ಪಠ್ಯಪುಸ್ತಕ ವಾದ-ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಬಾರದು: ಸಚಿವ ಬಿ.ಸಿ. ನಾಗೇಶ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 08, 2022 | 12:56 PM

ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರ ಹಿನ್ನೆಲೆ, ಲೋಪದೋಷಗಳನ್ನ ಯಾರೇ ತೋರಿಸಿದರೂ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನು ಮುಚ್ಚಿಡುವುದನ್ನು ಮಾಡುತ್ತಿಲ್ಲ. ಹೀಗಾಗಿ ಅದನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.

ಪಠ್ಯಪುಸ್ತಕ ವಾದ-ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಬಾರದು: ಸಚಿವ ಬಿ.ಸಿ. ನಾಗೇಶ್
ಶಿಕ್ಷಣ ಸಚಿವ ಬಿ.ಸಿ. ನಾಗೇಶ್
Follow us on

ಧಾರವಾಡ: ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದರೆ ತಪ್ಪು ಆಗಿದ್ದನ್ನು ನಾವು ಗಮನಿಸಿದ್ದೇವೆ. ಅದನ್ನ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ. ವಾದ-ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುತ್ತೇವೆ ಎಂದು ನಗರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗೋಷ್ಠಿ ಹೇಳಿದರು. ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರ ಹಿನ್ನೆಲೆ, ಲೋಪದೋಷಗಳನ್ನ ಯಾರೇ ತೋರಿಸಿದರೂ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನು ಮುಚ್ಚಿಡುವುದನ್ನು ಮಾಡುತ್ತಿಲ್ಲ. ಹೀಗಾಗಿ ಅದನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಸಾಹಿತಿಗಳನ್ನು ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ. ಮಹಾರಾಜರನ್ನು ತೆಗೆದು ಟಿಪ್ಪು ಸುಲ್ತಾನರನ್ನು ತರಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ಸೇರಿಸಲಾಗಿತ್ತು. ಇಂಥ 100 ಉದಾಹರಣೆಗಳು ಇವೆ ಎಂದು ಹೇಳಿದರು.

ಇದನ್ನೂ ಓದಿ: AQIS ಎಂದರೇನು? ಅಲ್​ಖೈದಾ ಭಾರತಕ್ಕೆ ನೀಡಿರುವ ಎಚ್ಚರಿಕೆ ಪತ್ರದಲ್ಲೇನಿದೆ?

ದೇವನೂರು ಮಹಾದೇವ ನಮಗೆ ಹೇಳಬಹುದಿತ್ತು. ಆದರೆ ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಕುವೆಂಪು ಅವರಿಗೆ ಅವಮಾನ ವಿಚಾರ ಹಿನ್ನೆಲೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ. ಅವರೇ ಅದನ್ನ ಹಾಕಿದ್ದರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡ ಗೀತೆಗೆ ಅವಮಾನ ಆಗಿದೆ. ಪಠ್ಯಪುಸ್ತಕವನ್ನು ಒಬ್ಬರೇ ಮಾಡುವುದಿಲ್ಲ. ತಪ್ಪು ಆಗಿದೆ, ಅದನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡಬಾರದು

ಸಿದ್ದರಾಮಯ್ಯ ಚಡ್ಡಿ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ. ಏನು ಸಿಗದೆ ಹೋದಾಗ ಆರ್​ಎಸ್​ಎಸ್ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಮತಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ. ಬೇಕಾದಷ್ಟು ವಿಷಯಗಳಿವೆ, ಅದನ್ನು ಬಿಟ್ಟು ಆರ್​ಎಸ್​ಎಸ್​ ಬಗ್ಗೆ ಏಕೆ ಮಾತನಾಡಬೇಕು. ಎಷ್ಟೊಂದು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ಕೊಡಬೇಕು. ಹಿಜಾಬ್, ಆರ್​ಎಸ್​​ಎಸ್​ ಬಗ್ಗೆ ಮಾತಾಡೋದು ಬಿಡಬೇಕು ಎಂದು ಹೇಳಿದರು.

ಶಿಕ್ಷಣ ಸಚಿವರ ರಾಜೀನಾಮೆಗೆ ಕೇಳಿ ಬಂದ ಒತ್ತಾಯ

ಆದೇಶ ಇಲ್ಲದ ಸಮಿತಿಯಿಂದ ಪಾರದರ್ಶಕತೆ ಇಲ್ಲದ ಪರಿಷ್ಕರಣೆ ಮಾಡಿದ ಪಠ್ಯ ವಿವಾದದ ಜವಬ್ದಾರಿ ಹೊತ್ತಿರುವ ಬಿ.ಸಿ.ನಾಗೇಶ್ ರಾಜಿನಾಮೆ ನೀಡಬೇಕೆಂದು ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಆಗ್ರಹಿಸಿದ್ದಾರೆ. ಶಾಲಾ ಪಠ್ಯ ಪುಸ್ತಕಗಳ ತಿರುಚುವಿಕೆಯ ವಿರುದ್ಧ ಸಮಾವೇಶದಲ್ಲಿ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಹೇಳಿಕೆ ನೀಡಿದರು. ನಾವು ಬದಲಾವಣೆ ವಿರೋಧಿಗಳಲ್ಲ. ಬದಲಾವಣೆ ಮಾಡುವಾಗ ಯಾವ ವಿಧಾನ ಅನುಸರಿಸುತ್ತಿದ್ದೀರಾ ಅನ್ನೊದು‌ ಮುಖ್ಯ. ಪಠ್ಯ ಕ್ರಮ ಚೌಕಟ್ಟಿನಡಿ ಬದಲಾವಣೆ ತರಬೇಕು. ಸಂವಿಧಾನ ಮೌಲ್ಯಗಳ ವಿರುದ್ಧದ ಪರಿಷ್ಕರಣೆ ಬೇಕಿಲ್ಲ. ಪ್ರಸ್ತುತ ಪಠ್ಯ ಪುಸ್ತಕ ಸಮಿತಿಗೆ ಯಾವುದೇ ಆದೇಶ ಇಲ್ಲ. ರೋಹಿತ್ ಚಕ್ರತೀರ್ಥನಿಗೆ‌ ಆದೇಶ ಇಲ್ಲ. ಆದೇಶ ಇಲ್ಲದ ಸಮಿತಿಗೆ, ಚಕ್ರತೀರ್ಥನಿಗೆ ಶಿಕ್ಷಣ ಸಚಿವರು ಕುಮ್ಮಕ್ಕು ನೀಡಿದ್ದಾರೆ. 8ನೇ ತರಗತಿಯ ಭಾರತದ ಭೌಗೋಳಿಕ ಶಾಸ್ತ್ರ ಪಾಠವನ್ನು ಕೈಬಿಟ್ಟು ಭರತ ವರ್ಷ ಅನ್ನೊ ಪಾಠ ತರಲಾಯಿತು.

ಈ ಪಾಠದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಬಾಂಗ್ಲಾದೇಶ ಭಾರತಕ್ಕೆ ಸೇರಿದ್ದು ಅಂತ ಬರೆಯಲಾಗಿದೆ. ಹಾಗಿದ್ರೆ ಈ ಪಾಠವನ್ನು ಓದಿ‌ ಮಕ್ಕಳು ಈ ದೇಶಗಳ ವಿರುದ್ಧ ಹೋರಾಡಬೇಕಾ. ಸಮಿತಿಯಲ್ಲಿರುವವರಿಗೆ ನಿಜಕ್ಕೂ ಮಾನಸಿಕ ತೊಂದರೆ ಇತ್ತು ಅನ್ನಿಸುತ್ತದೆ. ಸಿಎಂ ಅವರನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಳ್ಳದೇ ಶಿಕ್ಷಣ ಸಚಿವರು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ. ಹೆಡ್ಗೆವಾರ್​ಗೂ ಸಂವಿಧಾನಕ್ಕೂ ಏನು ಸಂಬಂಧ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿಯೇ ಮಾಡ್ತಿವಿ ಅನ್ನೊ ಥರ್ಡ್ ಸ್ಟೇಜ್ ಅಗ್ರೆಸಿವ್ ಮೈಂಡ್ ಸೆಟ್​ಗೆ ಸಚಿವರು ತಲುಪಿದ್ದಾರೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:41 pm, Wed, 8 June 22