ಮಾತಾಡಿದ್ದಾರೆ. ಒಂದು ಕಡೆ ಬಸ್ಸಿನ ಮೇಲೆ ಕಂಡು ಬರುತ್ತಿರೋ ಜಾಹಿರಾತಿನ ಅಂಶದ ಬಗ್ಗೆ ಜನರಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಬಣ್ಣದ ಬಗೆಗಿನ ಸಿಟ್ಟು ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಆದಾಯವನ್ನೊಂದೇ ನೆಚ್ಚಿಕೊಂಡು ಸರಕಾರಿ ಬಸ್ಸುಗಳನ್ನು ಈ ದುಸ್ಥಿತಿಗೆ ತಂದಿರೋದು ಮಾತ್ರ ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.