ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ ಸೇರಿದಂತೆ ಯಾವುದೇ ಸಮಸ್ಯೆಯಿಂದ ರೈತರು ನಷ್ಟ ಅನುಭವಿಸಿದರೆ ಅದಕ್ಕೆಂದೇ ಬೆಳೆ ವಿಮಾ ಯೋಜನೆಯನ್ನು ( Crop Insurance) ಜಾರಿಗೆ ತರಲಾಗಿದೆ. ರೈತರು ತಮ್ಮ ಬೆಳೆಗೆ ವಿಮಾ ಕಂತನ್ನು ತುಂಬಿದರೆ ಸಾಕು. ಯಾವುದೇ ಸಮಸ್ಯೆಯಿಂದ ಬೆಳೆ ಹಾನಿಯಾದರೆ ಅದಕ್ಕೆ ವಿಮಾ ಕಂಪನಿಗಳು ಪರಿಹಾರ ನೀಡುತ್ತವೆ. ಆದರೆ ಧಾರವಾಡದ ಈ ವಿಮಾ ಕಥೆ ಕೇಳಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. ಇದಕ್ಕೆ ಕಾರಣ ಕಂಪನಿಯವರು ಮಾಡುತ್ತಿರೋ ತಾರತಮ್ಯ. ಏನಿದು ಕಥೆ? ಇಲ್ಲಿದೆ ನೋಡಿ ಒಂದು ವರದಿ…
ಧಾರವಾಡ ಜಿಲ್ಲೆಯಲ್ಲಿ (Dharwad) ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಮೆಕ್ಕೆಜೋಳ ಸರಿಯಾಗಿ ಬರುತ್ತಿಲ್ಲ. ಇದೇ ಕಾರಣಕ್ಕೆ ರೈತರು (Farmers) ಬೆಳೆ ವಿಮಾ ಯೋಜನೆಯ ಮೊರೆ ಹೋದರು. ಅಚ್ಚರಿಯ ಸಂಗತಿ ಅಂದರೆ ರೈತರು ವಿಮಾ ಕಂತನ್ನು ತುಂಬುವಾಗ ಕಂಪನಿಗಳು ಹೇಳೋ ರೀತಿ ಒಂದು ಬಾರಿಯೂ ಪರಿಹಾರ (Compensation) ಬಂದೇ ಇಲ್ಲ.
ನೂರಕ್ಕೆ ನೂರರಷ್ಟು ಬೆಳೆ ಹಾನಿಯಾದರೂ ಕಂಪನಿಗಳು ತೋರಿಸೋದು ಐದರಿಂದ ಎಂಟು ಪರ್ಸೆಂಟ್ ಮಾತ್ರ. ಇದರಿಂದಾಗಿ ಎಕರೆಯೊಂದಕ್ಕೆ ಬರಬೇಕಾಗಿದ್ದ 32 ಸಾವಿರ ರೂಪಾಯಿ ಪೈಕಿ ಅತೀ ಕಡಿಮೆ ಹಣ ರೈತರ ಖಾತೆಗೆ ಬಂದು ಜಮಾ ಆಗುತ್ತಿದೆ. ಕಳೆದ ವರ್ಷವಂತೂ ಅತಿವೃಷ್ಟಿಯಿಂದಾಗಿ ಮೆಕ್ಕೆಜೋಳ ಬಂದೇ ಇಲ್ಲ. ಆದರೂ ಇಲ್ಲಿನ ರೈತರಿಗೆ ವಿಮಾ ಹಣ ಬಂದೇ ಇಲ್ಲ ಅನ್ನೋದನ್ನು ಕೇಳಿದರೆ, ವಿಮೆಯ ವಿಚಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಅನ್ನೋದು ತಿಳಿದು ಬರುತ್ತದೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಾಗಿ ವಿಮಾ ಪರಿಹಾರ ನೀಡುತ್ತಿರೋದು ಕೂಡ ಇಲ್ಲಿನ ರೈತರಿಗೆ ಅಸಮಾಧಾನ ಉಂಟುಮಾಡಿದೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳಕ್ಕೆ ಸಾಕಷ್ಟು ಸಮಸ್ಯೆಗಳು ಕೂಡ ಕಾಡುತ್ತಿವೆ. ಹವಾಮಾನ ವೈಪರೀತ್ಯದಿಂದಾಗಿ ವಿವಿಧ ರೋಗಗಳು ತಗುಲಿ, ಸರಿಯಾದ ಬೆಳೆಯೇ ಬರುತ್ತಿಲ್ಲ. ಆದರೂ ವಿಮಾ ಕಂಪನಿಗಳ ಲೆಕ್ಕಾಚಾರದಲ್ಲಿ ಬೆಳೆ ಉತ್ತಮವಾಗಿ ಬಂದಿದೆ ಅನ್ನೋದೇ ಆಗಿರುತ್ತದೆ. ಪ್ರತಿ ಎಕರೆಗೆ ರೈತರು 400 ರಿಂದ 600 ರೂ. ರವರೆಗೆ ವಿಮಾ ಕಂತನ್ನು ತುಂಬಿರುತ್ತಾರೆ. ಆದರೆ ಬೆಳೆ ಬಾರದೇ ಇದ್ದರೂ ಒಂದು ಸಾವಿರ ರೂಪಾಯಿ ಕೂಡ ರೈತರ ಖಾತೆಗೆ ಜಮಾ ಆಗುತ್ತಿಲ್ಲ. ಹೀಗಾದರೆ ಈ ವಿಮೆ ಮಾಡಿಸೋದಾದರೂ ಏಕೆ ಅನ್ನೋದು ರೈತರು ಪ್ರಶ್ನೆ.
ಇದೇ ವೇಳೆ ಕೃಷಿ ಇಲಾಖೆ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿವರ್ಷ ರೈತರು ಕಷ್ಟಪಟ್ಟು ಬೆಳೆಯುತ್ತಾರೆ. ಇನ್ನೇನು ಬೆಳೆ ಬಂತು ಅನ್ನೋ ಹೊತ್ತಿಗೆ ಸರಿಯಾಗಿ ಸಮಸ್ಯೆಗಳು ಶುರುವಾಗುತ್ತವೆ. ಈ ವೇಳೆ ಇಲಾಖೆ ಅಧಿಕಾರಿಗಳು ರೈತರು ಸಹಾಯಕ್ಕೆ ಬರೋದೇ ಇಲ್ಲ ಅನ್ನೋದು ಕೂಡ ರೈತರ ಆರೋಪ.
Also Read:
KIADB: ಧಾರವಾಡದ ಕೆಐಎಡಿಬಿ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ಘಾಟು ಮೂಗಿಗೆ ಬಡಿಯುತ್ತೆ! ಏನ್ಮಾಡೋದು?
ಅಲ್ಲದೇ ಇಷ್ಟೆಲ್ಲಾ ನಷ್ಟವಾದರೂ ವಿಮಾ ಕಂಪನಿಗಳು ನಷ್ಟವೇ ಆಗಿಲ್ಲ ಅನ್ನುವಂತೆ ಕಡಿಮೆ ಪರಿಹಾರ ನೀಡುತ್ತಿರೋದರ ಬಗ್ಗೆಯೂ ಇಲಾಖೆ ಅಧಿಕಾರಿಗಳು ಸರಕಾರದ ಗಮನಕ್ಕೆ ತರುತ್ತಿಲ್ಲ. ಹೀಗಾದರೆ ಇಲಾಖೆ ಇರೋದಾದರೂ ಏಕೆ ಅನ್ನೋದು ರೈತರ ಪ್ರಶ್ನೆ. ಒಟ್ಟಿನಲ್ಲಿ ಕಟ್ಟಿದ ವಿಮಾ ಕಂತಿನಷ್ಟಾದರೂ ಪರಿಹಾರ ಬರದೇ ಇದ್ದರೆ ಅದಕ್ಕೆ ವಿಮೆ ಅಂತಾ ಕರೆಯೋದಾದರೂ ಏಕೆ ಅನ್ನೋ ರೈತರ ಪ್ರಶ್ನೆಗೆ ಸರಕಾರವೇ ಉತ್ತರ ಕೊಡಬೇಕಿದೆ. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)