ಸ್ಯಾಂಟ್ರೋ ರವಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ
ಶೀಘ್ರದಲ್ಲೇ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸ್ಯಾಂಟ್ರೋ ರವಿ ಬಗ್ಗೆ ಎಲ್ಲಾ ರೀತಿಯ ತನಿಖೆಗೆ ಆದೇಶಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ: ಸ್ಯಾಂಟ್ರೋ ರವಿ (Santro Ravi) ವಿರುದ್ಧದ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆತನಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಗ್ಗೆ ಎಲ್ಲಾ ರೀತಿಯ ತನಿಖೆಗೆ ಆದೇಶಿಸಿದ್ದೇನೆ. ಈ ಹಿಂದೆ ಸ್ಯಾಂಟ್ರೋ ರವಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು. ಆದರೆ ಇದೆಲ್ಲ ಕಾಂಗ್ರೆಸ್ ಕಾಲದಲ್ಲಿ ನಡೆದಿರುವುದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಬಿಡುಗಡೆಯಾಗಿದ್ದ. ಸ್ಯಾಂಟ್ರೋ ರವಿದ್ದು 20 ವರ್ಷದ ಇತಿಹಾಸ ಇದೆ. ಯಾವ ಯಾವ ಸರ್ಕಾರ ಇತ್ತು, ಯಾವ ಯಾವ ಮಂತ್ರಿಗಳಿದ್ದರೂ, ಯಾರ ಜೊತೆ ಸಂಭಂದ ಇತ್ತು ಎಲ್ಲವೂ ತನಿಖೆ ಆಗಲಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.
ಸ್ಯಾಂಟ್ರೋ ರವಿ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಆತನ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಸದ್ಯ ಸ್ಯಾಂಟ್ರೋ ರವಿ ಹಿಂಬಾಲಕರ ವಿಚಾರಣೆ ನಡೆದಿದೆ. ಬೇರೆ ಬೇರೆ ಆಯಾಮದಲ್ಲಿ ತನಿಖೆ ಆಗುತ್ತಿದ್ದು, ಎಲ್ಲಾ ರೀತಿಯ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗುತ್ತದೆ. ಆತನ ಮೇಲೆ ದಾಖಲಾಗಿರುವ ಪ್ರತಿಯೊಂದು ಪ್ರಕರಣಗಳನ್ನು ತನಿಖೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ಮೈಸೂರಿನ ಒಡನಾಡಿ ಸಂಸ್ಥೆ
ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಕಲಿ ಪ್ರಕರಣ ದಾಖಲಿಸಿ ಬಂಧನ ಮಾಡಿರುವುದು ಗೊತ್ತಾಗಿದೆ. ಈಗಾಗಲೇ ವರದಿ ಸಿದ್ದಪಡಿಸಲಾಗಿದೆ. ಈ ಸಂಬಂಧ ಕಾನೂನು ಕ್ರಮ ಆಗುತ್ತದೆ. ಯಾವ ಅಧಿಕಾರಿ ಇದ್ದರೋ ಅವರ ವಿರುದ್ಧ ಕ್ರಮ ಅಗುತ್ತದೆ ಎಂದರು.
ಕುಮಾರಸ್ವಾಮಿ ಮಾತಿಗೆ ನಾನು ಏನೂ ಹೇಳಲ್ಲ ಎಂದು ಗೃಹಸಚಿವರು
ಸರ್ಕಾರವೇ ಸ್ಯಾಂಟ್ರೋ ರವಿಯನ್ನು ಬಚ್ಚಿಟ್ಟಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ಆರೋಪ ಸಂಬಂಧ ಮಾತನಾಡಿದ ಗೃಹಸಚಿವರು, ಕುಮಾರಸ್ವಾಮಿ ಮಾತಿಗೆ ನಾನು ಏನೂ ಹೇಳಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ಅವನನ್ನು ಬಂಧನ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅತಿ ಶೀಘ್ರವೇ ಆತನ ಬಂಧನ ಆಗುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ