ಧಾರವಾಡದಲ್ಲಿ ನೈಸರ್ಗಿಕವಾಗಿ ಬೆಳೆದ ಆಲ್ಫೊನ್ಸೋ ಮಾವಿನ ಮೇಳ; ಕೆ.ಜಿ ಗೆ ಎಷ್ಟು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: May 01, 2024 | 6:36 PM

ಧಾರವಾಡದಲ್ಲಿ 25,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ 'ಧಾರವಾಡ ಆಪೂಸಾ'' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಲ್ಫೊನ್ಸೋವನ್ನು ಬೆಳೆಯಲಾಗುತ್ತದೆ. ಅದರಂತೆ ಗುಣಾತ್ಮಕ ಮತ್ತು ರಾಸಾಯನಿಕ ಮುಕ್ತ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಮತ್ತು ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ಧಾರವಾಡದಲ್ಲಿ ನೈಸರ್ಗಿಕವಾಗಿ ಮಾಗಿದ ಆಲ್ಫೊನ್ಸೋ ಮಾವಿನ ಮೇಳ ಆಯೋಜಿಸಲಾಗಿದ್ದು, ಈ ಕುರಿತು ಇಲ್ಲಿದೆ ಮಾಹಿತಿ.

ಧಾರವಾಡದಲ್ಲಿ ನೈಸರ್ಗಿಕವಾಗಿ ಬೆಳೆದ ಆಲ್ಫೊನ್ಸೋ ಮಾವಿನ ಮೇಳ; ಕೆ.ಜಿ ಗೆ ಎಷ್ಟು ಗೊತ್ತಾ?
ಧಾರವಾಡದಲ್ಲಿ ನೈಸರ್ಗಿಕವಾಗಿ ಮಾಗಿದ ಆಲ್ಫೊನ್ಸೋ ಮಾವಿನ ಮೇಳ
Follow us on

ಧಾರವಾಡ, ಮೇ.01: ಗುಣಾತ್ಮಕ ಮತ್ತು ರಾಸಾಯನಿಕ ಮುಕ್ತ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮತ್ತು ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ಮಾವು ಬೆಳೆಗಾರರು ಮತ್ತು ಬಾಗಲಕೋಟೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರು ಒಗ್ಗೂಡಿ, ಧಾರವಾಡ ನಗರದ ಕೋರ್ಟ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಷ್ಠಾನದ ಆವರಣದಲ್ಲಿ ಆಲ್ಫೊನ್ಸೋ ಮಾವಿನ(Alphonso mango) ಮೇಳ ನಡೆಸಿದ್ದಾರೆ. ಇದು ಬರೊಬ್ಬರಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ರತ್ನಗಿರಿಯ ನಂತರ, ಧಾರವಾಡದಲ್ಲಿ ಮಾತ್ರ ಸಮೃದ್ಧ ವಿಧದ ಆಲ್ಫೊನ್ಸೋ ಗುಣಮಟ್ಟದ ಮಾವನ್ನು ಬೆಳೆಯಲಾಗುತ್ತದೆ.

25 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಆಲ್ಫೊನ್ಸೋ ಮಾವು

ಧಾರವಾಡದಲ್ಲಿ 25,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ‘ಧಾರವಾಡ ಆಪೂಸಾ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಲ್ಫೊನ್ಸೋವನ್ನು ಬೆಳೆಯಲಾಗುತ್ತದೆ. ಜೋಗ್ಯೆಲ್ಲಾಪುರ, ಕೆಲಗೇರಿ, ತೇಗೂರು, ಅಂಬ್ಲಿಕೊಪ್ಪ, ಹಳ್ಳಿಗೇರಿ, ಮನ್ಸೂರ್, ಮುಗದ್, ಮಂಡಿಹಾಳ್, ದೇವಗಿರಿ, ನವಲೂರು, ಇಟ್ಟಿಗಟ್ಟಿ, ಯರಿಕೊಪ್ಪ, ಕಲಕೇರಿ, ಕ್ಯಾರಕೊಪ್ಪ ಮತ್ತಿತರ ಪ್ರದೇಶಗಳನ್ನು ಆಲ್ಫೊನ್ಸೋ ಮಾವು ಬೆಳೆಯುವ ಪ್ರದೇಶ ಎಂದು ಕರೆಯಲಾಗುತ್ತದೆ. ಈ ವರ್ಷ 1.50 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿದೆ. ಆದರೆ, ಬರಗಾಲ ಹಾಗೂ ವಿಪರೀತ ಬಿಸಿಲಿನ ಪರಿಸ್ಥಿತಿಯಿಂದಾಗಿ ಶೇ.35ರಷ್ಟು ಇಳುವರಿ ಕೊರತೆಯಾಗಿದೆ. ಇದು ಬೆಲೆ ಏರಿಕೆಗೂ ಕಾರಣವಾಗಿದೆ.

ಇದನ್ನೂ ಓದಿ:ಕೋಲಾರ: ಸುಡು ಬಿಸಿಲಿಗೆ ಉದುರಿದ ಮಾವು! ಬಾಡಿದ ರೈತರ ಬದುಕು 

‘ಹಣ್ಣಿನ ರಾಜ’ ಕೆಜಿಗೆ 700 ರೂಪಾಯಿವರೆಗೆ ಮಾರಾಟ

ಮಾರುಕಟ್ಟೆಯಲ್ಲಿ ಕೆಜಿಗೆ 700 ರೂಪಾಯಿವರೆಗೆ ಮಾವಿನಹಣ್ಣು ಮಾರಾಟವಾಗುತ್ತಿದೆ. ಈ ಹಣ್ಣಿಗೆ ಜನರು ಇಷ್ಟೊಂದು ಬೆಲೆ ತೆರುತ್ತಿದ್ದರೂ ರಾಸಾಯನಿಕ ಯುಕ್ತವಾಗಿ ಮಾಗಿದ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಹಲವರು ನಿರಾಸೆಗೊಂಡಿದ್ದಾರೆ. ಈ ಹಣ್ಣು ನೈಸರ್ಗಿಕ ರುಚಿಯನ್ನು ಹೊಂದಿರುವುದಿಲ್ಲ. ಇದೇ ಕಾರಣಕ್ಕೆ ಇದನ್ನು ಈ ಮೇಳ ಮಾಡೋ ಮೂಲಕ ಹಣ್ಣಿನ ವಿಶಿಷ್ಟ ರುಚಿಯನ್ನು ಕಂಡುಕೊಳ್ಳಲು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಸಾವಯವ ಪದ್ಧತಿಯಲ್ಲಿ ಹಣ್ಣನ್ನು ಬೆಳೆದು ನೈಸರ್ಗಿಕವಾಗಿ ಮಾಗಿಸಿದ ಹತ್ತಕ್ಕೂ ಹೆಚ್ಚು ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿಕೊಂಡಿದ್ದಾರೆ.
ಮೇಳದ ಮೊದಲ ದಿನದಂದು ಹಣ್ಣನ್ನು ಖರೀದಿಸಲು ಸಾಕಷ್ಟು ಗ್ರಾಹಕರು ಮುಗಿಬಿದ್ದಿದ್ದರು.

ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಹುಡುಕಲು ಸಹಾಯ ಈ ಮೇಳ

ಕೃಷಿ ತಜ್ಞ ಹಾಗೂ ವಾಲ್ಮಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ರಾಜೇಂದ್ರ ಪೊದ್ದಾರ್ ಟಿವಿ9 ಡಿಜಿಟಲ್ ಜೊತೆ ಮಾತನಾಡಿ, ‘ಮಾವು ಬೆಳೆಗಾರರು ವಾಣಿಜ್ಯೀಕರಣ ಹಾಗೂ ಹವಾಮಾನ ಬದಲಾವಣೆಯಿಂದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೇರೆ ರಾಜ್ಯಗಳ ಗುತ್ತಿಗೆದಾರರು ಮಾವಿನ ತೋಪು ಹೂ ಬಿಡಲು ಆರಂಭಿಸಿದ ಕೂಡಲೇ ಕಡಿಮೆ ಬೆಲೆಗೆ ಗುತ್ತಿಗೆ ಪಡೆಯುತ್ತಿದ್ದಾರೆ. ಮಾರುಕಟ್ಟೆ ವಿಶ್ಲೇಷಣೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ, ಬಡ ರೈತರು ತಮ್ಮ ತೋಪುಗಳನ್ನು ಗುತ್ತಿಗೆಗೆ ನೀಡುತ್ತಿದ್ದಾರೆ ಮತ್ತು ಕಡಿಮೆ ಬೆಲೆಯನ್ನು ಪಡೆಯುತ್ತಿದ್ದಾರೆ. ಆದ್ದರಿಂದ, ಬೆಳೆಗಾರರಿಗೆ ವೈಜ್ಞಾನಿಕ ಬೆಲೆಯನ್ನು ಪಡೆಯಲು ಮತ್ತು ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಹುಡುಕಲು ಸಹಾಯ ಮಾಡಲು, ಮಾವು ಮೇಳವನ್ನು ಪ್ರಾರಂಭಿಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ತಜ್ಞರು ಮಾವಿನ ತೋಪುಗಳಿಗೆ ಭೇಟಿ ನೀಡಿ ಹವಾಮಾನ ಬದಲಾವಣೆಯಿಂದ ಹಣ್ಣನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಬೆಳೆಗಾರರಿಗೆ ಮಾಹಿತಿ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ ಎಂದರು.

ಇಳುವರಿ ಕಡಿಮೆ, ಬೆಲೆ ಏರಿಕೆ

ಈ ವರ್ಷ ಬಿಸಿಲಿನ ಝಳದಿಂದಾಗಿ ಇಳುವರಿ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ‘ಧಾರವಾಡದ ಆಪೋಸಾ’ಅನ್ನು ಯುಎಸ್ಎ, ಆಸ್ಟ್ರೇಲಿಯಾ, ಇಟಲಿ, ಯುನೈಟೆಡ್ ಕಿಂಗ್‌ಡಮ್, ಸಿಂಗಾಪುರ್, ಮಲೇಷ್ಯಾ ಮತ್ತು ಮೆಟ್ರೋಪಾಲಿಟನ್ ಸಿಟಿಗಳಿಗೆ ರಫ್ತು ಮಾಡಲಾಗುತ್ತಿದೆ. ಆದರೆ, ಈ ಚಟುವಟಿಕೆಯನ್ನು ದೊಡ್ಡ ಲಾಭ ಗಳಿಸುವ ಮಧ್ಯವರ್ತಿಗಳು ಕೈಗೆತ್ತಿಕೊಂಡಿದ್ದಾರೆ. ಮಾವು ಬೆಳೆಗಾರರ ಬಳಗ ರೈತರ ನೆರವಿಗೆ ಧಾವಿಸಿದ್ದು, ಬೆಳೆಗಾರರಿಂದ ಸೇವಾ ಶುಲ್ಕ ಪಡೆಯದೆ ಹಣ್ಣು ರಫ್ತು ಮಾಡಲಾಗುತ್ತಿದೆ. ಹಣ್ಣನ್ನು ಬ್ರಾಂಡ್ ಮಾಡುವಲ್ಲಿಯೂ ಸಂಸ್ಥೆ ಸಹಾಯ ಮಾಡುತ್ತಿದೆ. ‘ಮೈ ಮ್ಯಾಂಗೋ’ ಎಂಬ ಹೆಸರಿನ ಮ್ಯಾಂಗೋ ಬಾಕ್ಸ್ ಗಳು ರಫ್ತಾಗುತ್ತಿವೆ. ಮೇಳದಲ್ಲಿ ಆಲ್ಫೊನ್ಸೋ ತಳಿಯ ಮಾವಿನ ಹಣ್ಣುಗಳನ್ನು ಮಾತ್ರ ಮಾರಾಟಕ್ಕೆ ಇಡಲಾಗಿದೆ. ‘ಎ’ ಗುಣಮಟ್ಟದ ಹಣ್ಣಿಗೆ ಡಜನ್‌ಗೆ 700 ರೂ., ಕಡಿಮೆ ಗುಣಮಟ್ಟದ ಹಣ್ಣುಗಳಿಗೆ ಡಜನ್‌ಗೆ 400 ರಿಂದ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Wed, 1 May 24