ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ

ನಿನ್ನೆಯಷ್ಟೆ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದಿದ್ದರು. ಇದೀಗ ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೆ ನಿನ್ನೆ ನಡೆದ ಸಭೆಯ ಮುಖ್ಯಾಂಶಗಳನ್ನ ಸಾಮಾಜಿಕ‌ ಜಾಲತಾಣದಲ್ಲಿ ಸಂಸದೆ ಸುಮಲತಾ ಬರೆದುಕೊಂಡಿದ್ದಾರೆ.

ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2  ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ
ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ
Follow us
ಸಾಧು ಶ್ರೀನಾಥ್​
| Updated By: ಡಾ. ಭಾಸ್ಕರ ಹೆಗಡೆ

Updated on:May 04, 2021 | 5:49 PM

ಮಂಡ್ಯ: ನಿನ್ನೆಯಷ್ಟೆ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊವಿಡ್​ ಸೋಂಕು ತಡೆಯುವುದು ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಕುರಿತಾಗಿ ಸಭೆ ನಡೆಸಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೆ ನಿನ್ನೆ ನಡೆದ ಸಭೆಯ ಮುಖ್ಯಾಂಶಗಳನ್ನ ಸಾಮಾಜಿಕ‌ ಜಾಲತಾಣದಲ್ಲಿ ಸಂಸದೆ ಸುಮಲತಾ ಬರೆದಿದ್ದಾರೆ.

ಸಂಸದೆ ಸುಮಲತಾ ಅವರ ಫೇಸ್​ಬುಕ್​ ಪೋಸ್ಟ್​ ಸಾರಾಂಶ ಇಲ್ಲಿದೆ:

ಕೋವಿಡ್ ಎರಡನೇ ಅಲೆ ಮಂಡ್ಯದಲ್ಲೂ ಭಾರಿ ಸವಾಲುಗಳನ್ನು ತಂದಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಆಡಳಿತ ವ್ಯವಸ್ಥೆ ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಸಾಕಷ್ಟು ಒತ್ತಡ ತಂದಿದೆ. ಅವರೆಲ್ಲರೂ ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಆಯುಕ್ತರು, ಪೊಲೀಸ್ ಸಿಬ್ಬಂದಿ, ಪೌರಾಡಳಿತ ಮತ್ತು ಸಿಬ್ಬಂದಿ, ಇವರೆಲ್ಲರಿಗೂ ಮಂಡ್ಯ ಜನರ ಪರವಾಗಿ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಎಂದಿನಂತೆ ಕ್ಷೇತ್ರದ ಆಡಳಿತ ಅಧಿಕಾರಿಗಳು, ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಪ್ರತಿದಿನ ಬೆಡ್ ಗಳಿಗಾಗಿ, ಔಷಧಿಗಾಗಿ, ಆಕ್ಸಿಜನ್ ವ್ಯವಸ್ಥೆಗಾಗಿ ತುರ್ತು ಕೋರಿಕೆಗಳು ಬರುತ್ತಲೇ ಇವೆ. ಇವುಗಳನ್ನು ಸಮರೋಪಾದಿಯಲ್ಲಿ ವ್ಯವಸ್ಥೆ ಮಾಡುವ ಕೆಲಸ ಪ್ರತಿದಿನ ನಡೆಯುತ್ತಿದೆ. ಈ ಎರಡನೇ ಅಲೆ ಬಂದಾಗಿನಿಂದ ಹಿಂದಿಗಿಂತಲೂ ಅತಿ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ. ರಾಜ್ಯದ ಆರೋಗ್ಯ ಸಚಿವರಾದ ಸುಧಾಕರ್ ಅವರ ಜೊತೆಗೂ ನೇರ ಸಂಪರ್ಕದಲ್ಲಿದ್ದು ಅವರು ಇದುವರೆಗೂ ನಮ್ಮ ಎಲ್ಲಾ ಅವಶ್ಯಕತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕೂ ಮಿಗಿಲಾಗಿ ಮುಂದೆ ಬರಬಹುದಾದ ಇನ್ನಷ್ಟು ಬೇಡಿಕೆಗಳಿಗೆ ಈಗಲೇ ವ್ಯವಸ್ಥೆ ಮಾಡುವ ಕೆಲಸಗಳು ನಡೆಯುತ್ತಿವೆ.

ಎಂದಿನಂತೆ ಇಂದೂ ಕೂಡ ಮಂಡ್ಯದ ಜಿಲ್ಲಾಧಿಕಾರಿಗಳ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಕುರಿತಾಗಿ ಮಾತುಕತೆ ನಡೆಸಿದೆ. ಇಂದಿನ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಮಾಡಲಾಯಿತು.

• ಜಿಲ್ಲಾಧಿಕಾರಿಗಳು ಮತ್ತು DHO ಅವರು ಮಂಡ್ಯ ಜಿಲ್ಲೆಗೆ ಪ್ರತಿದಿನ 3 K L ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ನನ್ನ ಗಮನಕ್ಕೆ ತಂದರು. ಸದ್ಯದ ಪರಿಸ್ಥಿತಿಯಲಿ ಎಂ.ಪಿ ಫಂಡ್ ಇಲ್ಲದ ಕಾರಣ ಹಾಗೂ ಅನುದಾನದ ಮೂಲಗಳಿಂದ ದುಡ್ಡು ಒದಗಿಬರುವುದು ತಡವಾಗಬಹುದಾದ ಕಾರಣ ಸದ್ಯಕ್ಕೆ ತುರ್ತಿನ ಪರಿಸ್ಥಿತಿಯನ್ನು ಎದುರಿಸಲು ನನ್ನ ಸ್ವಂತ ದುಡ್ಡಿನಿಂದ ಪ್ರತಿದಿನ 2,000 ಲೀಟರ್ (2 K L ಆಕ್ಸಿಜನ್) ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ. ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚಿಸಿದ್ದೇನೆ.

• ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸುವುದಕ್ಕೆ ಹಾಸನ, ಮೈಸೂರು, ಹಾಗೂ ರಾಮನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಪರಿಸ್ಥಿತಿಯನ್ನು ಹೀಗೇ ಮುಂದುವರೆಯಲು ಬಿಡಲು ಆಗುವುದಿಲ್ಲ. ಮಂಡ್ಯಕ್ಕೆ ತನ್ನದೇ ಆಕ್ಸಿಜನ್ ಘಟಕ ಬೇಕು. ಇದು ಅತ್ಯಂತ ಶೀಘ್ರದಲ್ಲಿ ಸ್ಥಾಪನೆ ಆಗಬೇಕು ಎಂದು ನಿರ್ದೇಶನ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಆಕ್ಸಿಜನ್ ಘಟಕ ಸ್ಥಾಪನೆಗೆ ಕೊಡಬೇಕಾಗಿರುವ ಸೌಲಭ್ಯಗಳು (liquid tank ಮುಂತಾದವು) ಮತ್ತು ಅನುಮತಿಗಳನ್ನೂ ಅತಿ ಶೀಘ್ರದಲ್ಲಿ ಜಾರಿ ಮಾಡುವಂತೆ ತಿಳಿಸಿದ್ದೇನೆ. ಕೋವಿಡ್ ಮೂರನೇ ಅಲೆ ಬರುವ ಮುಂಚೆ 13KL ಆಕ್ಸಿಜನ್ ಸಾಮರ್ಥ್ಯ ಪಡೆಯುವತ್ತ ಜಿಲ್ಲೆ ಹೆಜ್ಜೆ ಹಾಕಿದೆ.

• ಕೇಂದ್ರದ National Disaster Response Fund (NDRF) ಮೂಲಕ 10 ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. ಈ ಅನುದಾನವನ್ನು ತಾಸಿಲ್ದಾರ್ ಗಳ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಕೊಡಿಸಲಾಗಿದೆ.

• ಜಿಲ್ಲೆಯ ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್) ಖಾತೆಯಲ್ಲಿ Rs.2.5 ಕೋಟಿ ರೂಪಾಯಿಗಳಿವೆ. ಈ ಮೊತ್ತದಲ್ಲಿ ವೈದ್ಯಕೀಯ ಸಲಕರಣೆಗಳು ಮತ್ತು ಉಪಕರಣಗಳನ್ನು ಖರೀದಿಸುವ ಸಾಧ್ಯತೆ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರ ಜೊತೆ ತಕ್ಷಣ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

• ಪೊಲೀಸರಿಗೆ ಹಾಗೂ ಇತರೇ ಕೋವಿಡ್ ವಾರಿಯರ್ಸ್ ಗಳಿಗೆ ವ್ಯಾಕ್ಸಿನ್ ತುರ್ತು ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ 2 ಡೋಸ್ ವ್ಯಾಕ್ಸಿನ್ ಸಿಗುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕರೋನಾ ಮಾರ್ಗಸೂಚಿ ಗಳನ್ನು ಪಾಲಿಸಲು ಜನರಿಗೆ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಹಳ್ಳಿಗಳಲ್ಲಿ ಮಾಸ್ಕ್ ಧರಿಸುವಿಕೆ, ಸ್ವಚ್ಚತೆ, ಹಾಗೂ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿ ಎಂದು ಜಿ‌.ಪಂ ಸಿ.ಇ.ಒ ಗೆ ಸೂಚಿಸಲಾಗಿದೆ.

• ಮುಂದೆ ನರ್ಸ್ಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರ ಅವಶ್ಯಕತೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ತುಂಬಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಈ ಮುಂಚೆ ಬೆಡ್ ಮ್ಯಾನೇಜ್ಮೆಂಟ್ ಎಂಬ ಕ್ರಿಯಾ ಯೋಜನೆಯಡಿ ಸರ್ಕಾರದಿಂದ ಅನುಮತಿ ಪಡೆದು ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ಗಾರ್ಮೆಂಟ್ಸ್ ಕಾರ್ಮಿಕರಿಗೆ ಆರ್ಥಿಕ ಪರಿಹಾರ ಹಾಗೂ ಕೆಲಸ ಮಾಡಲು ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಮಾರನೇ ದಿನ ಸರಕಾರ 50% ಕೆಲಸಗಾರರಿಗೆ ಅವಕಾಶ ಕೊಟ್ಟಿದೆ. ಆರ್ಥಿಕ ಪರಿಹಾರಕ್ಕೆ ಪ್ರಯತ್ನ ಮುಂದುವರೆದಿದೆ.

ಕರ್ಫ್ಯೂ ಹಾಗೂ ಕೊವಿಡ್ ನಿಯಮಾವಳಿಗಳು ಜಾರಿಯಲ್ಲಿರುವ ಕಾರಣ ಎಲ್ಲಾ ಕೆಲಸಗಳನ್ನು ಕರೆಗಳು ಹಾಗೂ ಆನ್ಲೈನ್ ಮೀಟಿಂಗ್ ಗಳ ಮುಖಾಂತರ ನಡೆಸಬೇಕಾದ ಅನಿವಾರ್ಯತೆ ಇದೆ. ಸ್ಥಳದಲ್ಲಿ ಸಂಸದರ ಉಪಸ್ಥಿತಿ ಇದ್ದಾಗ ಅಧಿಕಾರಿಗಳು ಪ್ರೋಟೋಕಾಲ್ ಪಾಲನೆ ಮಾಡಬೇಕಾದ ಅನಿವಾರ್ಯತೆಯಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ. ಮಹಾಮಾರಿಯ ಸಂದರ್ಭದಲ್ಲಿ ಈ ರೀತಿಯ ಆನ್ಲೈನ್ meeting ಗಳು ನಮ್ಮಿಂದ ಕೋವಿಡ್ ಹರಡುವುದನ್ನು ತಡೆಯಲು ಸಹಾಯಕವಾಗಿದೆ.

ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಅಶ್ವಥಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಜಿ‌.ಪಂ ಸಿ‌.ಇ.ಒ ದಿವ್ಯಾ ಪ್ರಭು, ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಮಿಮ್ಸ್ ನಿರ್ದೇಶಕರಾದ ಹರೀಶ್, ಜಿಲ್ಲಾ ಸರ್ವೇಕ್ಷಣಧಿಕಾರಿಗಳಾದ ಸಂಜಯ್, ವಾರ್ತಾಧಿಕಾರಿ ಟಿ.ಕೆ ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸಂಸದೆಯಾಗಿ ನಾನು ಮಾಡುತ್ತಿರುವುದು ನನ್ನ ಕರ್ತವ್ಯ ಮಾತ್ರ. ಮಾಡುವ ಪ್ರತಿ ಕೆಲಸದಲ್ಲೂ ರಾಜಕೀಯ ಲಾಭ ಪಡೆಯುವ ಅವಶ್ಯಕತೆ ನನಗಿಲ್ಲ. ಕೋವಿಡ್ ನನ್ನು ಕೂಡ ರಾಜಕೀಯ ದಾಳವಾಗಿ ಬಳಸುತ್ತಿರುವವರಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಸಂದರ್ಭದಲ್ಲಾದರೂ ಪಕ್ಷ, ಜಾತಿ ಎಲ್ಲವನ್ನೂ ಪಕ್ಕಕಿಟ್ಟು ಎಲ್ಲರೂ ಜನರ ರಕ್ಷಣೆಗಾಗಿ ಕೈ ಜೋಡಿಸಲು ಮನವಿ ಮಾಡುತ್ತೇನೆ. ಮಾನವೀಯತೆ  ತೋರೋ. ಈ ಮಹಾಮಾರಿ ಯಾರಿಗೂ ಪಕ್ಷಪಾತ ಮಾಡದು. ಎಲ್ಲರನ್ನೂ ಸಮನಾಗಿ ಕಾಡುತ್ತಿದೆ. ಎಲ್ಲರೂ ಕೈ ಜೋಡಿಸಿ ಇದನ್ನು ತೊಲಗಿಸೋಣ.

(mandya mp, sumalatha ambareesh, donation, oxygen, mandya covid patients, fb status) Also Read:

ಮಂಡ್ಯದತ್ತ ಮುಖಮಾಡದ ಸಂಸದೆ; ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪದ ನಂತರ ಅಧಿಕಾರಿಗಳ ಸಭೆ ಕರೆದ ಸುಮಲತಾ

Published On - 2:54 pm, Tue, 4 May 21