ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್‌ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು!
ಹುಬ್ಬಳ್ಳಿ-ಧಾರವಾಡ ನಡುವೆ ತ್ವರಿತ ಸಂಪರ್ಕಕ್ಕಾಗಿ ಆರಂಭವಾದ ಐಷಾರಾಮಿ ಚಿಗರಿ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರೋದು ನಿರ್ವಹಣೆಯ ಹೊಣೆ ಹೊತ್ತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ತಲೆನೋವಾಗಿದೆ. ಬಿಡಿಭಾಗಗಳ ಕೊರತೆ ಮತ್ತು ವೋಲ್ವೋ ಸಂಸ್ಥೆಯ ಸ್ಪಂದನೆ ಇಲ್ಲದಿರುವುದು ಸಮಸ್ಯೆಯನ್ನು ಉಲ್ಬಣಿಸಿದೆ. ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಕೋಟಿಗಟ್ಟಲೆ ಹಣದಲ್ಲಿ ಖರೀದಿಸಿದ ಬಸ್‌ಗಳ ದುರಸ್ತಿಯೇ ಈಗ ಸವಾಲಾಗಿದೆ.

ಹುಬ್ಬಳ್ಳಿ, ಜನವರಿ 14: ಹುಬ್ಬಳ್ಳಿ-ಧಾರವಾಡದ ನಡುವೆ ತ್ವರಿತ ಸಂಪರ್ಕ ಒದಗಿಸಯವ ಉದ್ದೇಶದಿಂದ ಆರಂಭವಾಗಿರುವ ಐಷಾರಾಮಿ ಚಿಗರಿ ಬಸ್‌ಗಳ ನಿರ್ವಹಣೆಯೇ ಈಗ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಮಾರ್ಗ ಮಧ್ಯೆಯೇ ಬಸ್‌ಗಳು ಕೆಟ್ಟು ನಿಲ್ಲುತ್ತಿರೋದು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಜೊತೆಗೆ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ತಲೆನೋವು ತಂದಿಡುತ್ತಿದೆ. ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿದ್ದ ಐಷಾರಾಮಿ ಬಸ್‌ಗಳು ಡಕೋಟಾ ಬಸ್ಗಳಾಗಿ ಮಾರ್ಪಡುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮತ್ತು BRTS ಸಂಸ್ಥೆಗೆ NWKRTC ಪತ್ರ ಬರೆದಿದೆ ಎನ್ನಲಾಗಿದೆ.
ಪ್ರಯಾಣಿಕರ ಸಮಸ್ಯೆ ಮನಗಂಡ ಸರ್ಕಾರ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಧಾರವಾಡ ಹೊಸ ಬಸ್ ನಿಲ್ದಾಣದವರಗೆ ಬರೋಬ್ಬರಿ 22.5 ಕಿಲೋ ಮೀಟರ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡಿ, ಚಿಗರಿ ಹೆಸರಿನಲ್ಲಿ ಎಸಿ ಬಸ್ ಸೇವೆಯನ್ನು ಆರಂಭಿಸಿತ್ತು. 2018ರಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಿದ್ದು, ಪ್ರತಿನಿತ್ಯ ಹುಬ್ಬಳ್ಳಿ-ಧಾರವಾಡ ನಡುವೆ ನೂರು ಚಿಗರಿ ಬಸ್‌ಗಳು ಸಂಚಾರ ಶುರುವಾಗಿತ್ತು. ದಕ್ಷಿಣ ಭಾರತದಲ್ಲಿಯೇ ಮೊದಲ ಯೋಜನೆ ಎನ್ನುವ ಖ್ಯಾತಿಯನ್ನು BRTS ಪಡೆದುಕೊಂಡಿತ್ತು. ಆದ್ರೆ ಈಗ ನಿರ್ವಹಣೆಯ ಸಮಸ್ಯೆಯಿಂದ ಎಲ್ಲೆಂದರಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಕ್ಲಚ್ ಪ್ಲೇಟ್, ಗೇರ್ ಬಾಕ್ಸ್ ಸಮಸ್ಯೆ, ಇಂಜಿನ್ ಹೀಟ್ ಮತ್ತು ಸೆನ್ಸಾರ್ ಸಮಸ್ಯೆಗಳು ಮಾಮೂಲು ಎಂಬಂತಾಗಿವೆ. ಬಸ್ ರಿಪೇರಿಗೆ ಬಿಡಿಭಾಗಗಳು ಕೂಡ ಸರಿಯಾಗಿ ಲಭ್ಯವಿಲ್ಲದ ಹಿನ್ನೆಲೆ, ಈಗ ಪ್ರತಿನಿತ್ಯ 60ರಿಂದ 70 ಬಸ್ ಗಳು ಮಾತ್ರ ಓಡಾಟ ನಡೆಸುತ್ತಿವೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ; ಬಂದ್ ಆಗುತ್ತಾ ಚಿಗರಿ ಬಸ್ ಓಡಾಟ?
ಇನ್ನು ಈ ಬಸ್ಗಳನ್ನು ಪೂರೈಕೆ ಮಅಡಿರುವ ವೋಲ್ವೋ ಸಂಸ್ಥೆಗೆ ಮನವಿ ಮಾಡಿ, ಅಗತ್ಯ ಬಿಡಿ ಭಾಗಗಳನ್ನು ಕಳಿಸಿಕೊಡುವಂತೆ ಮನವಿ ಮಾಡಲಾಗಿದ್ದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಬಸ್‌ಗಳ ದುರಸ್ತಿಯೇ ಸವಾಲಾಗಿದೆ ಅಂತಿದ್ದಾರೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು. ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕೆ ಆರಂಭಿಸಿದ್ದ ಈ ಬಸ್ಗಳಿಗೆ ಜನರೇ ಹಿಡಿ ಶಾಪ ಹಾಕುವ ಸ್ಥಿತಿ ಉದ್ಭವಿಸಿದೆ. ಕೋಟಿ ಕೋಟಿ ಹಣ ನೀಡಿ ಖರೀದಿಸಿದ ಬಸ್‌ಗಳ ದುರಸ್ತಿಗೆ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.