ವಿದ್ಯುತ್ ಕಂಪನಿಗಳಿಗೆ 12,642 ಕೋಟಿ ಬಿಲ್ ಬಾಕಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸರ್ಕಾರಕ್ಕೆ ಪತ್ರ
ಗೃಹಜ್ಯೋತಿ ಹಾಗೂ ಸರ್ಕಾರಿ ಕಚೇರಿಗಳ ವಿದ್ಯುತ್ ಬಳಕೆಯ 12,642 ಕೋಟಿ ರೂ. ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಮುಂದೆ ಜನಸಾಮಾನ್ಯರಿಗೆ ದರ ಏರಿಕೆ ಬಿಸಿ ತಟ್ಟುವ ಆತಂಕ ವ್ಯಕ್ತಪಡಿಸಿದೆ. ಜನರು ವಿದ್ಯುತ್ ಬಿಲ್ ಕಟ್ಟದೆ ಇದ್ದರೆ ಸಂಪರ್ಕ ಕಡಿತ ಮಾಡಲಾಗುತ್ತದೆ. ಆದರೆಸರ್ಕಾರದ ಅನೇಕ ಕಚೇರಿಗಳು ಅನೇಕ ವರ್ಷಗಳಿಂದ ಕೋಟಿ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಹುಬ್ಬಳ್ಳಿ, ನವೆಂಬರ್ 18: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳಿಗೆ ಮತ್ತು ಬೀದಿ ದೀಪಗಳಿಗಾಗಿ ಪೂರೈಸಿರುವ ವಿದ್ಯುತ್ನ ಸಾವಿರಾರು ಕೋಟಿ ರೂಪಾಯಿ ಬಿಲ್ ಸರ್ಕಾರದಿಂದ ವಿದ್ಯುತ್ ಕಂಪನಿಗಳಿಗೆ ಮರುಪಾವತಿಯಾಗದೆ ಬಾಕಿ ಉಳಿದುಕೊಂಡಿದೆ. ಹೀಗೆ ಅನೇಕ ವರ್ಷಗಳಿಂದ ಪೆಂಡಿಂಗ್ ಇರುವ ಅವುಗಳ ಮೊತ್ತವೀಗ ಬರೋಬ್ಬರಿ 12,642 ಕೋಟಿ ರೂಪಾಯಿಗಳಾಗಿವೆಯಂತೆ. ಈ ಬಾಕಿ ಹಣವನ್ನು ಸರ್ಕಾರ ವಿದ್ಯುತ್ ಕಂಪನಿಗಳಿಗೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದೆ. ಬಾಕಿ ಹಣವನ್ನು ಸರ್ಕಾರದಿಂದ ಪಡೆಯಲು ಕ್ರಮ ಕೈಗೊಳ್ಳುವಂತೆ ಇಂಧನ ಇಲಾಖೆಯನ್ನು ಕೂಡ ಆಗ್ರಹಿಸಿದೆ.
ಮುಂದೆ ಜನ ಸಾಮಾನ್ಯರು, ಕೈಗಾರಿಕೆಗಳಿಗೆ ಹೊರೆಯಾಗುವ ಆತಂಕ
ಸರ್ಕಾರ ಬಾಕಿ ಹಣವನ್ನು ವಿದ್ಯುತ್ ಕಂಪನಿಗಳಿಗೆ ಪಾವತಿ ಮಾಡದೇ ಇರುವ ಕಾರಣ ಮುಂದೆ ಜನರ ಮೇಲೆ ಮತ್ತು ಕೈಗಾರಿಕೆಗಳ ಮೇಲೆ ಹೊರೆ ಬೀಳಲಿದೆ ಎಂಬ ಕಾರಣಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದೆ. ಇದು ಹೀಗೆಯೇ ಮುಂದುವರಿದರೆ ಕೆಲ ವರ್ಷಗಳ ನಂತರ ಸರ್ಕಾರ ಬಾಕಿ ಬಿಲ್ ಮನ್ನಾ ಮಾಡಬಹುದು. ಇದರಿಂದ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟವನ್ನು ಅನುಭವಿಸಲಿವೆ. ಆಗ ಅದನ್ನು ಸರಿದೂಗಿಸಲು ವಿದ್ಯುತ್ ದರ ಹೆಚ್ಚಳದ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹೊರಿಸಲಾಗುತ್ತೆ. ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಪೂರೈಸುವ ವಿದ್ಯುತ್ ದರದಲ್ಲೂ ಏರಿಕೆಯಾಗಲಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿವೆ ಎನ್ನುವುದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಭಿಪ್ರಾಯವಾಗಿದೆ.
ಹೀಗಾಗಿ ಸರ್ಕಾರ ಪಾರದರ್ಶಕವಾಗಿ ಬಳಕೆ ಮಾಡಿದ ವಿದ್ಯುತ್ಗೆ ಪ್ರತಿಫಲವಾಗಿ ಬಿಲ್ ಪಾವತಿ ಮಾಡಬೇಕು. ಜನರು ವಿದ್ಯುತ್ ಬಿಲ್ ಕಟ್ಟದೆ ಇದ್ದರೆ ಸಂಪರ್ಕ ಕಡಿತ ಮಾಡಲಾಗುತ್ತದೆ. ಆದರೆಸರ್ಕಾರದ ಅನೇಕ ಕಚೇರಿಗಳು ಅನೇಕ ವರ್ಷಗಳಿಂದ ಕೋಟಿ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಇನ್ನಾದರೂ ಈ ಸಂಬಂಧ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯನ್ನು ಸಂಪರ್ಕಿಸಲಾಗಿತ್ತಾದರೂ ಹೆಸ್ಕಾಂ ಯಾವುದೇ ಮಾಹಿತಿ ನೀಡಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




