ಧಾರವಾಡ, ಸೆಪ್ಟೆಂಬರ್ 9: ಶಾಸಕರು, ರೈತರಿಂದ ಬರಗಾಲ ಘೋಷಣೆಗೆ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಈಗಾಗಲೇ ಸಿಎಂ ಕ್ಯಾಬಿನೆಟ್ ಉಪಸಮಿತಿ ಮಾಡಿದ್ದಾರೆ. ಬರ ಘೋಷಣೆ ಸಂಬಂಧ ಎರಡ್ಮೂರು ದಿನದಲ್ಲಿ ಸಭೆ ನಡೆಯಲಿದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ (N chaluvaraya swamy) ಹೇಳಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಮಾತನಾಡಿದ ಅವರು, 62 ತಾಲೂಕುಗಳನ್ನು ಬರ ಎಂದು ಘೋಷಣೆಗೆ ಅವಕಾಶವಿತ್ತು. ಆದರೆ ಇನ್ನೂ 130 ತಾಲೂಕುಗಳನ್ನು ಸೇರಿಸಲು ಮುಂದಾಗಿದ್ದೇವೆ. ರಾಜ್ಯದ 196 ತಾಲೂಕುಗಳಲ್ಲಿ ಬರ ಇದೆ. ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ಬರ ಘೋಷಣೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆ ಕೇಳಿದ್ದೇವೆ. ಎರಡು ಮೂರು ಬಾರಿ ಕೇಳಿದರೂ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
ರೈತರ ಬೆನ್ನಿಗೆ ನಿಲ್ಲುವ ಏಕೈಕ ಸಮರ್ಥ ನಾಯಕ ಸಿದ್ದರಾಮಯ್ಯ. ರೈತರಿಗೆ ಸಾಕಷ್ಟು ಸಮಸ್ಯೆ, ನೋವು ಇದೆ, ಸವಾಲುಗಳು ಇವೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರೈತರಿಗೆ ನೆರವಾಗಿದ್ದರು. ಈ ಹಿಂದೆ ರಾಜ್ಯ ರೈತರ ಸಾಲ ಮನ್ನಾ ಮಾಡಿದ್ದರು. ಹಾಲಿನ ಸಬ್ಸಿಡಿ 5 ರೂ.ಗೆ ಏರಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲಬೇಕು. ರೈತರಿಗೆ ಜೆಡಿಎಸ್-ಬಿಜೆಪಿ ಏನು ಕೊಟ್ಟಿತು? ನೀವೇ ವಿಚಾರ ಮಾಡಿ ಎಂದರು.
ಇದನ್ನೂ ಓದಿ: ಕೃಷಿ ವಿವಿಗಳು ಇರುವುದು ಕೃಷಿಮೇಳ ಮಾಡಿ ಜಾತ್ರೆ ಮಾಡಲು ಅಲ್ಲ; ಸಂಶೋಧನೆಗಳು, ಯಂತ್ರಗಳು ರೈತರ ಜಮೀನಿಗೆ ತಲುಪಬೇಕು: ಸಿಎಂ
ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಯಾರೂ ಮಾಡದ ಕಾರ್ಯಕ್ರಮವನ್ನ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ, ವಿಪಕ್ಷದವರು ಟೀಕಿಸಿದ್ದರು. ಎಲ್ಲರ ಟೀಕೆಗಳನ್ನ ಮೆಟ್ಟಿನಿಂತು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬರ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ರಾಜ್ಯದಲ್ಲಿ ಇನ್ನೂ ಬರಗಾಲ ಘೋಷಣೆ ಮಾಡಿಲ್ಲ. ಕೆಲವು ನಿಯಮಾವಳಿ ಬದಲಾವಣೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರ ಉತ್ತರವನ್ನೇ ಕೊಟ್ಟಿಲ್ಲ ಎಂದರು.
ಇದನ್ನೂ ಓದಿ: 2023ರಲ್ಲಿ ನಿನ್ನ ಹತ್ಯೆ ತಪ್ಪುವುದಿಲ್ಲ: ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ
ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಹೋರಾಟ ಆಗುತ್ತಿದೆ. ಒಂದು ಬಾರಿ ಮೋದಿ ಬಳಿ ಸರ್ವಪಕ್ಷದ ನಿಯೋಗ ಹೋಗಿದ್ದೆವು. ಆದರೆ ಪುಣ್ಯಾತ್ಮ ನರೇಂದ್ರ ಮೋದಿ ರಾಜಿ ಮಾಡಲೇ ಇಲ್ಲ. ಗೋವಾದವರನ್ನು ಪ್ರಧಾನಿ ಮೋದಿ ಕರೆದು ಮಾತಾಡಬೇಕಿತ್ತು. ಈಗ ಮತ್ತೊಮ್ಮೆ ಸರ್ವಪಕ್ಷ ನಿಯೋಗ ಹೋಗಬೇಕಿತ್ತು. ಭೇಟಿಗೆ ಸಮಯ ಕೊಡಿ ಅಂತಾ ಮೋದಿಗೆ ಪತ್ರ ಬರೆದಿದ್ದೇನೆ. ಆದರೆ ಪ್ರಧಾನಿ ಕಚೇರಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಯೋಜನೆಗೆ ಅರಣ್ಯ ಸಚಿವಾಲಯ ಕ್ಲಿಯರನ್ಸ್ ಮಾಡಬೇಕು. ಕ್ಲಿಯರನ್ಸ್ ಆದ ತಕ್ಷಣವೇ ಕಾಮಗಾರಿ ಆರಂಭಿಸುತ್ತೇವೆ. ಮಹದಾಯಿಗೆ ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.