ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್ ಆಸ್ಪತ್ರೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಡಿಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ರಾಜ್ಯದ ಗಮನ ಸೆಳೆಯುತ್ತಿದೆ. ಕೊವಿಡ್ ಎರಡನೇ ಅಲೆಯ ಸಮಯದಲ್ಲೂ ನಾನ್ ಕೊವಿಡ್ ರೋಗಿಗಳ ಆರೈಕೆ ವಿಚಾರದಲ್ಲಿ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವಿವಿಧ ವಿಭಾಗದ ಶಸ್ತ್ರ ಚಿಕಿತ್ಸೆ ನೀಡುವ ವಿಚಾರದಲ್ಲಿ ರಾಜ್ಯದಲ್ಲಿಯೇ ಕಿಮ್ಸ್ ಮೊದಲನೇ ಸ್ಥಾನ ಗಳಿಸಿ ಎಲ್ಲರ ಹುಬ್ಬೇರಿಸುವಂತ ಸಾಧನೆ ಮಾಡಿದೆ.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ(ಎಬಿಎಆರ್‌ಕೆ) ಯೋಜನೆಯಲ್ಲಿ ಅತಿ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ನೇರವೇರಿಸಿ ಕರ್ನಾಟಕದಲ್ಲಿಯೇ ಅಗ್ರಸ್ಥಾನವನ್ನು ಪಡೆಯುವಲ್ಲಿ ಕಿಮ್ಸ್ ಸಫಲವಾಗಿದೆ. ಹಾಗೇ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯು ಎರಡನೇಯ ಸ್ಥಾನವನ್ನು ಗಳಿಸಿದೆ. ಈ ರ್ಯಾಕಿಂಗ್‌ನ ಪಟ್ಟಿಯನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.
ರಾಜ್ಯದಲ್ಲಿರುವ ಪ್ರತಿಯೊಂದು ವೈದ್ಯಕೀಯ ವಿಜ್ಞಾನ ಕಾಲೇಜುಗಳ ಪ್ರಸೂತಿ, ಸ್ತ್ರಿರೋಗ, ಎಲುಬು ಕೀಲು, ಜನರಲ್ ಮೆಡಿಸೀನ್ ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು ಸೇರಿ ಒಟ್ಟು 20 ವಿಭಾಗಗಳಲ್ಲಿ 12851 ರೋಗಿಗಳಿಗೆ ಕಿಮ್ಸ್ನಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಇದರಿಂದ ಕಿಮ್ಸ್‌ಗೆ ಎಬಿಎಆರ್‌ಕೆ ಯೋಜನೆಯಿಂದ ಬರೋಬ್ಬರಿ 19,01,48,997 ರೂಪಾಯಿ ಖಾತೆಗೆ ಜಮೆಯಾಗಿದೆ. ಇಷ್ಟೊಂದು ಮೊತ್ತದ ಹಣ ರಾಜ್ಯದ ಬೇರೆ ಯಾವುದೇ ವೈದ್ಯಕೀಯ ಕಾಲೇಜಿಗೆ ಜಮೆಯಾಗಿಲ್ಲ ಎನ್ನುವುದು ವಿಶೇಷ.
ಮೊದಲೇಲ್ಲಾ ನಮ್ಮ ಸಂಸ್ಥೆ ರಾಜ್ಯದಲ್ಲಿಯೇ 2ನೇ ಅಥವಾ 3ನೇ ಸ್ಥಾನ ಪಡೆಯುತ್ತಿತ್ತು. ಎಲ್ಲಾ ಕಡೆಯಲ್ಲಿ ಎಬಿಎಆರ್‌ಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಯೋಜನೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಹೀಗಾಗಿ ರೆೋಗಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಈ ಯೋಜನೆ ಯಶಸ್ವಿಯಾಗಲು ಸಂಸ್ಥೆಯ ಆಡಳಿತ ಮಂಡಳಿಯ ಶ್ರಮ, ವೈದ್ಯರ ಪರಿಶ್ರಮ ಹೆಚ್ಚಿದೆ ಎಂದು ಕಿಮ್ಸ್ ಸಿಎಓ ರಾಜಶ್ರೀ ಜೈನಾಪುರ್ ತಿಳಿಸಿದ್ದಾರೆ.
ವರದಿ: ರಹಮತ್ ಕಂಚಗಾರ್
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಭೂಮಿಪೂಜೆ