ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್: ಪರದಾಡುತ್ತಿರುವ ವಿದ್ಯಾರ್ಥಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2022 | 6:29 PM

ಸರಕಾರ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲೂ ಹಾಸ್ಟೆಲ್ ವಿಚಾರವಾಗಿ ಅನೇಕ ಕಟ್ಟುನಿಟ್ಟಿನ ಆದೇಶಗಳನ್ನು ಮಾಡಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆ ಆದೇಶಗಳು ಕೇವಲ ಕಡತಗಳಲ್ಲಿಯೇ ಉಳಿದು ಹೋಗುತ್ತಿವೆ. ಇದಕ್ಕೊಂದು ಉದಾಹರಣೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆಯುತ್ತಿರೋ ವಿದ್ಯಾರ್ಥಿಗಳ ಪರದಾಟ.

ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್: ಪರದಾಡುತ್ತಿರುವ ವಿದ್ಯಾರ್ಥಿಗಳು
ಹಾಸ್ಟೆಲ್​ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ
Follow us on

ಧಾರವಾಡ: ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿದ್ಯಾಕಾಶಿ ಧಾರವಾಡ(dharwad)ದಲ್ಲಿ ಹೋರಾಡುತ್ತಿದ್ದಾರೆ. ಧಾರವಾಡಕ್ಕೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಹೀಗೆ ಬರುವ ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬದವರೇ ಆಗಿರುತ್ತಾರೆ. ಹೀಗಾಗಿ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಈ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದು ಹಾಸ್ಟೆಲ್ ವ್ಯವಸ್ಥೆ. ಆದರೆ ಇದೀಗ ಜಿಲ್ಲೆಯಲ್ಲಿ ಲಭ್ಯವಿರುವ ಹಾಸ್ಟೆಲ್​ಗಳು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಇದೀಗ ವಿದ್ಯಾರ್ಥಿಗಳು ಕಾಲೇಜು ಅಭ್ಯಾಸ ಬಿಟ್ಟು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತಿದ್ದಾರೆ.

ಇನ್ನು ಎಲ್ಲಾ ವಿದ್ಯಾರ್ಥಿಗಳು ಆನ್​ಲೈನ್ ಮೂಲಕವೇ ಹಾಸ್ಟೆಲ್​ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಹಾಸ್ಟೆಲ್​ಗಳಲ್ಲಿ ಲಭ್ಯವಿರುವ ಇರುವ ಸೀಟ್​ಗಿಂತ ಹತ್ತಾರುಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಗುವುದಿಲ್ಲ. ಇದೇ ಕಾರಣಕ್ಕೆ ಇದೀಗ ಧಾರವಾಡದಲ್ಲಿ ನಿತ್ಯವೂ ಪ್ರತಿಭಟನೆ, ಹೋರಾಟ, ಸಮಾಜ ಕಲ್ಯಾಣ ಇಲಾಖೆ ಹೊರಗಡೆ ಕಾಯುವುದು ನಡೆದಿದೆ.

ಸಾಮಾಜಿಕ ಹೋರಾಟಗಾರ ಸುರೇಶ ಮಾತನಾಡಿ ಹಾಸ್ಟೆಲ್​ಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಸೀಟ್​ನ್ನು ಕೊಡಲೇಬೇಕು ಅಂತಾ ಸರಕಾರ ಸ್ಪಷ್ಟವಾದ ಆದೇಶವನ್ನು ನೀಡಿದೆ. ಆದರೆ ಇದೀಗ ಅರ್ಜಿ ಹಾಕಿದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಕ್ಕಿಲ್ಲ. ಹೀಗಾಗಿ ಇದೀಗ ವಿದ್ಯಾಭ್ಯಾಸ ಬಿಟ್ಟು ರಸ್ತೆಯಲ್ಲಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷಿ ಅವರನ್ನು ಕೇಳಿದರೆ, ಹಾಸ್ಟೆಲ್​ನಲ್ಲಿ ಲಭ್ಯ ಇರುವ ಸೀಟ್​ಗಿಂತ ಆರುಪಟ್ಟು ಹೆಚ್ಚಿನ ಅರ್ಜಿಗಳು ಬಂದಿದ್ದಾವೆ. ಹೀಗಾಗಿ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಇದೀಗ ಬೇರೆ ಕಡೆಗಳಲ್ಲಿ ಕಟ್ಟಡಗಳನ್ನು ನೋಡಲು ಸೂಚಿಸಲಾಗಿದೆ. ಆ ಕಟ್ಟಡಗಳನ್ನು ಬಾಡಿಗೆ ಪಡೆದ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿಕೊಡಲಾಗುವುದು ಎಂದಿದ್ದಾರೆ.

ಇನ್ನು ಈ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ಬಾಡಿಗೆ ಕಟ್ಟಡ ಕೊಡಲು ಒಪ್ಪದ ಮಾಲಿಕರು. ಸರಿಯಾಗಿ ಬಾಡಿಗೆ ನೀಡದೇ ಇರುವ ಹಿನ್ನೆಲೆಯಲ್ಲಿ ಯಾರು ಕೂಡ ಹಾಸ್ಟೆಲ್​ಗಳಿಗೆ ಬಾಡಿಗೆ ಕೊಡಲು ತಯಾರಿಲ್ಲ. ಇದೆಲ್ಲದರ ಪರಿಣಾಮ ನೇರವಾಗಿ ವಿದ್ಯಾರ್ಥಿಗಳ ಮೇಲೆ ಆಗುತ್ತಿದೆ. ಒಟ್ಟಿನಲ್ಲಿ ಈ ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಪರಿಹಾರ ಕಂಡುಕೊಂಡು, ರಸ್ತೆಯಲ್ಲಿ ಹೋರಾಟಕ್ಕೆ ಇಳಿದಿರುವ ವಿದ್ಯಾರ್ಥಿ ಸಮೂಹಕ್ಕೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ