ಧಾರವಾಡ: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಹಾಗೂ ನಟಿ ದೀಪಿಕಾ ಪಡುಕೋಣೆ (Deepika Padukone) ನಟಿಸಿರುವ ಹೊಸ ಚಿತ್ರ ಪಠಾಣ್ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿ ಡ್ರೆಸ್ ಬಣ್ಣದ ಬಗ್ಗೆಯೂ ವಿವಾದ ಹುಟ್ಟಿಕೊಂಡಿದೆ. ಪಠಾಣ್ ಸಿನಿಮಾ ಬಹಿಷ್ಕರಿಸಬೇಕೆಂದು ಧಾರವಾಡದಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್(Pramod Muthali) ಆಕ್ರೋಶ ಹೊರ ಹಾಕಿದ್ದಾರೆ.
ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನ ವಿವಾದ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರ ಬಹಿಷ್ಕಾರದ ಅಭಿಯಾನ ಶುರುವಾಗಿದೆ. ಶ್ರೀರಾಮ ಸೇನೆ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತದೆ. ಬಾಲಿವುಡ್ ಹಿಂದೂಗಳ, ಹಿಂದೂ ದೇವರ ಅವಹೇಳನ ಮಾಡುತ್ತ ಬಂದಿದೆ. ಹಿಂದೂ ಸ್ವಾಮೀಜಿ, ಧರ್ಮ ಗ್ರಂಥಗಳ ಅವಹೇಳನ ಹಿಂದಿನಿಂದ ಇದೆ. ಇದರ ಹಿಂದೆ ಮುಸ್ಲಿಂ ಲಾಬಿ ಇದೆ. ಗುಂಡಾಗಳನ್ನು ಹಿಂದೂಗಳನ್ನು ತೋರಿಸುತ್ತಾರೆ. ಒಳ್ಳೆ ಪಾತ್ರ ಮುಸ್ಲಿಂರಿಗೆ ಕೊಡುತ್ತಾರೆ. ಅನೇಕ ಸಿನಿಮಾಗಳಲ್ಲಿ ಹಿಂದೂಗಳ ಅವಹೇಳನ ನಡೆದಿದೆ. ಬೇಷರಂ ರಂಗ್ ಅಂತಾ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆ ಇದೆ. ಕೇಸರಿ ಬಣ್ಣ ಹಿಂದೂಗಳದ್ದು, ಬೇಕಂತಲೇ ಅದನ್ನು ಮಾಡಿದ್ದಾರೆ. ಅಶ್ಲೀಲ, ಅಸಭ್ಯವಾಗಿ ಬಟ್ಟೆ ಹಾಕಿದ ಹಾಡು ಇದು. ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದಾರೆ. ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು. ಅವರು ಹಿಂದೂಗಳಿಂದಲೇ ಹಿರೋ ಆಗಿದ್ದು. ಪಠಾಣ್ ಸಿನಿಮಾ ಬಹಿಷ್ಕಾರ ಆಗಬೇಕು ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: Besharam Rang: ಹೊಸ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
‘ಬೇಷರಂ ರಂಗ್..’ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ತುಂಬ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಅವರು ಇಷ್ಟೊಂದು ಎಕ್ಸ್ಪೋಸ್ ಮಾಡುವ ಅವಶ್ಯಕತೆ ಏನಿತ್ತು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೊಂದು ‘ಅಶ್ಲೀಲ ಸಾಂಗ್’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಸರಿಯಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
2023ರ ಜನವರಿ 25ರಂದು ‘ಪಠಾಣ್’ ಚಿತ್ರ ರಿಲೀಸ್ ಆಗಲಿದೆ. ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಟೀಸರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ.