AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಖಜಾನೆಗೆ ಭರಪೂರ ತೆರಿಗೆ ಆದಾಯ: 7 ತಿಂಗಳಲ್ಲಿ ₹1.25 ಲಕ್ಷ ಕೋಟಿ ಸಂಗ್ರಹ

2026-27ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದ ಸ್ವಂತ ತೆರಿಗೆ ಆದಾಯ ₹1,24,986.94 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 16.58ರಷ್ಟು ಏರಿಕೆ ದಾಖಲಾಗಿದೆ. ಕೇಂದ್ರ ತೆರಿಗೆ ಹಂಚಿಕೆಯಲ್ಲೂ ಶೇ 24.46ರಷ್ಟು ಹೆಚ್ಚಳವಾಗಿದ್ದು, ತೆರಿಗೆಯೇತರ ಆದಾಯದಲ್ಲಿ ಶೇ 17.86ರಷ್ಟು ಕುಸಿತ ಕಂಡುಬಂದಿದೆ.

ಕರ್ನಾಟಕದ ಖಜಾನೆಗೆ ಭರಪೂರ ತೆರಿಗೆ ಆದಾಯ: 7 ತಿಂಗಳಲ್ಲಿ ₹1.25 ಲಕ್ಷ ಕೋಟಿ ಸಂಗ್ರಹ
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Edited By: |

Updated on: Nov 28, 2026 | 12:12 PM

Share

ಮುಖ್ಯಾಂಶಗಳು

  • ಕರ್ನಾಟಕದ ಸ್ವಂತ ತೆರಿಗೆ ಆದಾಯ ₹1.25 ಲಕ್ಷ ಕೋಟಿಗೆ ಸಮೀಪ
  • ಕಳೆದ ವರ್ಷಕ್ಕಿಂತ ತೆರಿಗೆ ಸಂಗ್ರಹದಲ್ಲಿ ಶೇ 16.58ರಷ್ಟು ಹೆಚ್ಚಳ
  • ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಶೇ 24.46ರಷ್ಟು ಗಣನೀಯ ಏರಿಕೆ

ಬೆಂಗಳೂರು, ನವೆಂಬರ್ 28: ಕರ್ನಾಟಕದ ಆದಾಯ ಸಂಗ್ರಹದಲ್ಲಿ 2026-27ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಅಕ್ಟೋಬರ್ 2026ರ ಅಂತ್ಯದ ವೇಳೆಗೆ ರಾಜ್ಯದ ಸ್ವಂತ ತೆರಿಗೆ ಆದಾಯ ₹1,24,986.94 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 16.58ರಷ್ಟು ಹೆಚ್ಚಳವಾಗಿದೆ. 2026-27ನೇ ಸಾಲಿಗೆ ಸರ್ಕಾರ ₹2.20 ಲಕ್ಷ ಕೋಟಿ ಸ್ವಂತ ತೆರಿಗೆ ಆದಾಯ ಸಂಗ್ರಹದ ಗುರಿ ನಿಗದಿಪಡಿಸಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಈ ಗುರಿಯ ಶೇ 56.81ರಷ್ಟು ಸಾಧನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯವು ₹1,07,215.22 ಕೋಟಿ ತೆರಿಗೆ ಆದಾಯ ಸಂಗ್ರಹಿಸಿತ್ತು.

ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ 16.08ರಷ್ಟು ಏರಿಕೆ

ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಕ್ಟೋಬರ್ ಅಂತ್ಯದ ವೇಳೆಗೆ ₹72,689.29 ಕೋಟಿ ಸಂಗ್ರಹವಾಗಿದೆ. ಇದು ವಾರ್ಷಿಕ ಗುರಿಯ ಶೇ 58.15ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹62,621.17 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಶೇ 16.08ರಷ್ಟು ಬೆಳವಣಿಗೆ ದಾಖಲಾಗಿದೆ.

ಅಬಕಾರಿ ಇಲಾಖೆಯಿಂದ ₹25,857 ಕೋಟಿ ಆದಾಯ

ಮದ್ಯ ಮಾರಾಟ ಮತ್ತು ಪರವಾನಗಿ ಶುಲ್ಕಗಳ ಮೂಲಕ ರಾಜ್ಯ ಅಬಕಾರಿ ಇಲಾಖೆಯು ₹25,857.09 ಕೋಟಿ ಆದಾಯ ಸಂಗ್ರಹಿಸಿದೆ. ಇದು ವಾರ್ಷಿಕ ಗುರಿಯ ಶೇ 57.46ರಷ್ಟಾಗಿದೆ.

ಮುದ್ರಾಂಕ, ನೋಂದಣಿ ಆದಾಯದಲ್ಲೂ ಹೆಚ್ಚಳ

ಆಸ್ತಿ ಖರೀದಿ ಮತ್ತು ನೋಂದಣಿ ಚಟುವಟಿಕೆಗಳಿಂದ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಆದಾಯ ₹17,327.55 ಕೋಟಿಗೆ ಏರಿಕೆಯಾಗಿದೆ. ಇಲಾಖೆಯು ವಾರ್ಷಿಕ ಗುರಿಯ ಶೇ 59.75ರಷ್ಟು ಸಾಧಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.43ರಷ್ಟು ಬೆಳವಣಿಗೆ ಕಂಡಿದೆ.

ಮೋಟಾರು ವಾಹನ ತೆರಿಗೆ ಸಂಗ್ರಹದಿಂದ ₹8,454.36 ಕೋಟಿ ಆದಾಯ ಬಂದಿದೆ. ಇದು ವಾರ್ಷಿಕ ಗುರಿಯ ಶೇ 54.54ರಷ್ಟಾಗಿದೆ. ಇತರೆ ತೆರಿಗೆ ಮೂಲಗಳಿಂದ ₹658.65 ಕೋಟಿ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ 11.98ರಷ್ಟು ಸಾಧನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಶೇ 26.09ರಷ್ಟು ಬೆಳವಣಿಗೆ ದಾಖಲಾಗಿದೆ.

ತೆರಿಗೆಯೇತರ ಆದಾಯದಲ್ಲಿ ಶೇ 17.86ರಷ್ಟು ಕುಸಿತ

ರಾಜ್ಯದ ಸ್ವಂತ ತೆರಿಗೆಯೇತರ ಆದಾಯ ₹9,092.25 ಕೋಟಿಗೆ ಸೀಮಿತವಾಗಿದೆ. ಇದು ವಾರ್ಷಿಕ ಗುರಿಯ ಶೇ 56.83ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹11,068.72 ಕೋಟಿ ಸಂಗ್ರಹವಾಗಿತ್ತು. ಈ ಬಾರಿ ತೆರಿಗೆಯೇತರ ಆದಾಯದಲ್ಲಿ ಶೇ 17.86ರಷ್ಟು ಕುಸಿತ ಕಂಡುಬಂದಿದೆ.

ಖನಿಜ, ಸೇವಾ ಶುಲ್ಕ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಲಾಭಾಂಶ ಸೇರಿದಂತೆ ತೆರಿಗೆಯೇತರ ಆದಾಯ ಮೂಲಗಳಲ್ಲಿನ ಕುಸಿತದ ಬಗ್ಗೆ ಮುಂದಿನ ತಿಂಗಳುಗಳಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ.

ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಶೇ 24.46ರಷ್ಟು ಹೆಚ್ಚಳ

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯ ರೂಪದಲ್ಲಿ ಕರ್ನಾಟಕಕ್ಕೆ ₹37,899.72 ಕೋಟಿ ದೊರೆತಿದೆ. ಇದು ವಾರ್ಷಿಕ ಗುರಿಯ ಶೇ 60.11ರಷ್ಟಾಗಿದೆ. ಕಳೆದ ವರ್ಷದ ₹30,450.95 ಕೋಟಿಗೆ ಹೋಲಿಸಿದರೆ ಶೇ 24.46ರಷ್ಟು ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ದೊರೆತ ಅನುದಾನ ಹಾಗೂ ಕೊಡುಗೆಗಳ ಮೊತ್ತ ₹6,331.69 ಕೋಟಿಯಾಗಿದೆ. ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಶೇ 0.40ರಷ್ಟು ಮಾತ್ರ ಬೆಳವಣಿಗೆ ದಾಖಲಾಗಿದೆ.

ಇದನ್ನೂ ಓದಿ: ಉಚಿತ ಕೊಟ್ಟು ಸಾರ್ವಜನಿಕರ ದರೋಡೆ: ರಾಜ್ಯ ಸರ್ಕಾರ ಹಾಕುವ ಪ್ರತಿಯೊಂದು ತೆರಿಗೆಯ ಪಕ್ಕಾ ಲೆಕ್ಕ ಕೊಟ್ಟ ಪ್ರಲ್ಹಾದ್ ಜೋಶಿ

ಒಟ್ಟಾರೆ, ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯದ ಪ್ರಮುಖ ತೆರಿಗೆ ಮೂಲಗಳು ವಾರ್ಷಿಕ ಗುರಿಯ ಶೇ.55ರಿಂದ 60ರ ನಡುವೆ ಸಾಧನೆ ಮಾಡಿವೆ. ಸ್ವಂತ ತೆರಿಗೆ ಆದಾಯ ಮತ್ತು ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕಂಡುಬಂದ ಬೆಳವಣಿಗೆ ರಾಜ್ಯದ ಆದಾಯ ಸಂಗ್ರಹಕ್ಕೆ ಬಲ ನೀಡಿದೆ. ಇದೇ ವೇಗ ಮುಂದುವರಿದರೆ 2026-27ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸರ್ಕಾರ ತನ್ನ ಆದಾಯ ಗುರಿಗಳನ್ನು ಸಾಧಿಸುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More