Updated on:Mar 12, 2023 | 9:31 AM
ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣಕ್ಕೆ ಹೊಸ ಮೆರಗು ಬಂದಿದೆ. ರೈಲ್ವೇ ನಿಲ್ದಾಣವನ್ನು ಹಂಪಿ ವಾಸ್ತುಶಿಲ್ಪ ಮಾದರಿಯಲ್ಲಿ ನವೀಕರಣ ಮಾಡಲಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ರೈಲ್ವೆ ಸಚಿವಾಲಯದ ಶೇ 50: 50 ಪಾಲುದಾರಿಕೆಯಲ್ಲಿ 13.5 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ.
ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಹಂಪಿ ಕಲ್ಲಿನ ರಥದಂತೆ ಭಾಸವಾಗುತ್ತದೆ. ಗೋಡೆಗಳ ಮೇಲೆಲ್ಲಾ ಹಂಪಿಯಲ್ಲಿರುವ ವಾಸ್ತುಶಿಲ್ಪಗಳಂತೆ ಕೆತ್ತನೆ ಮಾಡಲಾಗಿದೆ.
ಪ್ರಯಾಣಿಕ ಸೌಕರ್ಯ, ವಿಶ್ರಾಂತಿ ಕೊಠಡಿ, ವಿಐಪಿ ಲಾಂಜ್, ಫುಟ್ ಕೋರ್ಟ್ಗಳಿವೆ. ಇನ್ನು ಭವಿಷ್ಯದಲ್ಲಿ ವಾಹನದಟ್ಟಣೆಯನ್ನು ನಿಭಾಯಿಸಲು, ನಿಲ್ದಾಣದ ಮುಂಭಾಗದಲ್ಲಿ ಪಾರ್ಕಿಂಗ್ ಪ್ರದೇಶ ಮತ್ತು ಪಿಕ್ ಅಪ್ ಮತ್ತು ಡ್ರಾಪ್ ಪ್ರದೇಶಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಉಗ್ರನರಸಿಂಹ, ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ, ವಿಜಯನಗರ ಸಾಮ್ರಾಜ್ಯ ಕಾಲದ ನಾಣ್ಯಗಳು, ಅವರ ಲಾಂಛನಗಳನ್ನು ಉಬ್ಬು ಶಿಲ್ಪದಲ್ಲಿ ಕೆತ್ತನೆ ಮಾಡಲಾಗಿದೆ.
ರೈಲು ನಿಲ್ದಾಣದಲ್ಲಿ ನೆಲಮಹಡಿ, ಮೊದಲ ಮಹಡಿ, ಎಕ್ಸಿಕ್ಯೂಟಿವ್ ಲಾಂಜ್, ರಿಟೈರಿಂಗ್ ರೂಂ, ಫುಡ್ ಪ್ಲಾಜಾ ನಿರ್ಮಿಸಲಾಗಿದೆ. ಪ್ರಯಾಣಿಕರ ವಿಶ್ರಾಂತಿಗಾಗಿ 14 ಕೊಠಡಿಗಳನ್ನು ನಿರ್ಮಿಸಲಾಗಿದೆ. ಗಣ್ಯರ ನಿರೀಕ್ಷಣ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ, ಕ್ಯಾಂಟೀನ್ ಕೂಡ ಇದೆ. ಮತ್ತು ಮೇಲ್ಛಾವಣಿ ಸೋಲಾರ್ ಪ್ಯಾನಲ್ನ್ನು ಕೂಡ ಹೊಂದಿದೆ.
ನವೀಕರಿಸಲಾದ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮಾ.12) ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರವಾಸಿಗರು ಹಂಪಿ, ಆನೆಗೊಂದಿ, ಸಂಡೂರು ಸೇರಿದಂತೆ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವಿವಿಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇಲ್ಲಿ ಇಳಿದುಕೊಂಡರೆ ಅನುಕೂಲವಾಗಲಿದೆ.
Published On - 9:20 am, Sun, 12 March 23