Hubballi News: ಹುಬ್ಬಳ್ಳಿಯಲ್ಲಿ ಈರುಳ್ಳಿ ಕೆಜಿಗೆ 25 ರೂಪಾಯಿಯಂತೆ ಮಾರಾಟ ಮಾಡಿದ ಕೇಂದ್ರ ಸರ್ಕಾರ, ಜನ ಸಂತಸ

| Updated By: ಸಾಧು ಶ್ರೀನಾಥ್​

Updated on: Nov 08, 2023 | 11:57 AM

ಮುಂದಿನ 2-3 ದಿನಗಳಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಕಡಿಮೆಯಾಗಬಹುದು. ಆದರೆ ಎನ್‌ಸಿಸಿಎಫ್‌ನಿಂದ ಪೂರೈಕೆ ಇಲ್ಲದಿದ್ದರೆ, ದೀಪಾವಳಿ ಸಮಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಅಂದಾಜಿದೆ ಎಂದು ಎಪಿಎಂಸಿ ವ್ಯಾಪಾರಿ ಶಬ್ಬೀರ್ ಯರಗಟ್ಟಿ ಭವಿಷ್ಯ ನುಡಿದರು.

Hubballi News: ಹುಬ್ಬಳ್ಳಿಯಲ್ಲಿ ಈರುಳ್ಳಿ ಕೆಜಿಗೆ 25 ರೂಪಾಯಿಯಂತೆ ಮಾರಾಟ ಮಾಡಿದ ಕೇಂದ್ರ ಸರ್ಕಾರ, ಜನ ಸಂತಸ
ಹುಬ್ಬಳ್ಳಿಯಲ್ಲಿ ಈರುಳ್ಳಿ ಕೆಜಿಗೆ 25 ರೂಪಾಯಿಯಂತೆ ಮಾರಾಟ ಮಾಡಿದ ಕೇಂದ್ರ ಸರ್ಕಾರ, ಜನ ಸಂತಸ
Follow us on

ಹುಬ್ಬಳ್ಳಿ: ಒಂದು ಕೆ.ಜಿ. ಗೆ 68-80 ರೂ. ಗೆ ಈರುಳ್ಳಿ ಖರೀದಿಸುವ ಆತಂಕದಲ್ಲಿದ್ದ ಗೃಹಿಣಿಯರು ನಗರದಲ್ಲಿ ಮಂಗಳವಾರ ‘ಈರುಳ್ಳಿ ಕೆಜಿಗೆ 25 ರೂ’ ಎಂಬ ಬೋರ್ಡ್‌ಗಳಿರುವ ನಾಲ್ಕು ಮೊಬೈಲ್ ವ್ಯಾನ್‌ಗಳನ್ನು ಕಂಡು ಸಂತಸಪಟ್ಟರು. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ (onion) ಮಾರಾಟಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ನಿರ್ಧರಿಸಿದ್ದು, ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಗ್ರಾಹಕರ ವ್ಯವಹಾರಗಳ ಕೇಂದ್ರ ಇಲಾಖೆ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್ National Cooperative Consumers’ Federation of India Limited -NCCF) 25 ಟನ್ ಈರುಳ್ಳಿ ಮಾರಾಟ ಮಾಡಲು ನಾಲ್ಕು ಮೊಬೈಲ್ ವ್ಯಾನ್‌ಗಳನ್ನು ನಿಯೋಜಿಸಿದೆ.

ನಗರದಲ್ಲಿ ಈರುಳ್ಳಿ ಬೆಲೆ ಕೆಜಿಗೆ 60 ರಿಂದ 80 ರೂ.ಗಳವರೆಗೆ ಡೋಲಾಯಮಾನವಾಗಿರುವುದರಿಂದ, ಅನೇಕ ತರಕಾರಿ ಖರೀದಿದಾರರು ಈ ಈರುಳ್ಳಿ ಮೊಬೈಲ್ ವ್ಯಾನ್‌ಗಳಿಗೆ ಮೊರೆ ಹೋದರು. ರಿಯಾಯತಿ ದರದಲ್ಲಿ (subsidised rate) ಈರುಳ್ಳಿ ಮಾರಾಟಕ್ಕೆ ಆಯ್ಕೆಯಾದ ನಗರಗಳಲ್ಲಿ ಹುಬ್ಬಳ್ಳಿಯೂ ಒಂದಾಗಿದೆ ಎಂದು ಬೆಂಗಳೂರಿನ ಎನ್‌ಸಿಸಿಎಫ್ ಮೂಲಗಳು ತಿಳಿಸಿವೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

“ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ದತ್ತಾಂಶ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯನ್ನು ತಗ್ಗಿಸಲು ಬೆಲೆ ಪ್ರವೃತ್ತಿಗಳ ಆಧಾರದ ಮೇಲೆ ನಗರಗಳನ್ನು ಗುರುತಿಸಿದೆ. ಈ ಉಪಕ್ರಮವು ದೇಶದ ಅನೇಕ ನಗರಗಳಲ್ಲಿ ಚಿಲ್ಲರೆ ಬೆಲೆಗಳನ್ನು ತಗ್ಗಿಸಿದೆ”ಎಂದು ಎನ್‌ಸಿಸಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

“ಒಬ್ಬ ವ್ಯಾಪಾರಿಗೆ 25 ಟನ್ ಈರುಳ್ಳಿ ಮಾರಾಟ ಮಾಡಲು ನಿಯೋಜಿಸಲಾಗಿತ್ತು. ನಿನ್ನೆ ಮಂಗಳವಾರ ಕೇವಲ 5 ಗಂಟೆಗಳಲ್ಲಿ ಅಷ್ಟೂ ಮಾರಾಟವಾಯಿತು. ದುರ್ಗದ ಬೈಲ್, ಬಂಕಾಪುರ ಚೌಕ್, ಯಲ್ಲಾಪುರ ಓಣಿ, ಆನಂದನಗರ, ಇಂಡಿ ಪಂಪ್ ಮತ್ತಿತರ ಕಡೆಗಳಲ್ಲಿ ವ್ಯಾನ್‌ಗಳು ನಿಂತಿದ್ದವು. ಮುಂದಿನ ದಿನಗಳಲ್ಲಿ ದೆಹಲಿಯಿಂದ ಸೂಚನೆ ಬಂದರೆ ಹೀಗೆಯೇ ಮಾರಾಟವನ್ನು ಮುಂದುವರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರಕಾರದ ವತಿಯಿಂದ ಪುಣೆಯಿಂದ ಈರುಳ್ಳಿ ಬರುತ್ತಿರುವ ಮಾಹಿತಿ ಇರುವುದರಿಂದ ಪ್ರತಿ ಕೆಜಿಗೆ 40-50 ರೂ.ಗೆ ಇಳಿಕೆಯಾಗಿದೆ ಎಂದು ಎಪಿಎಂಸಿ ವ್ಯಾಪಾರಿ ಶಬ್ಬೀರ್ ಯರಗಟ್ಟಿ ತಿಳಿಸಿದ್ದಾರೆ. “ಮುಂದಿನ 2-3 ದಿನಗಳಲ್ಲಿ ಇದು ಮತ್ತಷ್ಟು ಕಡಿಮೆಯಾಗಬಹುದು. ಎನ್‌ಸಿಸಿಎಫ್‌ನಿಂದ ಪೂರೈಕೆ ಇಲ್ಲದಿದ್ದರೆ, ದೀಪಾವಳಿ ಸಮಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಅಂದಾಜಿದೆ”ಎಂದು ಅವರು ಭವಿಷ್ಯ ನುಡಿದರು.

ಬೋರ್ಡ್ ನೋಡಿ ಆಶ್ಚರ್ಯವಾಯಿತು ಎಂದು ದುರ್ಗದ ಬೈಲ್‌ನಲ್ಲಿ ಈರುಳ್ಳಿ ಖರೀದಿಸಿದ ಸರಳಾ ಕಲಬುರ್ಗಿ ತಮ್ಮ ಸಂತಸ ಹಂಚಿಕೊಂಡರು. “ ಬಹಳಷ್ಟು ಜನರು ವ್ಯಾನ್‌ ಮುಂದೆ ಜಮಾಯಿಸಿದ್ದರಿಂದ ಈರುಳ್ಳಿ ಖರೀದಿಸಲು ಕಷ್ಟವಾಯಿತು. ನಾವು 4 ಕೆಜಿಗೆ ಬೇಡಿಕೆ ಇಟ್ಟಾಗ, ವ್ಯಾನ್ ಸಿಬ್ಬಂದಿ ತಲಾ 2 ಕೆಜಿ ಮಾತ್ರ ನೀಡಿದರು ಎಂದು ಅವರು ಹೇಳಿದರು. ನಮ್ಮದಾದ ತಕ್ಷಣ ನಾವು ನಮ್ಮ ನೆರೆಹೊರೆಯವರನ್ನೂ ಈರುಳ್ಳಿ ಖರೀದಿಗೆ ಕರೆದೆವು. ಅವರೂ ಬಂದು ಈರುಳ್ಳಿಯನ್ನು ಖರೀದಿಸಿದರು, ”ಎಂದು ಅವರು ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:25 am, Wed, 8 November 23