ಹುಬ್ಬಳ್ಳಿ: ಛೋಟಾ ಮುಂಬಯಿ ಎಂದು ಕರೆಯಲ್ಪಡುವ ಹುಬ್ಬಳ್ಳಿ(hubballi) ಈಗ ಮತ್ತೆ ಸುದ್ದಿಯಲ್ಲಿದೆ. ಹುಬ್ಬಳ್ಳಿಯಲ್ಲಿ ಯಾವಾಗ ಏನು ಸಂಭವಿಸುತ್ತದೆ ಎಂದು ಗೊತ್ತಾಗದಂತ ಸ್ಥಿತಿ ಎದುರಾಗಿದೆ.ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಬಳಿಕ ಒಂದಷ್ಟು ದಿನ ಹುಬ್ಬಳ್ಳಿ ಶಾಂತವಾಗಿತ್ತು. ಆದರೆ ಸಧ್ಯ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಹಾಫ್ ಮರ್ಡರ್, ಫುಲ್ ಮರ್ಡರ್ಗಳು ಅಂದರೆ ಪಾತಕಿಗಳಿಗೆ ನೀರು ಕುಡಿದಷ್ಟೇ ಸುಲಭವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಪಟದಾರಿ ಕೊಲೆ ಕೇಸ್ ಸೇರಿದಂತೆ ಕಳೆದ ವರ್ಷದಲ್ಲಿ ಏಳೆಂಟು ಜನರ ನೆತ್ತರು ಹರಿದಿದೆ. ಮೂರು ದಿನದ ಹಿಂದೆ ನಡೆದ ಸಂತೋಷ್ ಮುರಗೋಡ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಇದು ಜನಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಶಾಸಕ ಪ್ರಸಾದ ಅಬ್ಬಯ್ಯ ನೇತ್ರತ್ವದಲ್ಲಿ, ಕೊಲೆಯಾದ ಮುರಗೋಡ ಅವರ ಮೃತದೇಹವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಲಾಗಿತ್ತು. ಈ ಪ್ರಕರಣ ಸೇರಿದಂತೆ ಪಟದಾರಿ ಕೇಸ್ನಲ್ಲಿ ಮಹಾನಗರದ ಪೊಲೀಸರ ಕೈವಾಡ ಇದೆ ಅನ್ನುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಪೊಲೀಸ್ ಆಯುಕ್ತ ಲಾಭು ರಾಮ್ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಒಂದು ಕಡೆ ಮೇಲಿಂದ ಮೇಲೆ ನಡೆಯುತ್ತಿರುವ ಸರಣಿ ಹತ್ಯೆಗಳು. ಮತ್ತೊಂದು ಕಡೆ ಕೆಲವು ಕೊಲೆ ಪ್ರಕರಣಗಳಲ್ಲಿ ಖಾಲಿ ಹೆಜ್ಜೆ ಗುರುತು ಜನಸಾಮಾನ್ಯರಲ್ಲಿ ನಿದ್ದೆ ಗೆಡಿಸಿದೆ.
ಇದನ್ನೂ ಓದಿ:75ರ ವಯಸ್ಸಿನಲ್ಲೂ ಮತ್ತೊಂದು ಮದ್ವೆಯಾದ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್, ಮೃತ ಪತ್ನಿಯ ಅಕ್ಕನನ್ನೇ ಕೈಹಿಡಿದ
ಈ ಹತ್ಯಾಕಾಂಡಗಳು ಯಾವುದು ಕೂಡ ನಿಗೂಢವಾಗಿ ಉಳಿದಿಲ್ಲ. ಕೊಲೆಯಾದ ತಕ್ಷಣವೇ ಪೊಲೀಸರ ಹದ್ದಿನ ಕಣ್ಣಿನಿಂದಾ ಪಾತಕಿಗಳು ತಪ್ಪಿಸಿಕೊಂಡಿಲ್ಲ. ಹತ್ಯೆಯ ಬಳಿಕ ಕೆಲವೇ ದಿನಗಳಲ್ಲಿಯೇ ಪ್ರಕರಣಗಳನ್ನು ಖಾಕಿ ಭೇದಿಸಿದೆ. ಆದರೆ ಯಾಕೆ ಹೀಗೆ ಶಾಂತಿಯಿಂದ ಕೂಡಿದ್ದ ಸಿಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹರಿಯುತ್ತಿರುವ ನೆತ್ತರು ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ವರದಿ:ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ