ಹಿರಿಯ ಸಾಹಿತಿ, ಪ್ರಕಾಶಕ ಡಾ‌. ರಮಾಕಾಂತ ಜೋಶಿ ನಿಧನ

ಧಾರವಾಡದ ಪ್ರಸಿದ್ಧ ಪ್ರಕಾಶಕರಾದ ಡಾ. ರಮಾಕಾಂತ ಜೋಶಿ (89) ಅವರು ನಿಧನರಾಗಿದ್ದಾರೆ. ಮನೋಹರ ಗ್ರಂಥಮಾಲಾ ಸಂಪಾದಕರಾಗಿದ್ದ ಜೋಶಿ ಅವರು ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅನೇಕ ಗ್ರಂಥಗಳನ್ನು ಸಂಪಾದಿಸಿ, ರಚಿಸಿ ಮತ್ತು ಅನುವಾದಿಸಿದ್ದರು. ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಹಿರಿಯ ಸಾಹಿತಿ, ಪ್ರಕಾಶಕ ಡಾ‌. ರಮಾಕಾಂತ ಜೋಶಿ ನಿಧನ
ಸಾಹಿತಿ ರಮಾಕಾಂತ್​ ಜೋಶಿ
Edited By:

Updated on: May 17, 2025 | 9:12 PM

ಧಾರವಾಡ, ಮೇ 17: ಧಾರವಾಡದ ಹಿರಿಯ ಸಾಹಿತಿ, ಪ್ರಕಾಶಕ ಡಾ‌. ರಮಾಕಾಂತ ಜೋಶಿ (89) ನಿಧನರಾಗಿದ್ದಾರೆ. ಧಾರವಾಡದ (Dharwad) ಪ್ರಸಿದ್ಧ ಮನೋಹರ ಗ್ರಂಥಮಾಲಾ‌ ಸಂಪಾದಕ, ವ್ಯವಸ್ಥಾಪಕಾಗಿದ್ದ ಜೋಶಿ ಅವರು ಆರಂಭದಲ್ಲಿ ಕಿಟೆಲ್ ಕಾಲೇಜ್​ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಗ್ರಂಥಗಳ ಸಂಪಾದನೆ, ರಚನೆ, ಇಂಗ್ಲಿಷ್​ನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದರು.

ಮನೋಹರ ಗ್ರಂಥಮಾಲಾ ಸ್ಥಾಪಕರಾದ ಜಿ ಬಿ ಜೋಶಿಯವರ ಮಗನಾದ ಡಾ.ರಮಾಕಾಂತ ಜೋಶಿಯವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಹೆಚ್​ಡಿ ಪದವಿ ಪಡೆದಿದ್ದರು. ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದರು ಮತ್ತು ಅನುವಾದ ಕಾರ್ಯವನ್ನು ಸಹ ಮಾಡಿದ್ದರು. ದೀನಾನಾಥ ಮಲ್ಹೋತ್ರಾ ಅವರು ಇಂಗ್ಲಿಷಿನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿಕೊಂಡಿದೆ.

1993 ಡಿಸೆಂಬರ್ 26 ರಂದು ಜಿ ಬಿ ಜೋಶಿಯವರು ನಿಧನರಾದ ನಂತರ ಮನೋಹರ ಗ್ರಂಥಮಾಲಾದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಡೆಸಿದ್ದರು. ಅನೇಕ ಪ್ರಶಸ್ತಿಗಳಿಗೆ, ಮಾನ ಸನ್ಮಾನಗಳಿಗೆ ಭಾಜನರಾಗಿದ್ದರು. ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ‘ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಆಳ್ವಾ ನುಡಿಸಿರಿ’ ಪ್ರಶಸ್ತಿ, ‘ಕನಕದಾಸ ಪ್ರಶಸ್ತಿ’, ಕನ್ನಡ ಪುಸ್ತಕ ಪ್ರಾಧಿಕಾರದ 2007 ರ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ರಮಾಕಾಂತ ಅವರ ಅಂತ್ಯಕ್ರಿಯೆ ರವಿವಾರ (ಮೇ.18) ರಂದು ಬೆಳಿಗ್ಗೆ 10.00 ಗಂಟೆಗೆ ಧಾರವಾಡ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಿಗ್ಗೆ 09.00 ರಿಂದ 10.00 ರ ವರೆಗೆ ಧಾರವಾಡದ ಮಂಗಳವಾರ ಪೇಟೆ, ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ