ಹುಬ್ಬಳ್ಳಿ, ಅ.21: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ (Load Shedding) ಸಮಸ್ಯೆ ಉದ್ಭವಿಸಿದೆ. ಯಾವಾಗ ಕರೆಂಟ್ ಹೋಗುತ್ತೋ, ಯಾವಾಗ ಬರುತ್ತೋ ತಿಳಿಯುವುದಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಹೆಸ್ಕಾಂ (HESCOM) ಅಧಿಕಾರಿಗಳ ವಿಭಿನ್ನ ಪ್ಲ್ಯಾನ್ ಮಾಡಿದ್ದಾರೆ. ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ವಿದ್ಯುತ್ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಹೆಸ್ಕಾಂ ಅಧಿಕಾರಿಗಳು ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ್ದು, ಇದರಲ್ಲಿ ಪಂಪ್ ಸೆಟ್ ಉಪಯೋಗಿಸುವ ರೈತರನ್ನು ಒಳಗೊಂಡು ಗ್ರಾಹಕರನ್ನು ಸೇರಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಸರ್ಕಲ್ನಲ್ಲಿ ಈ ಹೊಸ ಪ್ರಯತ್ನ ಮಾಡಲಾಗಿದೆ.
ಬ್ಯಾಹಟ್ಟಿ ಸರ್ಕಲ್ನ ಸುಳ್ಳ, ಹೆಬಸೂರ, ಕಿರೇಸೂರ, ಕುಸುಗಲ್ ಗ್ರಾಮದಲ್ಲಿ ಪಂಪ್ ಸೆಟ್ ಹೊಂದಿದ ರೈತರಿಗೆ ಇದು ಅನುಕೂಲವಾಗಲಿದೆ. ಲೋಡ್ ಶೆಡ್ಡಿಂಗ್ ಹಿನ್ನೆಲೆ ರೈತರಿಗೆ ಇದೀಗ ಕೇವಲ ಐದು ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಕೆಲವೆಡೆ ಐದು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂಬ ಆರೋಪವೂ ಇದೆ.
ಇದನ್ನೂ ಓದಿ: ವಿದ್ಯುತ್ ಕಣ್ಣಾ ಮುಚ್ಚಾಲೆ: ಅನಧಿಕೃತ ಲೋಡ್ ಶೆಡ್ಡಿಂಗ್ನಿಂದ ಯಾದಗಿರಿ ಜಿಲ್ಲೆಯ ರೈತರು ಕಂಗಾಲು
ಅಷ್ಟು ಮಾತ್ರವಲ್ಲದೆ, ಕರೆಂಟ್ ಯಾವಾಗ ಹೋಗುತ್ತದೆ, ಯಾವಾಗ ಬರತ್ತದೆ ಎಂಬುದರ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ರೈತರು ರಾತ್ರಿ ಇಡೀ ಜಮೀನಿನಲ್ಲಿ ಕಾಯುತ್ತಿರುತ್ತಾರೆ. ಈ ಸಮದ್ಯೆ ದೂರ ಮಾಡಲು ರೈತರಿಗೆ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಮಾಹಿತಿ ರವಾನೆ ಮಾಡಲಾಗುತ್ತದೆ.
ವಿದ್ಯುತ್ ಎಷ್ಟು ಗಂಟೆಗೆ ಬರತ್ತದೆ, ಎಷ್ಟು ವ್ಯತ್ಯಯ ಆಗಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ಆರೇಳು ಜಿಲ್ಲಾ ವ್ಯಾಪ್ತಿಯ ಹೆಸ್ಕಾಂನಲ್ಲಿ ಬ್ಯಾಹಟ್ಟಿ ಸರ್ಕಲ್ನಲ್ಲಿ ಮಾಡಿರುವ ಈ ಪ್ರಯೋಗ ಯಶಸ್ವಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sat, 21 October 23