ಶ್ರೀಘ್ರದಲ್ಲೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ?

|

Updated on: Dec 13, 2023 | 11:48 AM

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್​, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೊ ಅಥವಾ ಬೇಡವೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.

ಶ್ರೀಘ್ರದಲ್ಲೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ?
ಧಾರವಾಡ ಮಹಾನಗರ ಪಾಲಿಕೆ
Follow us on

ಧಾರವಾಡ, ಡಿಸೆಂಬರ್​ 13: ಎಲ್ಲವೂ ಅಂದುಕೊಂಡಂತೆ ನಡೆದರೆ ಹಲವು ದಶಕಗಳ ಬೇಡಿಕೆಯಾಗಿರುವ ಪ್ರತ್ಯೇಕ ಮಹಾನಗರ ಪಾಲಿಕೆ (City Corporation) ಧಾರವಾಡಕ್ಕೆ (Dharwad) ಬರುವ ದಿನಗಳು ದೂರವಿಲ್ಲ. ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Bairati Suresh) ಒಪ್ಪಿಗೆ ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha) ಮಂಗಳವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್‌ (Aravind Bellad) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೊ ಅಥವಾ ಬೇಡವೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು. ನಂತರ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಕ್ರಮಕೈಗೊಳ್ಳಲಿದ್ದೇವೆ ಎಂದರು.

ನಗರ ಸ್ಥಳೀಯ ಸಂಸ್ಥೆಯನ್ನು ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು 2011ರ ಜನಸಂಖ್ಯೆ ಮಾನದಂಡವಾಗಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರಲ್ಲಿರುವ ಮಾನದಂಡಗಳನ್ನು ಧಾರವಾಡ ಪೂರೈಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಾಗಿದ್ದು, 202.3 ಚ.ಕಿ.ಮೀ.ಗಳಷ್ಟು ವಿಸ್ತಾರವಾಗಿದ್ದು, 2011ರ ಜನಗಣತಿಯ ಪ್ರಕಾರ 9.43 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಜನಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 4,665 ಇದೆ. ಅವಳಿ ನಗರಗಳ ಆಡಳಿತಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ರಚಿಸಲಾಗಿದೆ.

ಪಾಲಿಕೆಗೆ ಮಾನದಂಡ

ಕೆಎಂಸಿ ಕಾಯಿದೆಯ ಪ್ರಕಾರ ನಗರವೊಂದಕ್ಕೆ ಸಿಟಿ ಕಾರ್ಪೊರೇಷನ್ ಹೊಂದಲು ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರಬೇಕು. ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ 3,000ಕ್ಕಿಂತ ಕಡಿಮೆ ಇರಬಾರದು. ನಗರದಿಂದ 6 ಕೋಟಿಗೂ ಹೆಚ್ಚು ಆದಾಯ ಬರಬೇಕು. ವಾರ್ಷಿಕವಾಗಿ ಸ್ವಂತ ಸಂಪನ್ಮೂಲಗಳನ್ನು ಹೊಂದಿರಬೇಕು ಮತ್ತು ನಗರದ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು ಕೃಷಿಯೇತರ ವಲಯಗಳಲ್ಲಿ ಉದ್ಯೋಗಿಗಳಾಗಿರಬೇಕು ಎಂದು ಸುರೇಶ್ ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್​ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ವಿಡಿಯೋ ವೈರಲ್

ಈ ಎಲ್ಲ ಮಾನದಂಡಗಳನ್ನು ಧಾರವಾಡ ಪೂರೈಸಿದರೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಬೆಲ್ಲದ್, ಧಾರವಾಡ ಎಚ್‌ಡಿಎಂಪಿ ವ್ಯಾಪ್ತಿಗೆ ಬರುತ್ತಿದ್ದು, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಧಾರವಾಡವನ್ನು ಹೆಚ್‌ಡಿಎಂಪಿಯಿಂದ ಬೇರ್ಪಡಿಸುವ ಅಗತ್ಯವಿದೆ. ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಎರಡೂ ನಗರಗಳ ನಾಗರಿಕರ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಹೆಚ್‌ಡಿಎಂಪಿ ವಿಭಜನೆಗೆ ಹಲವು ಸಂಘಟನೆಗಳು ಒತ್ತಾಯಿಸುತ್ತಿವೆ ಎಂದರು.

ಧಾರವಾಡದ ಸರ್ವಾಂಗೀಣ ಅಭಿವೃದ್ಧಿಗೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿದೆ. ಧಾರವಾಡವನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಎಲ್ಲ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು.

ಪ್ರಸ್ತಾವನೆಯನ್ನು ಕಳುಹಿಸಿ

ಸಚಿವ ಬೈರತಿ ಸುರೇಶ ಮಾತನಾಡಿ, ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಧಾರವಾಡ ಜಿಲ್ಲಾಧಿಕಾರಿ ಪೌರಾಡಳಿತ ನಿರ್ದೇಶನಾಲಯಕ್ಕೆ (ಡಿಎಂಎ) ಎಲ್ಲ ದಾಖಲೆಗಳೊಂದಿಗೆ ಪ್ರಸ್ತಾವನೆ ಕಳುಹಿಸಿದರೆ, ಅವರು ಮಾನದಂಡಗಳನ್ನು ಪರಿಶೀಲಿಸುತ್ತಾರೆ. ನಗರವು ಎಲ್ಲ ಮಾನದಂಡಗಳನ್ನು ಪೂರೈಸಿದರೇ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಕ್ರಮ ಕೈಗೊಳ್ಳಲಾಗುವುದು.

ಧಾರವಾಡ ನಗರವು ತನ್ನ ಶಕ್ತಿ ಮೀರಿ ಬೆಳೆದಿರುವ ಕಾರಣ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಮಹಾನಗರ ಪಾಲಿಕೆಗಳಿಗೆ ಹಣ ಮಂಜೂರು ಮಾಡುವುದರಿಂದ, ಎಚ್‌ಡಿಎಂಪಿಯಿಂದಾಗಿ ಹುಬ್ಬಳ್ಳಿ ಮತ್ತು ಧಾರವಾಡ ಎರಡನ್ನೂ ಒಂದು ಘಟಕವಾಗಿ ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಹಣ ಹುಬ್ಬಳ್ಳಿ ನಗರಕ್ಕೆ ಬಳಕೆಯಾಗುತ್ತಿದ್ದು, ಧಾರವಾಡ ನಗರಕ್ಕೆ ಹೆಚ್ಚೇನೂ ಇಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ನೀಡಿದರೇ, ಧಾರವಾಡ ಮಹಾನಗರಕ್ಕೆ ಸರ್ಕಾರದಿಂದ ಸಮಾನ ಪ್ರಮಾಣದ ಹಣ ಬರುತ್ತದೆ. ಮತ್ತು ಹುಬ್ಬಳ್ಳಿ ಇದರಲ್ಲಿ ಒಳಪಡುವುದಿಲ್ಲ ಎಂಬುವುದು ಜನರ ಅಭಿಪ್ರಾಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ