ರಾಜ್ಯದಲ್ಲಿ PSI ನೇಮಕಾತಿ ಹಗರಣದ ಬೆನ್ನಲ್ಲಿಯೇ KPSC ಮತ್ತೊಂದು ಎಡವಟ್ಟು
ಒಂದಾದ ಮೇಲೆ ಒಂದು ಎಡವಟ್ಟು ಮಾಡುತ್ತಲೇ ಇರುವ ಕರ್ನಾಟಕ ಲೋಕಸೇವಾ ಆಯೋಗ ಈ ಹಿಂದೆ ಮಾಡಿದ್ದ ಎಡವಟ್ಟುವೊಂದನ್ನು ಸರಿಪಡಿಸುವ ಬದಲಿಗೆ, ಪುನಃ ತನ್ನ ಗೊಂದಲದ ಧೋರಣೆಯನ್ನು ಮುಂದುವರೆಸಿಕೊಂಡೇ ಹೋಗಿದೆ. ಅದೀಗ ಹೊರಗೆ ಬಂದಿದೆ. ಏನೋ ಮಾಡಲು ಹೋಗಿ ಏನೋ ಮಾಡಿರುವ ಆಯೋಗ ಅನೇಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಏನದು ಸಮಸ್ಯೆ? ಇಲ್ಲಿದೆ ನೋಡಿ.
ಧಾರವಾಡ, ಅ.22: ರಾಜ್ಯದಲ್ಲಿ ಪಿಎಸ್‌ಐ(PSI) ನೇಮಕಾತಿ ಪರೀಕ್ಷೆ ಅಕ್ರಮ ಬಯಲಾದ ಬೆನ್ನಲ್ಲಿಯೇ ಕೆಪಿಎಸ್‌ಸಿ ಯಿಂದ ನಡೆಸಲಾಗಿದ್ದ ಗೆಜೆಟೆಡ್ ಪ್ರೊಬೇಷನರಿ(Gazetted Probationary) ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, 2019ರ ಡಿಸೆಂಬರ್ 12ರಂದು ಮತ್ತು ಅಂತಿಮ ಪಟ್ಟಿಯನ್ನು 2020ರ ಜನೆವರಿ 1ರಂದು ಪ್ರಕಟಿಸಲಾಗಿತ್ತು. ಆದರೆ, ಇದರಲ್ಲಿ ಅಕ್ರಮ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಪರೀಕ್ಷೆಯಲ್ಲಿ ಅಂಕ ನೀಡುವಲ್ಲಿ ಕೆಪಿಎಸ್‌ಸಿ ಎಡವಟ್ಟು ಮಾಡಿದೆ ಎಂದು ಅನೇಕ ಅಭ್ಯರ್ಥಿಗಳು ಆರೋಪಿಸಿದ್ದರು. ಆದರೆ, ಆರೋಪ ಮಾಡಿದ್ದ ಅಭ್ಯರ್ಥಿಗಳ ಬಳಿ ಯಾವುದೇ ದಾಖಲೆಗಳೇ ಇರಲಿಲ್ಲ. ಏಕೆಂದರೆ ಆರ್‌ಟಿಐ ಅಡಿಯಲ್ಲಿ ದಾಖಲೆ ಕೇಳಿದರೂ ಉತ್ತರ ಪತ್ರಿಕೆಯ ಝೆರಾಕ್ಸ್ ಪ್ರತಿಗಳನ್ನು ನೀಡಿರಲಿಲ್ಲ.
ಅಕ್ರಮದ ಬಗ್ಗೆ ತನಿಖೆ ನಡೆಯಬೇಕೆಂದು ನೊಂದ ಅಭ್ಯರ್ಥಿಗಳ ಆಗ್ರಹ
ಕೊನೆಗೂ ಕೋರ್ಟ್ ಮೊರೆ ಹೋದ ಬಳಿಕ 2 ವರ್ಷ 7 ತಿಂಗಳ ನಂತರ ಈಗ ಕೆಪಿಎಸ್‌ಸಿ ನಕಲು ಅಂಕ ಪ್ರತಿಗಳನ್ನು ನೀಡುವುದಕ್ಕೆ ಆರಂಭಿಸಿದೆ. ಅವುಗಳನ್ನು ನೋಡಿದಾಗ ಅಂಕಗಳನ್ನು ತಿದ್ದಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಈ ಅಕ್ರಮದ ಬಗ್ಗೆ ತನಿಖೆ ನಡೆಯಬೇಕೆಂದು ನೊಂದ ಅಭ್ಯರ್ಥಿಗಳು ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಸದ್ಯ ತಮ್ಮ ಕೈಗೆ ಸಿಕ್ಕಿರುವ ಅಂಕಪಟ್ಟಿಗಳನ್ನು ಪರಿಶೀಲಿಸಿ ನೋಡಿದಾಗ ಕೆಪಿಎಸ್‌ಸಿ ಮಹಾ ಎಡವಟ್ಟು ಮಾಡಿರುವುದು ಮಾತ್ರವಲ್ಲ, ಡಿಜಿಟಲ್ ಅಂಕಪಟ್ಟಿಯನ್ನೇ ಮ್ಯಾನುವಲ್ ಆಗಿ ತಿದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:PSI ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್
ಅಂಕಪಟ್ಟಿಯಲ್ಲಿ ಗೊಂದಲ
ಅಭ್ಯರ್ಥಿಗಳ ಕೈಗೆ ಸಿಕ್ಕಿರುವ ಅಂಕಪಟ್ಟಿಗಳನ್ನು ನೋಡಿದಾಗ, ಕೆಲವೊಂದು ಸರಿಯಾದ ಉತ್ತರಗಳಿಗೆ ಸೊನ್ನೆ ಅಂಕ ನೀಡಿದರೆ, ಉತ್ತರವನ್ನೇ ಬರೆಯದೇ ಹಾಗೆಯೇ ಖಾಲಿ ಬಿಟ್ಟ ಪುಟಗಳಿಗೆ ಅಂಕಗಳನ್ನು ನೀಡಲಾಗಿದೆ. ಯಾವ ಪ್ರಶ್ನೆಗಳಿಗೆ ಉತ್ತರ ಬರೆದಿರುವುದಿಲ್ಲವೋ ಅಲ್ಲಿ NA ಅಂದರೆ ನಾಟ್ ಅಟೆಮ್ಟೆಡ್ ಎಂದು ನಮೂದಿಸಬೇಕು. ಆದರೆ, ಅದರ ಬದಲಿಗೆ ಅಲ್ಲಿ ಅಂಕಗಳನ್ನು ಹಾಕಿದ್ದಾರೆ. ಹೀಗೆಯೇ ಅನೇಕ ಅಂಕಪಟ್ಟಿಗಳಲ್ಲಿ ಕಂಡು ಬಂದಿದ್ದು, ಹೀಗೆಯೇ ಮಾಡುತ್ತ ಹೋದರೆ ನಿಜವಾದ ಪ್ರತಿಭೆಗಳ ಗತಿ ಏನು ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವರ್ಷಗಟ್ಟಲೇ ಕಷ್ಟಪಟ್ಟು ಓದುತ್ತಿರುವವರ ಭವಿಷ್ಯದ ಗತಿ ಏನು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.
ಲೋಕ ಸೇವಾ ಆಯೋಗ ಅಂದ ಕೂಡಲೇ ಎಲ್ಲರಿಗೂ ಒಂದು ಕ್ಷಣ ಅನುಮಾನ ಬರುವಂತಾಗಿದೆ. ಏಕೆಂದರೆ ಹಿಂದೆ ನಡೆದಿರುವ ಅನೇಕ ಅಕ್ರಮಗಳೇ ಇದಕ್ಕೆ ಕಾರಣ. ಈ ಪ್ರಕರಣದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಪಿಎಸ್‌ಸಿ ಮಾಡಿರುವ ತಪ್ಪಿನಿಂದ ಈಗ ಅಮಾಯಕರು ಶಿಕ್ಷೆ ಅನುಭವಿಸುವಂತಾಗಿದೆ. ಇದನ್ನು ಸರ್ಕಾರವೇ ಸರಿ ಮಾಡಬೇಕು. ಇಲ್ಲದೇ ಹೋದಲ್ಲಿ ನಾವು ಪುನಃ ನ್ಯಾಯಾಂಗ ಹೋರಾಟ ಮಾಡಬೇಕಾಗುತ್ತದೆ ಎಂದು ವಂಚಿತ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದಾರೆ,
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ