ತಡವಾಗಿ ಕ್ಲೇಮ್ ಎಂದು ಅಪಘಾತ ವಿಮೆ ತಿರಸ್ಕಾರ: ಪರಿಹಾರ ಕೊಡಲು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2023 | 10:55 PM

ಅಪಘಾತ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಬರೋಬ್ಬರಿ ರೂ. 15.60 ಲಕ್ಷ ದಂಡ ಮತ್ತು ಪರಿಹಾರ ನೀಡಲು ಮಹತ್ವದ ಆದೇಶ ಮಾಡಿದೆ.

ತಡವಾಗಿ ಕ್ಲೇಮ್ ಎಂದು ಅಪಘಾತ ವಿಮೆ ತಿರಸ್ಕಾರ: ಪರಿಹಾರ ಕೊಡಲು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ಹುಬ್ಬಳ್ಳಿ, ಜುಲೈ 14: ಅಪಘಾತ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ (insurance company) ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಬರೋಬ್ಬರಿ ರೂ. 15.60 ಲಕ್ಷ ದಂಡ ಮತ್ತು ಪರಿಹಾರ ನೀಡಲು ಮಹತ್ವದ ಆದೇಶ ಮಾಡಿದೆ. ಹುಬ್ಬಳ್ಳಿಯ ಆನಂದನಗರದ ಅಶ್ವಿನಿ ಹೂಲಿಮಠ ಅವರ ತಂದೆ ಪ್ರೇಮಕುಮಾರ, ತಾಯಿ ರೂಪಾ ಹುಬ್ಬಳ್ಳಿಯ ವಿಜಯ ಬ್ಯಾಂಕ್​ನಿಂದ ರೂ. 15.15 ಲಕ್ಷ ಗೃಹ ಸಾಲ ಪಡೆದಿದ್ದರು. ಆ ಸಾಲದ ಮೇಲೆ ರೂ. 5,434 ಕೊಟ್ಟು ಯುನೈಟೆಡ್ ಇಂಡಿಯಾ ವಿಮೆ ಕಂಪನಿಯಿಂದ ರೂ. 20 ಲಕ್ಷ ಮೊತ್ತಕ್ಕೆ ವಿಮೆ ಮಾಡಿಸಿದ್ದರು.

ವಿಮೆ 2017 ರ ಫೆಬ್ರುವರಿವರೆಗೂ ಚಾಲ್ತಿಯಲ್ಲಿತ್ತು. 2015 ರ ಡಿಸೆಂಬರ್ 26 ರಂದು ಕುಮುಟಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ವಿಮೆ ಹೊಂದಿದ್ದ ರೂಪಾ ಮೃತಪಟ್ಟಿದ್ದರು. ನಂತರ 2019 ರಲ್ಲಿ ಮೃತ ರೂಪಾ ಅವರ ಪತಿ ಪ್ರೇಮಕುಮಾರ ಸಹ ಮೃತಪಟ್ಟಿದ್ದರು.

ಇದನ್ನೂ ಓದಿ: Dharawad News: ಪಿಎಂಎಸ್ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾಕ್ಕೆ 60 ಸಾವಿರ ದಂಡ; ವಿಮೆ ಹಣ 2 ಲಕ್ಷ ಪಾವತಿಗೆ ಆದೇಶ

ಅಷ್ಟರಲ್ಲಿ ಮನೆಗೆ ಮನೆ ಸಾಲ ತೀರಿಸಲು ವಿಜಯ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಆಗ ತಮ್ಮ ಬಳಿ ಇರುವ ವಿಮೆ ದಾಖಲಾತಿಗಳನ್ನು ಬ್ಯಾಂಕ್‌ಗೆ ತೋರಿಸಿ ವಿಮೆ ಪರಿಹಾರ ಕೇಳಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ವಿಮಾ ಕಂಪನಿಯವರು ದೂರುದಾರರ ಕ್ಲೇಮ್ ಅರ್ಜಿಗೆ ಉತ್ತರಿಸಿ, ಕ್ಲೇಮ್ ಅರ್ಜಿ ಸಲ್ಲಿಸಲು ತಡವಾಗಿದೆ ಎನ್ನುವ ಕಾರಣ ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅಶ್ವಿನಿ ಅವರು ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಮೃತ ರೂಪಾ ಅವರು ಪಡೆದ ವಿಮೆ ಚಾಲ್ತಿಯಿದ್ದಾಗಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dharwad News: ದೋಷಯುಕ್ತ ಮೊಬೈಲ್ ಸರಬರಾಜು: ಆಸಿಸ್ ಕಂಪನಿಗೆ ರೂ. 78 ಸಾವಿರ ದಂಡ

ವಿಮಾ ಕಂಪನಿಯ ನಿಯಮಾವಳಿಯಂತೆ ವಿಮಾ ಹಣವನ್ನು ವಿಮಾದಾರರಿಗೆ ಕೊಡುವುದು ಅವರ ಕರ್ತವ್ಯ. ಕ್ಲೇಮ್ ಅರ್ಜಿ ಸಲ್ಲಿಸಲು ತಡವಾಗಿದೆ ಎಂಬ ಕಾರಣದಿಂದ ಅರ್ಜಿಯನ್ನು ತಿರಸ್ಕರಿಸುವುದು ನ್ಯಾಯಸಮ್ಮತವಲ್ಲ ಎಂದು ತಿಳಿಸಿ, ವಿಮಾ ಒಪ್ಪಂದದಂತೆ ರೂ. 15 ಲಕ್ಷ ವಿಮೆ ಹಣವನ್ನು ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆದೇಶ ನೀಡಿದೆ.

ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ. 50 ಸಾವಿರ ಪರಿಹಾರ ಮತ್ತು ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.