ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಎಂಬ ಪುಟ್ಟ ಗ್ರಾಮ. ಈ ಗ್ರಾಮದಲ್ಲಿಯೇ ಈಗ ರಾಜ್ಯ ರಾಜಕಾರಣದ ಭವಿಷ್ಯ ಗೋಚರಿಸಿದೆ. ಹೌದು ಪ್ರತಿವರ್ಷ ಯುಗಾದಿಯಂದು ಈ ಗ್ರಾಮದಲ್ಲಿ ಒಂದು ಸಂಪ್ರದಾಯ ನಡೆದುಕೊಂಡು ಬಂದಿದೆ. ಅದರಡಿಯಲ್ಲಿಯೇ ಈಗ ರಾಜಕೀಯ ಭವಿಷ್ಯ ಗೋಚರಿಸಿದೆ. ಯುಗಾದಿ ಅಮವಾಸ್ಯೆಯಂದು ಗ್ರಾಮದ ತುಪ್ಪರಿ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ನಾಲ್ಕು ಸೇನಾಧಿಪತು ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಮಾರನೆ ದಿನ ಬೆಳಿಗ್ಗೆ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ.
ಪ್ರಸಕ್ತ ವರ್ಷದ ಭವಿಷ್ಯ ಹೀಗಿದೆ
ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಪ್ರತಿನಿಧಿಸುವ ಸೇನಾಧಿಪತಿ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ತಲೆ ಮೇಲಿನ ಟೋಪಿ ಹಿಂಭಾಗಕ್ಕೆ ಸರಿದಿದೆ. ಇದು ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬಹುದು ಎಂದು ಸೂಚಿಸುತ್ತೆ ಎನ್ನುತ್ತಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಹತ್ಯೆ ಹಾಗೂ ರಾಜಶೇಖರ ರೆಡ್ಡಿ ವಿಮಾನ ಅಪಘಾತದಲ್ಲಿ ಮೃತಪಟ್ಟ ವರ್ಷ ಆಯಾ ದಿಕ್ಕಿನ ಬೊಂಬೆ ಸಂಪೂರ್ಣ ಹಾಳಾಗಿತ್ತಂತೆ. ಆಯಾ ದಿಕ್ಕಿನ ನಾಯಕರ ಜೀವಕ್ಕೆ ಅಪಾಯ ಎಂದು ಈ ಗ್ರಾಮಸ್ಥರು ಹೇಳಿದ್ದರು. ಅದು ನಿಜವಾಗಿತ್ತು. ಇನ್ನು ಎರಡು ವರ್ಷದ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ, ಈಗ ಧಕ್ಕೆಯಾಗಿರುವ ಕರ್ನಾಟಕ ದಿಕ್ಕಿನ ಗೊಂಬೆ ಕಾಲಿಗೆ ಪೆಟ್ಟಾಗಿತ್ತು. ಅದಾದ ನಾಲ್ಕು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದಿದ್ದರು.
ಇದನ್ನೂ ಓದಿ:ಬಾಗಲಕೋಟೆ: ಗುಳೇದಗುಡ್ಡದ ಇಲಾಳ ಮೇಳದಿಂದ ಹೊರಬಿದ್ದ ವರ್ಷದ ಮಳೆ, ಬೆಳೆ ಫಲ ಭವಿಷ್ಯ
ನೂರು ವರ್ಷಗಳ ಹಿಂದಿನ ಇತಿಹಾಸ ಈ ಬೊಂಬೆ ಭವಿಷ್ಯಕ್ಕಿದೆ
ಇನ್ನು ಇದಕ್ಕೆ ಗ್ರಾಮಸ್ಥರು ಯುಗಾದಿ ಫಲಾಫಲ ಭವಿಷ್ಯ ಎಂದು ಕರೆಯುತ್ತಾರೆ. ಸುಮಾರು ನೂರು ವರ್ಷಗಳ ಹಿಂದಿನ ಇತಿಹಾಸ ಈ ಬೊಂಬೆ ಭವಿಷ್ಯಕ್ಕಿದೆ. ಹಿಂದೊಮ್ಮೆ ಗ್ರಾಮದಲ್ಲಿ ಬರಗಾಲ ಬಂದಿದ್ದಾಗ ಗ್ರಾಮದಲ್ಲಿದ್ದ ಚಿದಂಬರ ಶಾಸ್ತ್ರಿ ಎನ್ನುವವರು ಶೃಂಗ ಋಷಿಯ ಮಣ್ಣಿನ ಮೂರ್ತಿ ಮಾಡಿ ತಪಸ್ಸು ಮಾಡಿದ್ದರಂತೆ ಆಗ ಗ್ರಾಮದ ಸುತ್ತಮುತ್ತ ಮಳೆ ಆಗಿತ್ತು. ಬಳಿಕ ವರ್ಷಕ್ಕೊಮ್ಮೆ ಯುಗಾದಿ ಅಮಾವಾಸ್ಯೆ ದಿನ ಹೀಗೆ ಮಾಡುತ್ತ ಬನ್ನಿ ಎಂಬ ಸಂಪ್ರದಾಯ ಹೇಳಿಕೊಟ್ಟಿದ್ದರಂತೆ. ಅದನ್ನೇ ಈಗ ಗ್ರಾಮಸ್ಥರು ಪಾಲಿಸಿಕೊಂಡು ಬಂದಿದ್ದಾರೆ. ಇನ್ನು ಈ ಗ್ರಾಮದ ಬಳಿ ತುಪ್ಪರಿಹಳ್ಳ ಉತ್ತರಾಭಿಮುಖವಾಗಿ ಹರಿಯುತ್ತದೆ. ಅಲ್ಲಿ ಮಾಡಿದ್ರೆ ಮಾತ್ರ ಈ ಫಲಾಫಲ ಗೊತ್ತಾಗುತ್ತದೆಯಂತೆ. ಅದರಲ್ಲಿಯೂ ಆಯಾ ವರ್ಷದ ಮುಂಗಾರು, ಹಿಂಗಾರು ಮಳೆ ಪ್ರಮಾಣ, ಯಾವ ಬೆಳೆಗೆ ಬೇಡಿಕೆ ಬರಬಹುದು ಎಂಬುದೆಲ್ಲವನ್ನೂ ಇಲ್ಲಿ ಗ್ರಾಮಸ್ಥರು ಕಂಡುಕೊಳ್ಳುತ್ತಾರೆ.
ಈ ಬಾರಿ ಚುನಾವಣೆಯಲ್ಲಿ ಏನಾಗಲಿದೆಯೋ ಗೊತ್ತಿಲ್ಲ. ಆದರೆ ಈ ಫಲಾಫಲ ಬೊಂಬೆಯ ಭವಿಷ್ಯ ಅಂತೂ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಂತೂ ಸಿಕ್ಕಿದೆ. ಈ ಹಿಂದೆ ಇಲ್ಲಿ ಕಂಡ ಭವಿಷ್ಯ ಯಾವುದೂ ಹುಸಿಯಾಗಿಲ್ಲ. ಹೀಗಾಗಿ ಈಗ ಬಂದಿರೋದು ಸತ್ಯ ಆಗಿಯೇ ಅಗುತ್ತದೆ ಎಂದು ಗ್ರಾಮಸ್ಥರು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದು, ಏನಾಗಲಿದೆ ಅನ್ನೋದನ್ನ ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಕಾದು ನೋಡಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9ಧಾರವಾಡ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ