AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಾಟವಲ್ಲ! ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ

ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳೇ ಸಹಪಾಠಿಯನ್ನು ಬರ್ಬರವಾಗಿ ಕೊಲೆ ಮಾಡಿದ ದಾರುಣ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಎಸ್​​ಎಸ್​ಎಲ್​ಸಿ ವಿದ್ಯಾರ್ಥಿ ನಿಂಗರಾಜ್ ಅವಾರಿ (16) ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗಿದೆ. ಸದ್ಯ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಹುಡುಗಾಟವಲ್ಲ! ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ
ನಿಂಗರಾಜ್ ಅವಾರಿ
ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 15, 2026 | 9:50 AM

Share

ಹುಬ್ಬಳ್ಳಿ, ಜನವರಿ 15: ಅವರೆಲ್ಲಾ ಶಾಲಾ ಬಾಲಕರು. ಎಸ್​​ಎಸ್​ಎಲ್​ಸಿ ಓದುತ್ತಿದ್ದ ಅವರೆಲ್ಲಾ ಇದೀಗ ಓರ್ವ ಬಾಲಕನ ಭವಿಷ್ಯವನ್ನೇ ಮಣ್ಣುಪಾಲು ಮಾಡಿದ್ದಾರೆ. ಅದರೊಟ್ಟಿಗೆ ತಮ್ಮ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಧಾರವಾಡ (Dharawad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಶಾಲಾ ಬಾಲಕರೇ SSLC ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಎಸ್​​ಎಸ್​ಎಲ್​ಸಿ ಓದುತ್ತಿದ್ದ ಬಾಲಕನನ್ನು ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ.

ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್​​ಎಸ್​ಎಲ್​ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಓರ್ವ ಬಾಲಕ ಸೇರಿದಂತೆ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.

ಬಾಲಕನ ಕೊಲೆಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ‌ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾಠಿಯೋರ್ವ ಎಸ್​​ಎಸ್​ಎಲ್​ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಅಶ್ಲೀಲ ನಿಂದನೆ ಮಾಡಿದ ಕಾಂಗ್ರೆಸ್ ಮುಖಂಡನಿಗೆ ಎದುರಾಯ್ತು ಎರಡೆರಡು ಸಂಕಷ್ಟ

ಕೊಲೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಮೂವರು ಬಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆಗೆ ಬೇರೆಯೇ ಕಾರಣಗಳಿವೆಯೇ ಎಂಬುದರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ