National Youth Fest: ಗಿನ್ನೆಸ್ ದಾಖಲೆಗಾಗಿ ಜ.15 ರಂದು ಯೋಗಥಾನ್; ನೀವು ಪಡೆಯಬಹುದು ಗಿನ್ನೆಸ್ ದಾಖಲೆ ಪ್ರಮಾಣ ಪತ್ರ, ಇಲ್ಲಿದೆ ನೋಂದಣಿ ಲಿಂಕ್

| Updated By: ವಿವೇಕ ಬಿರಾದಾರ

Updated on: Jan 14, 2023 | 3:09 PM

ರಾಜ್ಯಾದ್ಯಂತ ನಾಳೆ (ಜ.15) ರಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಯೋಗಥಾನ್ ಆಯೋಜಿಸಿದ್ದು, ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಯೋಗಥಾನ್ ವಿಶೇಷ ಮಹತ್ವ ಪಡೆದುಕೊಂಡಿದ್ದು, ದೇಶದ ವಿವಿಧ ಭಾಗಗಳ ಯುವ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

National Youth Fest: ಗಿನ್ನೆಸ್ ದಾಖಲೆಗಾಗಿ ಜ.15 ರಂದು ಯೋಗಥಾನ್; ನೀವು ಪಡೆಯಬಹುದು ಗಿನ್ನೆಸ್ ದಾಖಲೆ ಪ್ರಮಾಣ ಪತ್ರ, ಇಲ್ಲಿದೆ ನೋಂದಣಿ ಲಿಂಕ್
Follow us on

ಧಾರವಾಡ: ರಾಜ್ಯಾದ್ಯಂತ ನಾಳೆ (ಜ.15) ರಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಯೋಗಥಾನ್ ಆಯೋಜಿಸಿದ್ದು, ರಾಷ್ಟ್ರೀಯ ಯುವಜನೋತ್ಸವ (National Youth Fest) ನಡೆಯುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ (Hubli-Dharwad) ಯೋಗಥಾನ್ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಯೋಗಥಾನ್​ನಲ್ಲಿ ದೇಶದ ವಿವಿಧ ಭಾಗಗಳ ಯುವ ಪ್ರತಿನಿಧಿಗಳು ಭಾಗಿಯಾಗುತ್ತಿರುವುದು ವಿಶೇಷವಾಗಿದೆ.

ಯೋಗಥಾನ್​ನಲ್ಲಿ ಪಾಲ್ಗೊಂಡು ಗಿನ್ನೆಸ್ ದಾಖಲೆ ನಿರ್ಮಿಸುವ ಸಂಭ್ರಮದಲ್ಲಿ ಭಾಗಿಯಾಗುದರ ಜೊತೆಗೆ ಭಾಗವಹಿಸಿದವರು ಕೂಡ ಗಿನ್ನೆಸ್ ದಾಖಲೆ ಪ್ರಮಾಣ ಪತ್ರ ಪಡೆಯಲು ಇದೊಂದು ಸದಾವಕಾಶವಾಗಿದೆ. ಯೋಗಥಾನ್​ನಲ್ಲಿ ಭಾಗಹಿಸಲು www.yogathon2022.com ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈವರೆಗೆ ರಾಜ್ಯದಲ್ಲಿ 13 ಲಕ್ಷ ವಿದ್ಯಾರ್ಥಿಗಳು, 12 ಸಾವಿರ ಬೋಧಕರು ಮತ್ತು 8 ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ನೋಂದಣಿಯಾಗಿವೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಈ ಕಾರ್ಯಕ್ರಮದ ಜ್ಞಾನ ಪಾಲುದಾರರಾಗಿದ್ದು, ಯೋಗಪಟುಗಳಿಗೆ ತರಬೇತಿ ಕುರಿತು ಮಾರ್ಗದರ್ಶನ ನೀಡುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ವರೆಗೆ 90 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೋಗಥಾನ್-2023 ರ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮುಂಜಾನೆಯ ಆಹ್ಲಾದಕರ ವಾತಾವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಯೋಗಾಸನ ಮಾಡುವ ಮೂಲಕ ಯುವ ಪ್ರತಿನಿಧಿಗಳನ್ನು ಹುರಿದುಂಬಿಸಿದರು. ಯೋಗ ಗುರುಗಳ ಜೊತೆ ಡಾ. ಶಾಲಿನಿ ರಜನೀಶ್ ಅವರು ವಿವಿಧ ಆಸನಗಳನ್ನು ಮಾಡಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಡಾ. ಶಾಲಿನಿ ರಜನೀಶ್ ಅವರು, ಯೋಗಥಾನ್ ಆಯೋಜಿಸಿರುವ ಪ್ರತಿಯೊಂದು ವೇದಿಕೆಯಲ್ಲಿ ಸೂಕ್ತ ರೀತಿಯಲ್ಲಿ ಶಿಷ್ಟಾಚಾರ ಪರಿಪಾಲನೆ ಮಾಡಬೇಕು. ಸನ್ನದ್ಧತೆ ಬಗ್ಗೆ ಮುಂದಾಗಿಯೇ ಸೂಕ್ತ ಪರಿಶೀಲನೆ ಮಾಡಬೇಕು. ಯುವ ಪ್ರತಿನಿಧಿಗಳನ್ನು ವೇದಿಕೆ ಸ್ಥಳಕ್ಕೆ ನಿಗದಿತ ಸಮಯಕ್ಕೆ ತರಲು ಎನ್.ಎಸ್.ಎಸ್ ಸಮನ್ವಯಾಧಿಕಾರಿಗಳು ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಬಸ್​ಗಳಲ್ಲಿ ಅಗತ್ಯ ಪ್ರಮಾಣದ ಕುಡಿಯುವ ನೀರು, ತಿಂಡಿ ವ್ಯವಸ್ಥೆ ಜೊತೆಗೆ ಮೈದಾನದ ತುಂಬಾ ಕಾರ್ಪೆಟ್ ಹಾಕಬೇಕು. ಪ್ರತಿಯೊಬ್ಬ ನೋಂದಾಯಿತ ಪ್ರತಿನಿಧಿ ಯೋಗ ಮ್ಯಾಟ್​ಗಳನ್ನು ತರಬೇಕು ಎಂದು ಹೇಳಿದರು.

ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದ 5 ಸ್ಥಳಗಳಲ್ಲಿ ಯೋಗಥಾನ್​ಗೆ ವ್ಯವಸ್ಥೆ ಮಾಡಿದ್ದು, ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪಾಲ್ಗೊಳ್ಳಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಜೆ.ಎಸ್.ಎಸ್. ಕ್ರೀಡಾಂಗಣ, ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಯೋಗಥಾನ್​ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ 2022 ರ ಜೂನ್​ 21 ರ ಯೋಗ ದಿನದಂದು ಯೋಗಥಾನ್ ಕಾರ್ಯಕ್ರಮ ಆರಂಭಿಸಿದ್ದು, ಇದೀಗ ಯೋಗಥಾನ್ ಅಂತಿಮ ಹಂತ ತಲುಪಿದೆ. ಜ.15 ರಂದು ಯೋಗಾಸಕ್ತರಿಂದ ಗಿನ್ನೆಸ್ ದಾಖಲೆಗಾಗಿ ಯೋಗಥಾನ್ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ರಾಜಸ್ಥಾನದಲ್ಲಿ 1.6 ಲಕ್ಷ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕುವ ಗುರಿ ಹೊಂದಲಾಗಿದೆ. ಈ ಮೂಲಕ ಕರ್ನಾಟಕವನ್ನು ಮೊದಲ ಯೋಗ ಸಾಕ್ಷರತಾ ರಾಜ್ಯವನ್ನಾಗಿ ಮಾಡುವ ಪ್ರಯತ್ನಗಳು ಸಾಗಿವೆ.

ಪ್ರಧಾನಿ ನರೇಂದ್ರ ಮೋದಿ ಸಂದೇಶ

ಯೋಗಥಾನ್​ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಅಮೃತ ಕಾಲದಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವವಿದ್ದು, ಕರ್ನಾಟಕ ಯೋಗ ಪರಂಪರೆಗೆ ಹೆಸರಾಗಿದೆ. ಇಂತಹ ನಾಡಿನಲ್ಲಿ ಯೋಗಥಾನ್ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sat, 14 January 23