ಧಾರವಾಡ, ಆ.26: ಪ್ರತಿ ಸಲ ಗಣೇಶ ಚತುರ್ಥಿ (Ganesh Chaturthi) ಬಂದಾಗ ಪರಿಸರ ಮಾಲಿನ್ಯದ್ದೇ ದೊಡ್ಡ ಚರ್ಚೆಯಾಗುತ್ತದೆ. ಈ ಹಬ್ಬದಲ್ಲಿಯೇ ಹೆಚ್ಚು ಪರಿಸರಕ್ಕೆ ಹಾನಿಯಾಗುತ್ತೆ ಎನ್ನುವ ದೊಡ್ಡ ಚರ್ಚೆಗಳೇ ಶುರುವಾಗಿ ಬಿಡುತ್ತವೆ. ಅದರಲ್ಲಿಯೂ ಪಿಓಪಿ(POP) ಗಣಪತಿ ಮೂರ್ತಿಗಳ (Ganesh Idol) ಕಾರಣಕ್ಕೆ ನೀರಿನ ಮೂಲಗಳೇ ಹಾಳಾಗಿ ಹೋಗುತ್ತಿವೆ. ಇದೇ ಕಾರಣಕ್ಕೆ 2016ರಿಂದಲೇ ರಾಜ್ಯದಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಲಾಗಿದೆ. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಆದಾಗ್ಯೂ ಕೂಡ ಧಾರವಾಡದ (Dharwad) ಮಾರುಕಟ್ಟೆಯಲ್ಲಿ ಮಣ್ಣಿನ ಮೂರ್ತಿಗಳ ಹೆಸರಿನಲ್ಲಿ ಪಿಓಪಿ ಮೂರ್ತಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಕೆಲವರು ಕೇಳುತ್ತಲೇ ಇಲ್ಲ. ಈಗ ಹಬ್ಬ ಕೂಡ ಸಮೀಪಕ್ಕೆ ಬಂದಿದ್ದು, ಅಲ್ಲಲ್ಲಿ ಪಿಓಪಿ ಮೂರ್ತಿಗಳನ್ನು ರಾಜಾರೋಷವಾಗಿ ಮಾರುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿರ್ದೇಶನದಂತೆ ಈಗ ಖುದ್ದು ಧಾರವಾಡ ಉಪವಿಭಾಗಾಧಿಕಾರಿ ಅಶೋಕ ತೇಲಿ ನೇತೃತ್ವದಲ್ಲಿಯೇ ಅಧಿಕಾರಿಗಳ ತಂಡ ಫಿಲ್ಡ್ಗಿಳಿದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು6 ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ಮಾಡುತ್ತಿರುವ ಉಪವಿಭಾಗಾಧಿಕಾರಿ, ಪಿಓಪಿ ಮೂರ್ತಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿದ್ದಾರೆ. ಮೊದಲ ಹಂತದ ದಾಳಿಯಲ್ಲಿಯೇ ಕೆಲವು ವ್ಯಾಪಾರಿಗಳು ಪಿಓಪಿ ಮೂರ್ತಿಗೆ ಮಣ್ಣಿನ ಲೇಪನ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಚಾಪೆ ಕೆಳಗೆ ನುಗ್ಗಿದರೆ, ತಾವು ರಂಗೋಲಿ ಕೆಳಗೆ ನುಗ್ಗೋ ಲೆಕ್ಕಾಚಾರದಲ್ಲಿದ್ದ ಕೆಲ ಮಾರಾಟಗಾರರು ಸಿಕ್ಕಿ ಬಿದ್ದಿದ್ದಾರೆ.
ಇನ್ನು ಕೆಲವೊಂದು ಕಡೆ ಪಿಓಪಿ ಅಲ್ಲವೇ ಅಲ್ಲ, ನಮ್ಮ ಕಡೆ ಇರುವದು ಮಣ್ಣಿನ ಮೂರ್ತಿಗಳು ಎಂದು ಕೆಲವರು ವಾದ ಮಾಡಿದ್ದಾರೆ. ಹಾಗೇ ವಾದ ಮಾಡಿದ ಕಡೆಯಲ್ಲೆಲ್ಲ, ಮೂರ್ತಿಯ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಕೆಲವು ಕಡೆ ಮಣ್ಣು ಮಿಶ್ರಿತ ಪಿಓಪಿ, ಕೃತಕ ಬಣ್ಣ ಲೇಪಿತ ಪಿಓಪಿ, ಉಸುಕು ಮಿಶ್ರಿತ ಪಿಓಪಿ ಗಣಪತಿ ವಿಗ್ರಹಗಳು ಕಂಡು ಬಂದಿವೆ. ಎಲ್ಲವನ್ನೂ ತಪಾಸಣೆಗೊಳಪಡಿಸಲಾಗಿದೆ. ಇನ್ನು ಜನರು ಸಹ ಜಾಗೃತರಾಗಬೇಕು. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಪಿಓಪಿ ಮೂರ್ತಿ ಬಳಸಬಾರದು ಎಂದು ಅಧಿಕಾರಿಗಳು ಕೋರಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಸದ್ದಿಲ್ಲದೇ ಮಹಾರಾಷ್ಟ್ರದಿಂದ ಪಿಓಪಿ ಗಣೇಶ ಮೂರ್ತಿಗಳು ಬರುತ್ತಲೇ ಇವೆ. ಅದನ್ನು ತಡೆಯಲು ಈಗ ಜಿಲ್ಲಾಡಳಿತ ಪೊಲೀಸ್ ಇಲಾಖೆಗೂ ಸೂಚನೆ ನೀಡಿದೆ. ಜೊತೆಗೆ ಎಲ್ಲಿಯಾದರೂ ಪಿಓಪಿ ಮೂರ್ತಿಗಳ ಮಾರಾಟ ನಡೆದಿದ್ದರೆ ಜನರೇ ಮುಂದೆ ಬಂದು ಮಾಹಿತಿ ಕೊಡುವುದಕ್ಕಾಗಿಯೇ ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ. ಹೇಗಾದರೂ ಮಾಡಿ ಪಿಓಪಿ ಮುಕ್ತ ಗಣೇಶ ಹಬ್ಬ ಮಾಡುವುದಕ್ಕೆ ಜಿಲ್ಲಾಡಳಿತ ಕಂಕಣ ತೊಟ್ಟಿದ್ದು, ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Sat, 26 August 23