ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ -ಉನ್ನತ ಅಧಿಕಾರಿಗಳ ಸಮಿತಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಸಭೆ

| Updated By: ಸಾಧು ಶ್ರೀನಾಥ್​

Updated on: Sep 29, 2022 | 9:46 PM

Hubballi Ankola Railway project: ಪರಿಸರ ಹಾಗು ಅಭಿವೃದ್ದಿ ಎರಡರ ಸಮತೋಲನದೊಂದಿಗೆ ಈ ಯೋಜನೆ ಶೀಘ್ರ ಕಾರ್ಯಗತವಾಗಬೇಕಿದೆ. ಪಶ್ಚಿಮ ಘಟ್ಟದ ಜೀವಸಂಕುಲ ಹಾಗೂ ಅರಣ್ಯಕ್ಕೆ ಧಕ್ಕೆಯಾಗದ ರೀತಿ ಸಮಿತಿಯು ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸೂಕ್ತ ವರದಿ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳ ಸಮಿತಿಗೆ ನಿವೇದಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ -ಉನ್ನತ ಅಧಿಕಾರಿಗಳ ಸಮಿತಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಸಭೆ
ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ - ಉನ್ನತ ಅಧಿಕಾರಿಗಳ ಸಮಿತಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ
Follow us on

ರಾಜ್ಯ ಹಾಗೂ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ಹೊಸ ರೈಲು ಮಾರ್ಗ ( Hubballi Ankola Railway project) ನಿರ್ಮಾಣದ ಕಾರ್ಯ ಶೀಘ್ರ ಆರಂಭವಾಗುವುದು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೋಜನೆ ಅನುಷ್ಠಾನ ಕುರಿತಂತೆ ಉನ್ನತ ಅಧಿಕಾರಗಳ ತಂಡದೊಂದಿಗೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಭೆ ನಡೆಸಿದರು.

ಪರಿಸರ ಹಾಗೂ ಅರಣ್ಯ ವಿಷಯಗಳ ಮೇಲಿನ ಪರಿಣಾಮಗಳ ಕುರಿತು ಅಧ್ಯಯನಕ್ಕಾಗಿ ಕೇಂದ್ರ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಅಧಿಕಾರಿಗಳ ತಂಡ ಯೋಜನಾ ಸ್ಥಳ ಪರಿಶೀಲನೆಗೆ ಆಗಮಿಸಿತ್ತು. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಹಾಗೂ ಇತರ ಹಿರಿಯ ಅಧಿಕಾರಿಗಳ ತಂಡಕ್ಕೆ ಈ ಯೋಜನೆಯ ಮಹತ್ವ ಮತ್ತು ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಡಲಾಯಿತು.

ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ರಸ್ತೆ ಸಾಗಾಣಿಕೆಯ ವೆಚ್ಚ ಶೇ 13 ರಷ್ಟು ದುಬಾರಿಯಾಗಿದೆ. ಈ ವೆಚ್ಚವನ್ನ 2047 ರ ಹೊತ್ತಿಗೆ ಜಗತ್ತಿನ ಇತರ ದೇಶಗಳಲ್ಲಿ ಇರುವಂತೆ ಶೇ 4 ಕ್ಕೆ ಇಳಿಸಲು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪಿಸಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಅಂಕೋಲಾದಂತಹ ರೈಲ್ವೆ ಯೋಜನೆಗಳ ಅಗತ್ಯತೆ ಇದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಉನ್ನತ ಅಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪಶ್ಚಿಮ ಘಟ್ಟಗಳ ಜೀವಸಂಕುಲ ಹಾಗೂ ಇತರ ಪರಿಸರ ಅಸ್ತಿತ್ವಕ್ಕೆ ಧಕ್ಕೆಯಾಗುವುದೆಂಬ ಪರಿಸರಪ್ರೇಮಿಗಳ ಕಾಳಜಿ ಸಹಜವಾಗಿದೆ. ಈ ಬಗ್ಗೆ ತಮಗೂ ಕೂಡಾ ವೈಯಕ್ತಿಕವಾಗಿ ಅಷ್ಟೇ ಕಾಳಜಿ ಇದೆ. ಆದರೆ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಅಭಿವೃದ್ಧಿಯೂ ಕೂಡಾ ಅಷ್ಟೇ ಅಗತ್ಯವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಪರಿಸರ ಹಾಗು ಅಭಿವೃದ್ದಿ ಎರಡರ ಸಮತೋಲನದೊಂದಿಗೆ ಈ ಯೋಜನೆ ಶೀಘ್ರ ಕಾರ್ಯಗತವಾಗಬೇಕಿದೆ. ಭಾಗೀದಾರ ಸಂಸ್ಥೆ, ನೈರುತ್ಯ ರೈಲ್ವೆ ಈ ಮಾರ್ಗದ ನಿರ್ಮಾಣದಲ್ಲಿ ಪರಿಸರಕ್ಕೆ ಹಾಗೂ ಪಶ್ಚಿಮ ಘಟ್ಟದ ಜೀವಸಂಕುಲ ಹಾಗೂ ಅರಣ್ಯ ಪ್ರದೇಶಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸೂಕ್ತ ವರದಿ ನೀಡುವಂತೆ ಸಚಿವರು ಅಧಿಕಾರಿಗಳ ಸಮಿತಿಗೆ ನಿವೇದಿಸಿದರು.

ಸಮಿತಿ ಸೂಚಿಸಿರುವಂತೆ ಈ ಯೋಜನೆಯ ಸಮಗ್ರ ಮಾಸ್ಟರ್ ಪ್ಲಾನ್ ಕೂಡಲೇ ಸಲ್ಲಿಸಲು ಇದೇ ವೇಳೆ ರೈಲ್ವೆ ಅಧಿಕಾರಿಗಳಿಗೆ ಸಚಿವ ಜೋಶಿಯವರು ಸೂಚಿಸಿದರು.

ಸಮಿತಿಯೊಂದಿಗಿನ ಚರ್ಚೆಯಲ್ಲಿ ಸಚಿವರೊಂದಿಗೆ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಶ್ರೀ ಸಂಜೀವ ಕಿಶೋರ್, ಕರ್ನಾಟಕ ಸರಕಾರದ ಮೂಲಭೂತ ಸೌಲಭ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ ಗುಪ್ತಾ, ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಸರಕಾರದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮಹಾನಿರ್ದೇಶಕ ರಾಕೇಶ್ ಸಿಂಗ್, ಉಪನಿರ್ದೇಶಕ ಡಾ. ರಾಜೇಂದ್ರಕುಮಾರ್, ಉಪನಿರ್ದೇಶಕ ವನ್ಯಜೀವಿ ವಿಭಾಗ ಪ್ರೊ. ಸುಕುಮಾರ್, ಎಚ್.ಎಸ್. ಸಿಂಗ್, ಡಾ. ಜಿವಿಗೋಪಿ, ಐಐಟಿ ಧಾರವಾಡ ಪ್ರೊ. ನಾಕೇಶ ಅಯ್ಯರ್ ಮುಂತಾದವರು ಕೇಂದ್ರ ತಂಡದಲ್ಲಿದ್ದಾರೆ.

Published On - 9:41 pm, Thu, 29 September 22