ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 19, 2023 | 6:35 PM

‌ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಹದಾಯಿ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಹೋರಾಟಗಾರರಿಂದ ಮುತ್ತಿಗೆ ಹಾಕಲಾಯಿತು. ಬಳಿಕ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ದ ಎಂದು ಹೇಳಿದರು.

ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹೋರಾಟಗಾರರಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುಂದೆ ಪ್ರತಿಭಟನೆ
Follow us on

ಹುಬ್ಬಳ್ಳಿ, ಆಗಸ್ಟ್​ 19: ಯೋಜನೆ ಅನುಷ್ಠಾನಕ್ಕೆ ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಹೇಳಿದರು.  ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಇಂದು ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಹೋರಾಟಗಾರರಿಂದ ಮುತ್ತಿಗೆ ಹಾಕಲಾಯಿತು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಡಿಪಿಎಆರ್​ಗೆ ಅನುಮತಿ ನೀಡಿದೆ. ನೋಟಿಫಿಕೇಶನ್ ನಾವೇ ಮಾಡಿಸಿ ಪರಿಸರ ವಿನಾಯಿತಿ ಕೊಡಿಸಿದೆವು. ಗೆಜೆಟ್ ನೋಟಿಫಿಕೇಶನ್ ಜೊತೆ DPAR ಅನುಮೋದನೆ ಮಾಡಿದ್ದೇವೆ ಎಂದು ತಿಳಿಸಿದರು.

ಟೈಗರ್ ಕಾರಿಡಾರ್ ಮತ್ತು ಇಕೋ ಸೆನ್ಸಿಟಿವ್ ಝೋನ್ ಕಾರಣಕ್ಕೆ ವಿಳಂಬವಾಗುತ್ತಿದೆ. ಹಸಿರು ನ್ಯಾಯಾಧಿಕರಣದ ಅನುಮತಿ ಸಿಗಬೇಕಿದೆ. ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದೆ. ರಾಜ್ಯದಲ್ಲಿ ವೈಲ್ಡ್ ಲೈಫ್​ಗೆ ಅನುಮತಿ ಕೊಟ್ಟು ಕೇಂದ್ರಕ್ಕೆ ಕಳಿಸಬೇಕಿದೆ. ರಾಜ್ಯಸರ್ಕಾರ ಅನುಮತಿ ಕೊಡುವುದು ಬಾಕಿ ಇದೆ ಎಂದ ಹೇಳಿದರು.

ಗೋವಾ ಸರ್ಕಾರ ಆಕ್ಷೇಪ

ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಸ್ಪಷ್ಟ ನಿಲುವು ಹೊಂದಿದೆ. ಯೋಜನೆ ಜಾರಿಗೆ ನಾವು ಎಲ್ಲಾ ರೀತಿಯ ತಯಾರಿಯಲ್ಲಿದ್ದೇವೆ. ಟ್ರಿಬ್ಯುನಲ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರದ ಜೊತೆಗೆ ಗೋವಾ ಸರ್ಕಾರ ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಡಿಪಿಎಆರ್ ಅನುಮತಿ ನೀಡಿದ್ದನ್ನು ಗೋವಾ ಸರ್ಕಾರ ಆಕ್ಷೇಪಿಸಿದೆ ಎಂದರು.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆ ರಗಳೆ: ಸ್ಮಶಾನದಲ್ಲಿ ಜೀವಂತವಾದ ಮಗು, ಕೊನೆಗೂ ಮನೆಯಲ್ಲಿ ಕೊನೆಯುಸಿರೆಳೆಯಿತು

ಇದರಲ್ಲಿ ಯಾವುದೇ ರಾಜಕೀಯದ ಪ್ರಶ್ನೆಯೇ ಇಲ್ಲ. ಸುಪ್ರೀಂಕೋರ್ಟ್​ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೂ ವಿನಂತಿಸಿದ್ದೇನೆ. ಕರ್ನಾಟಕ ವೈಲ್ಡ್ ಲೈಫ್ ಬೋರ್ಡ್​​ನಲ್ಲಿ ಶಿಫಾರಸು ಮಾಡಬೇಕು. ಇದನ್ನು ಕೇಂದ್ರಕ್ಕೆ ಕಳಿಸಿದರೆ ನಾವು ಖಂಡಿತ ಅನುಮತಿ ನೀಡುತ್ತೇವೆ. ಕೇಂದ್ರ ಸರ್ಕಾರ ಯಾವುದೇ ಮೀನಮೇಷ ನಡೆಯುತ್ತಿಲ್ಲ. ಗ್ರೀನ್ ಟ್ರಿಬ್ಯುನಲ್ ಅಸ್ತಿತ್ವಕ್ಕೆ ಬಂದ ಬಳಿಕ ನಿಬಂಧನೆಗಳು ಹೆಚ್ಚಾಗಿವೆ ಎಂದರು.

ಇದನ್ನೂ ಓದಿ: ಮತ್ತೆ ಧಾರವಾಡದಿಂದಲೇ ಸ್ಪರ್ಧೆ, ಕರ್ನಾಟಕದಲ್ಲಿ ಬಿಜೆಪಿಗೆ 20ಕ್ಕೂ ಅಧಿಕ ಸ್ಥಾನ ಸಿಗಲಿದೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಯಾವುದೇ ಚುನಾವಣೆ ಬಂದರೂ ಅಭ್ಯರ್ಥಿಗಳ ಪಾಲಿಗೆ ಮಹದಾಯಿ ಹಾಗೂ ಕಳಸಾ-ಬಂಡೂರಿ ಪ್ರಚಾರದ ಅಸ್ತ್ರವಾಗಿದೆ. ಯಾವುದೇ ಸರ್ಕಾರ ಬಂದರೂ ಹೋರಾಟಗಾರರಿಗೆ ಹಾಗೂ ಈ ಭಾಗದ ಜನರಿಗೆ ಮಾತ್ರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಆಗುತ್ತಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗಾಗಿ ಬೇಸತ್ತ ಅನ್ನದಾತರು ಮತ್ತೆ ಹೋರಾಟಕ್ಕೆ ಇಳಿದಿದ್ದರು. ನಗರದ ಮಯೂರ ಎಸ್ಟೇಟ್​ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆಗೆ ಇಂದು ಮುತ್ತಿಗೆ ಹಾಕಿದ್ದರು. ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರೈತ ಪರ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:46 pm, Sat, 19 August 23