ಪ್ರಯಾಣಿಕರಿಗೆ ಬಿಗ್ ಶಾಕ್: ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಇತರೆ ಪ್ಯಾಸೆಂಜರ್ ರೈಲು ಟಿಕೆಟ್​ ದರ ಏರಿಕೆ

|

Updated on: Mar 13, 2023 | 11:39 AM

ನೈರುತ್ಯ ರೈಲ್ವೆ ವಲಯ 2022ರಲ್ಲಿ ಪ್ಯಾಸೆಂಜರ್​ ಮತ್ತು ಪ್ಯಾಸೆಂಜರ್​ ಸ್ಪೆಷಲ್​ ರೈಲುಗಳನ್ನು ಸೂಪರ್​​ಪಾಸ್ಟ್​ ರೈಲುಗಳು ಎಂದು ಮರು ನಾಮಕರಣ ಮಾಡಿ, ಟಿಕೆಟ್​ ದರವನ್ನು ಮೊದಲಿನ ದರಕ್ಕಿಂತ ಎರಡುಪಟ್ಟು ಏರಿಸಿತು. ಆದರೆ ರೆಲ್ವೆ ಇಲಾಖೆಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಯಾಣಿಕರಿಗೆ ಬಿಗ್ ಶಾಕ್:  ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಇತರೆ ಪ್ಯಾಸೆಂಜರ್ ರೈಲು ಟಿಕೆಟ್​ ದರ ಏರಿಕೆ
ಹುಬ್ಬಳ್ಳಿ ಜಂಕ್ಷನ್​
Follow us on

ಹುಬ್ಬಳ್ಳಿ: ರೈಲು ಆರಮದಾಯಕ ಮತ್ತು ಅಗ್ಗದಾಯಕವಾದ ಪ್ರಯಾಣಕ್ಕೆ ಹೆಸರುವಾಸಿ. ಭಾರತೀಯ ರೈಲ್ವೆ ಅತಿ ದೊಡ್ಡ ಸಂಪರ್ಕ ಜಾಲವಾಗಿದೆ. ಆದರೆ ನೈರುತ್ಯ ರೈಲ್ವೆ ವಲಯ (South Western Railway) 2022ರಲ್ಲಿ ಪ್ಯಾಸೆಂಜರ್​ ಮತ್ತು ಪ್ಯಾಸೆಂಜರ್​ ಸ್ಪೆಷಲ್​ ರೈಲುಗಳನ್ನು ಸೂಪರ್​​ಪಾಸ್ಟ್​ ರೈಲುಗಳು ಎಂದು ಮರು ನಾಮಕರಣ ಮಾಡಿ, ಟಿಕೆಟ್​ ದರವನ್ನು ಮೊದಲಿನ ದರಕ್ಕಿಂತ ಎರಡುಪಟ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ ಈ ಸೂಪರ್​​ಪಾಸ್ಟ್​ ರೈಲುಗಳ ವೇಗದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.

ನೈರುತ್ಯ ರೈಲ್ವೆ ವಲಯ 2014ರಿಂದ ಟಿಕೆಟ್​ ದರವನ್ನು ಏರಿಕೆ ಮಾಡಿರಲಿಲ್ಲ. ಆದರೆ 2019 ರಲ್ಲಿ ಕೊರೊನಾ ಮಹಾಮಾರಿ ಸೊಂಕು ದೇಶಕ್ಕೆ ಅಂಟಿಕೊಂಡ ನಂತರ, ಲಾಕ್​ಡೌನ ಮತ್ತು ಇನ್ನಿತರೆ ಕಾರಣದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಈ ಹಿನ್ನೆಲೆ ರೈಲುಗಳಿಗೆ ಸೂಪರ್​ಫಾಸ್ಟ್​ ಎಂದು ಮರು ನಾಮಕರಣ ಮಾಡಿ ರೈಲಿನ ಟಿಕೆಟ್​ ದರವನ್ನು ಏರಿಸಲಾಯಿತು.

ಕೊರೊನಾಕ್ಕಿಂತ ಮುಂಚೆ ಹುಬ್ಬಳ್ಳಿ-ಬೆಂಗಳೂರು ಸಿಟಿ-ಹುಬ್ಬಳ್ಳಿ ಫಾಸ್ಟ್​ ಪ್ಯಾಸೆಂಜರ್​ ರೈಲು ಉತ್ತರ ಕರ್ನಾಟಕದ ಬಡಜನರು ಅಗ್ಗವಾಗಿ ಪ್ರಯಾಣಿಸಲು ಅನುಕೂಲಕರವಾಗಿತ್ತು. ಆದರೆ ನೈರುತ್ಯ ರೈಲ್ವೆ ಇಲಾಖೆ ಇದನ್ನು ಸೂಪರ್​ ಫಾಸ್ಟ್ (ಗಾಡಿ ಸಂಖ್ಯೆ 17391 ಮತ್ತು 17392)​ ಎಂದು ಬದಲಾಯಿಸಿದ ನಂತರ ಟಿಕೆಟ್​​ ದರವನ್ನು ದುಪ್ಪಟ್ಟು ಮಾಡಲಾಗಿದೆ. ಅಲ್ಲದೆ ಯಥಾ ಪ್ರಕಾರ ಮೊದಲಿನಂತೆ, ಆ ಮಾರ್ಗದಲ್ಲಿನ 31 ರೈಲು ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಹೀಗಿದ್ದರೆ ಇದು ಹೇಗೆ ಸೂಪರ್​ ಫಾಸ್ಟ್​ ರೈಲಾಗುತ್ತದೆ. ಇದಲ್ಲದೆ ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಅರಸಿಕೆರೆ-ಹುಬ್ಬಳ್ಳಿ ಎಕ್ಸಪ್ರೆಸ್​ ರೈಲುಗಳು ಪ್ಯಾಸೆಂಜರ್​ ರೈಲಿನ ಹಾಗೆ ಸಂಚರಿಸುತ್ತಿವೆ ಎಂದು ನೈಋತ್ಯ ರೈಲ್ವೆ (SWR) ಪ್ರಯಾಣಿಕರ ಸಮಿತಿಯ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ ಅನುಕೂಲಗಳೇನು?

ಮೊದಲಿಗಿಂತ ಶೇ ಒಂದೂವರೆಯಷ್ಟು ಹೆಚ್ಚಿನ ಹಣವನ್ನು ಸಂಗ್ರಹಿಸಲು ವಿಜಯಪುರ-ಮಂಗಳೂರು-ವಿಜಯಪುರ ರೈಲು “ವಿಶೇಷ” ಟ್ಯಾಗ್‌ನೊಂದಿಗೆ 3 ವರ್ಷಗಳಿಂದ ಓಡುತ್ತಿದೆ. ನಿಯಮಗಳ ಪ್ರಕಾರ, ‘ವಿಶೇಷ’ ರೈಲುಗಳನ್ನು 6 ತಿಂಗಳಿಂದ 1 ವರ್ಷದವರೆಗೆ ಮಾತ್ರ ಓಡಿಸಬೇಕು. ಇತ್ತೀಚಿನ ದಿನಗಳಲ್ಲಿ ನೈರುತ್ಯ ರೈಲ್ವೆ ಇಲಾಖೆ ಹೆಚ್ಚಿನ ದರದೊಂದಿಗೆ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳ ದರ ಬಸ್​ ಪ್ರಯಾಣದ ದರಕ್ಕೆ ಸಮಾನಾಗಿದೆ. ಅಲ್ಲದೆ ನಕಲಿ ಎಕ್ಸ್‌ಪ್ರೆಸ್‌ಗಳ ನಿಲುಗಡೆಯನ್ನು ಕಡಿಮೆ ಮಾಡಿಲ್ಲ, ಸೌಲಭ್ಯಗಳನ್ನು ಹೆಚ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಇಂತಹ ರೈಲುಗಳು ಹೆಚ್ಚಾಗಿದ್ದು, ಬಡ ಪ್ರಯಾಣಿಕರಿಗೆ ಬಹಿರಂಗವಾಗಿ ವಂಚನೆ ಮಾಡಲಾಗುತ್ತಿದೆ. ಹುಬ್ಬಳ್ಳಿ-ತಿರುಪತಿ-ಹುಬ್ಬಳ್ಳಿ ರೈಲು ಕೊರೊನಾಕ್ಕಿಂತ ಮೊದಲು ಫಾಸ್ಟ್ ಪ್ಯಾಸೆಂಜರ್ ಆಗಿತ್ತು. ಈಗ ಹೆಚ್ಚಿನ ದರವನ್ನು ಸಂಗ್ರಹಿಸಲು ಸೂಪರ್‌ಫಾಸ್ಟ್ (ಗಾಡಿ ಸಂಖ್ಯೆ 07657 ಮತ್ತು 07658) ಆಗಿ ಬದಲಾಯಿಸಲಾಗಿದೆ. ಸೊಲ್ಲಾಪುರ-ಗದಗ-ಸೊಲ್ಲಾಪುರ ಪ್ಯಾಸೆಂಜರ್​ ರೈಲು ಈಗ ಎಕ್ಸ್‌ಪ್ರೆಸ್ ಆಗಿದೆ. ಮೊದಲಿನಂತೆ ಈಗಲೂ ಎಲ್ಲ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ನಿತ್ಯ ಪ್ರಯಾಣಿಸುವ ಪ್ರೊ.ಭಾರ್ಗವ್ ಹೆಚ್.ಕೆ. ಎಂಬುವರು ದೂರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Mon, 13 March 23