ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ

| Updated By: ಗಣಪತಿ ಶರ್ಮ

Updated on: Sep 11, 2023 | 4:23 PM

India vs Bharat Row; ಹುಬ್ಬಳ್ಳಿ ನಗರದಲ್ಲಿ ಮಾತನಾಡಿದ ಜೋಶಿ, ಭಾರತ್ ಎಂದು ಮರುನಾಮಕರಣ ಮಾಡುತ್ತೇವೆ ಎಂಬುದಾಗಿ ಎಲ್ಲೂ ಹೇಳಿಲ್ಲ. ಭಯ ಇದ್ದವರು ಹೀಗೆ ಮಾತನಾಡುತ್ತಿದ್ದಾರೆ. ನಾವು ಭಾರತ ಎಂದು ಕರೆಯುತ್ತೇವೆ. ನಿಮಗೆ ಹೇಗೆ ಬೇಕೋ ಹಾಗೆ ನೀವು ಕರೆಯಬಹುದು ಎಂದು ಹೇಳಿದ್ದಾರೆ.‌

ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಪ್ರಲ್ಹಾದ್ ಜೋಶಿ
Follow us on

ಹುಬ್ಬಳ್ಳಿ, ಸೆಪ್ಟೆಂಬರ್ 11: ದೇಶದ ಹೆಸರನ್ನು ಭಾರತ್ (Bharat) ಎಂದು ಮರುನಾಮಕರಣ ಮಾಡಲಾಗುತ್ತದೆ ಎಂಬ ವದಂತಿ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಿ20 ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಮಫಲಕದಲ್ಲಿ ಕೂಡ ‘ಭಾರತ್’ ಎಂದು ಉಲ್ಲೇಖಿಸಿದ್ದು, ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಈ ಮಧ್ಯೆ, ದೇಶದ ಹೆಸರು ಬದಲಾವಣೆ ವರದಿಗಳ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟನೆ ನೀಡಿದ್ದಾರೆ. ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂಬುದಾಗಿ ನಾವು ಎಲ್ಲೂ ಹೇಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಮಾತನಾಡಿದ ಜೋಶಿ, ಭಾರತ್ ಎಂದು ಮರುನಾಮಕರಣ ಮಾಡುತ್ತೇವೆ ಎಂಬುದಾಗಿ ಎಲ್ಲೂ ಹೇಳಿಲ್ಲ. ಭಯ ಇದ್ದವರು ಹೀಗೆ ಮಾತನಾಡುತ್ತಿದ್ದಾರೆ. ನಾವು ಭಾರತ ಎಂದು ಕರೆಯುತ್ತೇವೆ. ನಿಮಗೆ ಹೇಗೆ ಬೇಕೋ ಹಾಗೆ ನೀವು ಕರೆಯಬಹುದು ಎಂದು ಹೇಳಿದ್ದಾರೆ.‌

ಪ್ರಧಾನಮಂತ್ರಿಗಳ ಚಾಕಚಕ್ಯತೆಯಿಂದ ಗೊಂದಲ ಇಲ್ಲದೆ ಡಿಕ್ಲೇರೇಶನ್ ಆಗಿದೆ. ಇದು‌ ಮಾಸ್ಟರ್ ಸ್ಟ್ರೋಕ್. ಈಗ ಜಗತ್ತಿನ ನಾಯಕತ್ವದಲ್ಲಿ ಭಾರತ ಕೂಡ ಇದೆ. ಪ್ರಮುಖ ದೇಶಗಳ ಜೊತೆ ನಾವಿರುತ್ತೇವೆ ಅಂದಾಗ ಅಪಹಾಸ್ಯ ಮಾಡಿದರು. ಈ ಹಿಂದೆ ನರೇಂದ್ರ ಮೋದಿ‌ಯವರು ಹೇಳಿದಾಗ ಅಪಹಾಸ್ಯ ಮಾಡಿದ್ದರು. ನಾವೆಲ್ಲರೂ ನಾಯಕತ್ವ ಕಣ್ಮುಂದೆ ನೋಡಿದ್ದೇವೆ, ಇದು ನಮ್ಮ ಸೌಭಾಗ್ಯ. ಜಿ-20 ಶೃಂಗಸಭೆಯಲ್ಲಿ ಹಸಿರು ಇಂಧನದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದ ಬದಲು ನಾವು ಭಾರತ್ ಮೈತ್ರಿಕೂಟ ಎಂದು ಕರೆದರೆ ಏನು ಮಾಡುವಿರಿ?: ಅರವಿಂದ ಕೇಜ್ರಿವಾಲ್

ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ್ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರತಿಪಕ್ಷಗಳ ಮಹಾಮೈತ್ರಿಕೂಟವು ಇಂಡಿಯಾ (I.N.D.I.A) ಎಂದು ನಾಮಕರಣ ಮಾಡಿಕೊಂಡ ಕಾರಣ ಬಿಜೆಪಿಯು ದೇಶದ ಹೆಸರನ್ನೇ ಬದಲಿಸಲು ಮುಂದಾಗಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದವು. ನಾವು ಮೈತ್ರಿಕೂಟದ ಹೆಸರನ್ನು ಭಾರತ್ ಎಂದಿಟ್ಟುಕೊಂಡರೆ ನೀವೇನು ಮಾಡುತ್ತೀರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಹಿರಂಗವಾಗಿಯೇ ಕೇಂದ್ರ ಸರ್ಕಾರವನ್ನು ಪ್ರಶ್ನಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Mon, 11 September 23