AQIS ಎಂದರೇನು? ಅಲ್ಖೈದಾ ಭಾರತಕ್ಕೆ ನೀಡಿರುವ ಎಚ್ಚರಿಕೆ ಪತ್ರದಲ್ಲೇನಿದೆ?
ದೆಹಲಿ, ಮುಂಬೈ, ಗುಜರಾತ್,ಉತ್ತರಪ್ರದೇಶದ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಗುಂಪು ಅಲ್ಖೈದಾ ಎಚ್ಚರಿಕೆ ಪತ್ರ ರವಾನಿಸಿದೆ.
ದೆಹಲಿ: ದೆಹಲಿ, ಮುಂಬೈ, ಗುಜರಾತ್,ಉತ್ತರಪ್ರದೇಶದ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಗುಂಪು ಅಲ್ಖೈದಾ ಎಚ್ಚರಿಕೆ ಪತ್ರ ರವಾನಿಸಿದೆ. ಪತ್ರದಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ಬೆದರಿಕೆ ನೀಡಿದೆ. ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲದೆ ಬಿಡುವುದಿಲ್ಲ, ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದೆ.
AQIS ಎಂದರೇನು? ಯುನೈಟೆಡ್ ಸ್ಟೇಟ್ಸ್- ಮತ್ತು ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದ್ದು, AQIS ಅಲ್-ಖೈದಾದ ಹೊಸ ಅಂಗಸಂಸ್ಥೆಗಳಲ್ಲಿ ಒಂದಾಗಿದೆ, ಇದು 2014 ರಲ್ಲಿ ರೂಪುಗೊಂಡಿತು. ಇದನ್ನು ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಭಯೋತ್ಪಾದಕ ಗುಂಪಿನ ಪ್ರಭಾವವನ್ನು ವಿಸ್ತರಿಸಲು ಇದನ್ನು ಸ್ಥಾಪಿಸಿದರು.
ಪ್ರವಾದಿಗೆ ಅವಮಾನ ಮಾಡಿರುವವರು, ಈಗ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮುಂಬೈನಲ್ಲಿ ಸಾವಿಗಾಗಿ ಕಾಯುತ್ತಿರಿ ಎಂದು ಎಚ್ಚರಿಕೆ ಪತ್ರದಲ್ಲಿ ತಿಳಿಸಲಾಗಿದೆ. ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ನಾಯಕರು ಮಾಡಿದ ಟೀಕೆಗಳ ವಿವಾದದ ಹಿನ್ನೆಲೆಯಲ್ಲಿ ಇದು ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರತಿಭಟನೆಯೊಂದಿಗೆ ವಿವಾದ ಪ್ರಾರಂಭವಾಯಿತು.ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದ ಉಲ್ಭಣವಾಗುತ್ತಿದ್ದಂತೆ ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರತಿಭಟನೆ ಹಾದಿ ಹಿಡಿದು, ಭಾರತದ ವಿರುದ್ಧ ನಿಂತಿವೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಈ ಪತ್ರವನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಏಜೆನ್ಸಿಗಳು ಪ್ರಯತ್ನಿಸುತ್ತಿವೆ. AQIS, ಅಲ್-ಖೈದಾದ ಅಂಗಸಂಸ್ಥೆ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪು, ಭಾರತದ ಮೇಲೆ ಕಣ್ಣಿಟ್ಟಿದೆ.
ಯುಎನ್ ತನ್ನ ಇತ್ತೀಚಿನ ವರದಿಯಲ್ಲಿ ಸಂಘಟನೆಯು ತನ್ನ ನಿಯತಕಾಲಿಕದ ಹೆಸರನ್ನು ನವಾ-ಎ-ಅಫ್ಘಾನ್ ಜಿಹಾದ್ ನಿಂದ . ನವ- ಇ-ಘಜ್ವಾ-ಎ-ಹಿಂದ್ ಗೆ ಬದಲಾಯಿಸಿದೆ. ಈ ಸಂದರ್ಭದಲ್ಲಿ ಈ ಭಯೋತ್ಪಾದಕ ಗುಂಪು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಈ ನಡುವೆ ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರ ಸ್ಥಾನದಲ್ಲಿದ್ದ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಉಚ್ಚಾಟಿಸಿದೆ. ಕುವೈತ್, ಕತಾರ್ ಮತ್ತು ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಿಗೆ ಮುಸ್ಲಿಂ ಗುಂಪುಗಳ ತೀಕ್ಷ್ಣ ಪ್ರತಿಕ್ರಿಯೆಯ ನಡುವೆ, ಬಿಜೆಪಿ ಹೇಳಿಕೆಯಲ್ಲಿ ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ಸುಮಾರು 10 ದಿನಗಳ ಹಿಂದೆ ಟಿವಿ ಕಾರ್ಯಕ್ರಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನೂಪುರ್ ಶರ್ಮಾ ಮಾಡಿದ ಕಾಮೆಂಟ್‌ಗಳು ಮತ್ತು ಜಿಂದಾಲ್ ಮಾಡಿದ್ದ ಟ್ವೀಟ್‌ಗಳು ಕಿಡಿ ಹೊತ್ತಲು ಕಾರಣವಾಗಿತ್ತು. ಮುಸ್ಲಿಂ ರಾಷ್ಟ್ರಗಳು ತಮ್ಮ ದೇಶಗಳ ಸೂಪರ್ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿವೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Wed, 8 June 22