ಧಾರವಾಡ: ಜಿಲ್ಲೆಯಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ವೀರಸೋಮೇಶ್ವರ ಶಿವಾಚಾರ್ಯರು ಬಂಡಾಯ ಸಾಹಿತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿಯೂ ಮಾತನಾಡಿದ್ದಾರೆ.
ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನ್ಸೋತ್ಸವದಲ್ಲಿ ಬಂಡಾಯ ಸಾಹಿತಿಗಳ ವಿರುದ್ಧ ರಂಭಾಪುರಿ ಜಗದ್ಗುರು ವಾಗ್ದಾಳಿ ನಡೆಸಿದ್ದಾರೆ. ಕೆಲ ಶ್ರೀಗಳು, ಬಂಡಾಯ ಸಾಹಿತಿಗಳು ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ. ಕೈಯಲ್ಲಿ ಯಾಕೆ ಬಳೆ ಹಾಕುತ್ತೀರಿ, ಹಣೆಗೆ ಯಾಕೆ ಕುಂಕುಮ? ತಲೆಗೆ ಹೂವು ಯಾಕೆ?, ದೇವರಿಗೆ ಅಭಿಷೇಕ ಏಕೆ ಅಂತಾರೆ. ಮದುವೆಯಲ್ಲಿ ಮಂಗಳಾತಕ್ಷತೆ ಪ್ರಶ್ನಿಸುತ್ತಾರೆ. ಅವರು ಇದನ್ನೆಲ್ಲ ಮಾಡಬೇಡಿ ಎಂದು ಕೂಡ ಹೇಳುತ್ತಾರೆ. ಅವರು ನಮ್ಮ ಮತ್ತು ನಿಮ್ಮ ಸಂಬಂಧ ಛಿದ್ರ ಮಾಡುತ್ತಿದ್ದಾರೆ. ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಯಾರು ಏನೇ ಮಾಡಿದ್ರೂ ಮೂಲ ಧರ್ಮದ ಸ್ವರೂಪ ಬದಲಿಸಲಾಗಲ್ಲ. ಅದು ಎಂದೂ ಸಾಧ್ಯವಾಗದ ಕೆಲಸ. ಭದ್ರ ಬುನಾದಿಯನ್ನು ಜಗದ್ಗುರು ಪಂಚಾಚಾರ್ಯರು ಹಾಕಿದ್ದಾರೆ. ಇದನ್ನು ನಮ್ಮವರು ಹೇಳುತ್ತಲೇ ಇದ್ದಾರೆ. ಆದರೆ ಅಂಥವರಿಗೆ ಧ್ವನಿ ಇಲ್ಲದಂತಾಗಿದೆ. ಅಂಥವರಿಗೆ ನಾವು ಧ್ವನಿ ಕೊಡಬೇಕಿದೆ ಎಂದು ಬಂಡಾಯ ಸಾಹಿತಿಗಳ ವಿರುದ್ಧ ರಂಭಾಪುರಿ ಜಗದ್ಗುರು ವಾಗ್ದಾಳಿ ನಡೆಸಿದ್ದಾರೆ.
ಕೆಲವರು ಪೀಠಗಳ ಅಪಪ್ರಚಾರ ಮಾಡುತ್ತಿದ್ದಾರೆ. ಅವೆಲ್ಲ ಮೂಢನಂಬಿಕೆ ಎನ್ನುತ್ತಿದ್ದಾರೆ. ಅಂಥವರ ಮಾತಿಗೆ ಸಂಘರ್ಷ ನಡೆಸಲು ಪೀಠಗಳು ಅವಕಾಶ ಕೊಟ್ಟಿಲ್ಲ. ಆರೋಗ್ಯಪೂರ್ಣ ಸಮಾಜಕ್ಕಾಗಿ ಪೀಠಗಳು ಶ್ರಮಿಸುತ್ತಿವೆ. ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿಸಿದವರು. ಅವರು ಸಮಾಜದ ಶಾಂತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದವರು. ಅವರು ಧಾರವಾಡದಲ್ಲಿ ಸಮಾಜದ ಅಧಿವೇಶನ ಮಾಡಿದ್ದರು. ಆಗ ಹತ್ತು ನಿಬಂಧನೆಗಳನ್ನು ಬರೆದಿಟ್ಟಿದ್ದಾರೆ. ಆ ನಿಬಂಧನೆಗಳನ್ನು ಕಣ್ಣಿಗೊತ್ತಿ ಗೌರವಿಸಬೇಕು. ಆದರೆ ಕೆಲವರು ಆ ನಿಬಂಧನೆಗಳನ್ನು ಗಾಳಿಗೆ ತೂರಿದ್ದಾರೆ. ಕೆಲವರು ಶ್ವೇಚ್ಛಾಚಾರಿಗಳಾಗಿದ್ದಾರೆ. ಅವರೆಲ್ಲ ವೀರಶೈವ ಧರ್ಮ ಇಬ್ಭಾಗ ಮಾಡಲು ಹೊರಟಿದ್ದಾರೆ. ಜಾತಿ ವ್ಯವಸ್ಥೆಯಲ್ಲಿ ಧರ್ಮಗಳನ್ನು ಕುಲಗೆಡಿಸುವ ಕೆಲಸ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.
ವಿಜ್ಞಾನ ಬೆಳೆದಷ್ಟೂ ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ
ಇದೇ ವೇಳೆ, ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿ ರಂಭಾಪುರಿ ಜಗದ್ಗುರುಗಳು ಮಾತನಾಡಿದ್ದಾರೆ. ವಿಜ್ಞಾನದಲ್ಲಿ ಬಹಳ ಬೆಳೆದಿದ್ದೇವೆ. ವಿಜ್ಞಾನ ಬೆಳೆದಷ್ಟೂ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ವಿಜ್ಞಾನ ಮನುಷ್ಯನ ಜೀವನ ವಿಕಾಸಕ್ಕೆ ಕಾರಣ ಆಗಬೇಕು. ಮನುಕುಲದ ವಿನಾಶಕ್ಕೆ ಕಾರಣ ಆಗಬಾರದು. ರಷ್ಯಾ-ಉಕ್ರೇನ್ ದೇಶದ ಯುದ್ಧ ನಡೆಯುತ್ತಿದೆ. ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಎಷ್ಟೋ ಜನ ನೋವು ಅನುಭವಿಸುತ್ತಿದ್ದಾರೆ. ದೇಶದ ಮುಖ್ಯಸ್ಥರು ಜನ ಕಲ್ಯಾಣಕ್ಕೆ ವಿಜ್ಞಾನ ಬಳಸಬೇಕು. ಜನರ ವಿನಾಶಕ್ಕೆ ಖಂಡಿತ ಬಳಸಬಾರದು. ಸಮಾಜದಲ್ಲಿ ನಾಗರಿಕತೆ ಬೆಳೆಯುತ್ತಿದೆ. ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆ ನಡೆಯುತ್ತಿದೆ. ನಿತ್ಯವೂ ಅನಾಗರಿಕ ವರ್ತನೆ ನೋಡುತ್ತಿದ್ದೇವೆ. ಪರಂಪರೆಯಿಂದ ಬಂದ ಸಂಸ್ಕೃತಿ ಮರೆಯುತ್ತಿದ್ದೇವೆ. ನಾಗರಿಕತೆ ಜೊತೆಗೆ ಸಂಸ್ಕೃತಿಯನ್ನೂ ಬೆಳೆಸಬೇಕು ಎಂದರು.
ಇದನ್ನೂ ಓದಿ: ಮತ್ತೆ ಮುಸ್ಲಿಂ ಗೂಂಡಾಗಳು ಎಂದು ಪುನರುಚ್ಚರಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ
Niharika Konidela: ‘ನಿಹಾರಿಕಾಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’; ಚಿರು ಸಹೋದರ ನಾಗಬಾಬು ಹೇಳಿಕೆ