ಮಂಡ್ಯ: ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ ಹಲವು ದಿನಗಳಿಂದ ಕೊವಿಡ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ಓಡಾಡಿದ್ದ ಜಿಲ್ಲಾಧಿಕಾರಿಗೆ ಈಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ತಮ್ಮ ಕಾರು ಚಾಲಕನಿಗೆ ಪಾಸಿಟಿವ್ ಬಂದಿದ್ದರಿಂದ ಹೋಂ ಐಸೋಲೇಷನ್ನಲ್ಲಿದ್ದ ಅಶ್ವತಿ ಅನುಮಾನದ ಮೇರೆಗೆ ಕೊವಿಡ್ ಪರೀಕ್ಷೆ ಮಾಡಿಸಿದ್ದರು. ಇದೀಗ ವರದಿಯಲ್ಲಿ ಪಾಸಿಟಿವ್ ಖಚಿತವಾಗಿದ್ದು ಸದ್ಯ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಕೊರತೆ
ರಾಜ್ಯದ ಹಲವೆಡೆ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು ಧಾರವಾಡ ಹಾಗೂ ಮೈಸೂರು ಜಿಲ್ಲೆಯಲ್ಲೂ ಲಸಿಕೆಗೆ ಪರದಾಡುವಂತಾಗಿದೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಮೈಸೂರು ಡಿಹೆಚ್‌ಒ ಡಾ.ಅಮರನಾಥ್ ತಮ್ಮ ತಮ್ಮ ಜಿಲ್ಲೆಗಳಲ್ಲಿನ ಕೊರೊನಾ ಲಸಿಕೆ ಕೊರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆ ಕೊರತೆ ಇರುವ ಹಿನ್ನೆಲೆ ಧಾರವಾಡ ಹಾಗೂ ಮೈಸೂರು ಎರಡೂ ಜಿಲ್ಲೆಗಳಲ್ಲೂ ಮೊದಲ ಡೋಸ್ ಲಸಿಕೆಗೆ ತಡೆ ನೀಡಲಾಗಿದೆ. ಲಸಿಕೆ ಪೂರೈಕೆಯಾಗುವ ತನಕ ಕೇವಲ ಎರಡನೇ ಡೋಸ್ ಲಸಿಕೆ ಪಡೆಯುವವರಿಗೆ ಮಾತ್ರ ನೀಡುವಂತೆ ಸೂಚಿಸಲಾಗಿದೆ. ಧಾರವಾಡದಲ್ಲಿ ಕೊರೊನಾ ಲಸಿಕೆ ಜತೆಗೆ ರೆಮ್ಡೆಸಿವಿರ್ ಚುಚ್ಚುಮದ್ದಿನ ಅಭಾವವೂ ತಲೆದೋರಿದೆ. ನಿನ್ನೆ ಸಂಜೆಯೇ ಬರಬೇಕಾಗಿದ್ದ ಇಂಜೆಕ್ಷನ್ ಇನ್ನೂ ಬಾರದ ಕಾರಣ ಕೊರತೆ ಉಂಟಾಗಿದೆ.
ಇದನ್ನೂ ಓದಿ:
ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್ ನೀಡಲು ನಿರ್ಧಾರ: ಸಂಸದೆ ಸುಮಲತಾ