ಬಡತನದಲ್ಲಿ ಅರಳಿದ ಪ್ರತಿಭೆ: ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ಅಚ್ಚರಿ ಮೂಡಿಸಿದ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಮಗ

|

Updated on: May 23, 2023 | 7:54 PM

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸಿದ್ದಲಿಂಗಪ್ಪ ಕೆ ಪೂಜಾರ್​ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 589 ರ‍್ಯಾಂಕ್​​ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.​

ಧಾರವಾಡ: ಸೋಮವಾರ 2022 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಿಂದ 25 ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸಿದ್ದಲಿಂಗಪ್ಪ ಕೆ ಪೂಜಾರ್ (Siddalingappa K Poojar)​ ಅವರು 589 ರ‍್ಯಾಂಕ್​​ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.​ ಧಾರವಾಡ ಜಿಲ್ಲೆಯೊಂದರ ತೀರಾನೇ ಹಿಂದುಳಿದ ಪ್ರದೇಶ ಅಂತಾ ಕರೆಯಿಸಿಕೊಳ್ಳೋ ಅಣ್ಣಿಗೇರಿಯಲ್ಲಿಯೇ ಎಸ್.ಎಸ್.ಎಲ್.ಸಿ. ಯಲ್ಲಿ ಓದಿದ ಆತ ಬಳಿಕ ಬೆಂಗಳೂರಿಗೆ ಹೋಗಿ ಮುಂದಿನ ಅಭ್ಯಾಸ ಮಾಡಿದ್ದ. ತೀರಾನೇ ಸಾಮಾನ್ಯ ಕುಟುಂಬದ ಈ ಯುವಕನ ಸಾಧನೆ ಇವತ್ತು ಎಲ್ಲರಿಗೂ ಅಚ್ಚರಿ ತಂದಿದೆ.

ಕರಿಸಿದ್ಧಪ್ಪ ಹಾಗೂ ಶಾಂತವ್ವ ದಂಪತಿಯ ಹಿರಿಯ ಮಗ ಸಿದ್ದಲಿಂಗಪ್ಪ ಕೆ ಪೂಜಾರ್. ಎಸ್.ಎಸ್.ಎಲ್.ಸಿ. ವರೆಗೂ ಅಣ್ಣಿಗೇರಿಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಓದಿದ ಸಿದ್ಧಲಿಂಗಪ್ಪ ಬಳಿಕ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿಗೆ ಹೋಗಿ ಪಿಯುಸಿ ಮುಗಿಸಿದ್ದಾರೆ. ಈತನ ತಂದೆ ಕೆಎಸ್​​ಆರ್​ಟಿಸಿಯಲ್ಲಿ ಕಂಡಕ್ಟರ್ ಆಗಿದ್ದಾರೆ. ತಾಯಿ ಕೃಷಿಕರು. ಇರೋ ಕೊಂಚ ಭೂಮಿಯಲ್ಲಿಯೇ ಕೃಷಿ ಮಾಡೋ ಕುಟುಂಬದಲ್ಲಿ ಈತನ ಇನ್ನೊಬ್ಬ ತಮ್ಮ ಚಾಲಕನಾಗಿದ್ದರೆ, ಮತ್ತೊಮ್ಮ ತಮ್ಮ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: UPSC 2022 toppers from Karnataka: KSRTC ಬಸ್ ಚಾಲಕನ ಮಗ ಸೇರಿದಂತೆ 25 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ

ಪಿಯುಸಿ ಬಳಿಕ ಸಿದ್ದಲಿಂಗಪ್ಪ ಅದೇ ಕಾಲೇಜಿನಲ್ಲಿ ಬಿಇ ಹಾಗೂ ಎಂ.ಟೆಕ್ ಮಾಡಿದ. ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಮಾಡಲು ಶುರು ಮಾಡಿದ. ಮೊದಲಿನಿಂದಲೂ ಓದಿನಲ್ಲಿ ಬುದ್ಧಿವಂತನಾಗಿದ್ದ ಸಿದ್ದಲಿಂಗಪ್ಪನಿಗೆ ಯುಪಿಎಸ್ಸಿ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಹೇಗಾದರೂ ಮಾಡಿ ಯುಪಿಎಸ್ಸಿಯಲ್ಲಿ ಪಾಸಾಗಬೇಕು ಅಂತಾ ಕೆಲಸದಿಂದ ಮನೆಗೆ ಬಂದ ಬಳಿಕ ಅಭ್ಯಾಸ ಮಾಡುತ್ತಿದ್ದ. ಹೀಗೆ ಕಷ್ಟಪಟ್ಟು ಅಧ್ಯಯನ ಮಾಡಿ ಯುಪಿಎಸ್ಸಿ ಪರೀಕ್ಷೆ ಬರೆದ ಮೊದಲ ಬಾರಿಯಲ್ಲಿಯೇ ಸಿದ್ದಲಿಂಗಪ್ಪ 589 ನೇ ರಾಂಕ್ ನಲ್ಲಿ ಪಾಸಾಗಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಇತ್ತ ಅಣ್ಣಿಗೇರಿಯ ಆತನ ಮನೆಯಲ್ಲಿ ತಾಯಿಗೆ ಈ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ತಮ್ಮ ಮಗ ಏನು ಕಲಿಯುತ್ತಿದ್ದ, ಏನು ಕಲಿತಿದ್ದಾನೆ ಮತ್ತು ಇದೀಗ ಯಾವುದರಲ್ಲಿ ಪಾಸಾಗಿದ್ದಾನೆ ಅನ್ನೋದೇ ತಾಯಿ ಶಾಂತಮ್ಮ ಅವರಿಗೆ ಗೊತ್ತಿಲ್ಲವಂತೆ.

ಸಿದ್ದಲಿಂಗಪ್ಪನಿಗೆ ಎಂ.ಟೆಕ್ ಮುಗಿಸುತ್ತಲೇ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಕ್ಕಿತು. ಇದೇ ವೇಳೆ ಏನಾದರೂ ಮಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಲೇ ಬೇಕು ಅಂತಾ ಹಠ ಹಿಡಿದು ಓದಿದ ಸಿದ್ದಲಿಂಗಪ್ಪ ಇದೀಗ ತಾನು ಹಿಡಿದ ಹಠದಲ್ಲಿ ಸಾಧನೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಇತ್ತ ಮನೆಯಲ್ಲಿ ತಮ್ಮ ಮಗನ ಸಾಧನೆ ಬಗ್ಗೆ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬಳಿಕವಷ್ಟೇ ಗೊತ್ತಾಗಿದೆ. ತೀರಾನೇ ಚಿಕ್ಕ ಮನೆಯಲ್ಲಿ ಸಿದ್ದಲಿಂಗಪ್ಪನ ತಂದೆ-ತಾಯಿ, ಸಹೋದರರು ವಾಸವಾಗಿದ್ದಾರೆ. ಇನ್ನು ಸುದ್ದಿ ಗೊತ್ತಾಗುತ್ತಲೇ ಸುತ್ತಮುತ್ತಲಿನ ಜನರೆಲ್ಲಾ ಬಂದು ಕುಟುಂಬಸ್ಥರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: UPSC Exam 2022 Results: UPSC ಪರೀಕ್ಷೆಯಲ್ಲಿ 362ನೇ ರ‍್ಯಾಂಕ್ ಪಡೆದ ಬೆಳಗಾವಿಯ ಶ್ರುತಿ ಯರಗಟ್ಟಿ

ಎಷ್ಟೋ ಯುವಕರಿಗೆ ತಾವು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಅಂತಾ ಕನಸು ಇರುತ್ತೆ. ಆದರೆ ಅದರಲ್ಲಿ ಅನೇಕರು ಸಫಲರಾಗೋದೇ ಇಲ್ಲ. ಅಲ್ಲದೇ ಎಷ್ಟೋ ಯುವಕರು ವರ್ಷಗಟ್ಟಲೇ ಕಷ್ಟಪಟ್ಟು ಓದೋದಲ್ಲದೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಕೂಡ ಪಡೆಯುತ್ತಾರೆ. ಇಷ್ಟೆಲ್ಲಾ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ ತೀರಾನೇ ಸಾಮಾನ್ಯ ಕುಟುಂಬದಿಂದ ಬಂದಿರುವ ಸಿದ್ದಲಿಂಗಪ್ಪ ಇವತ್ತು ತನ್ನ ಸಾಧನೆಯಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮವಾದ ಹುದ್ದೆ ಲಭಿಸಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ತಮ್ಮೂರಿನ ಹೆಸರನ್ನು ಪ್ರಸಿದ್ಧಿಗೊಳಿಸಲಿ ಅನ್ನೋದೇ ಅಣ್ಣಿಗೇರಿ ಜನರ ಆಶಯವಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ