
ಹುಬ್ಬಳ್ಳಿ, ಜನವರಿ 27: 2026ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಕೆಎಲ್ಇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರಭಾಕರ್ ಕೋರೆ ಅವರನ್ನು ಕುಟುಂಬದ ಸದಸ್ಯರೊಡಗೂಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನಿಸಿ, ಅಭಿನಂದಿಸಿದ್ದಾರೆ. ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಕೋರೆ ಅವರ ಅಭೂತಪೂರ್ವ ಸೇವೆ ಗುರುತಿಸಿ ಅತ್ಯುನ್ನತ ಪ್ರಶಸ್ತಿಗೆ ಕೆಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದ್ದು, ಗಣರಾಜ್ಯೋತ್ಸವದ ಹಿಂದಿನ ದಿನ ಈ ಬಗ್ಗೆ ಅಧಿಕೃತವಾಗಿ ಘೋಷಿಸಿತ್ತು.
ಇನ್ನು ಸನ್ಮಾನ ನೆರವೇರಿಸಿದ ಬಳಿಕ ಕೋರೆ ಅವರನ್ನು ಕೊಂಡಾಡಿರುವ ಜೋಶಿ, ಕೆಎಲ್ಇ ಶಿಕ್ಷಣ ಸಂಸ್ಥೆ ಕಟ್ಟಿ ಪ್ರಾಥಮಿಕ ಶಿಕ್ಷಣದಿಂದ ತಾಂತ್ರಿಕ, ವೈದ್ಯಕೀಯದಂತಹ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಅವರ ನಿಸ್ವಾರ್ಥ ಸೇವೆಯನ್ನು ಹಾಡಿ ಹೊಗಳಿದ್ದಾರೆ. ಸಮಾಜಕ್ಕೆ ಉತ್ತಮ ಶಿಕ್ಷಣ, ಆರೋಗ್ಯ ಕಲ್ಪಿಸುವಲ್ಲಿ ದಶಕದಿಂದಲೂ ನಿರತರಾಗಿರುವ ಇವರು, ಅನೇಕ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಹಳ್ಳಿಗರ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ಜೋಶಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪದ್ಮ ಪ್ರಶಸ್ತಿ ಪ್ರಕಟ; ರಾಜ್ಯದ ಶತಾವಧಾನಿ ಆರ್. ಗಣೇಶ್ಗೆ ಪದ್ಮ ಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್
ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ವ್ಯಾಪಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರದಿಂದ ನೀಡಲ್ಪಡುವ ಪದ್ಮ ಪ್ರಶಸ್ತಿಗೆ ಪ್ರಭಾಕರ ಕೋರೆ ಸೇರಿ ರಾಜ್ಯದ 8 ಮಂದಿ ಭಾಜನರಾಗಿದ್ದಾರೆ. ಅಂಕೇಗೌಡ ಎಂ., ಎಸ್.ಜಿ. ಸುಶೀಲಮ್ಮ, ಶಶಿಶೇಖರ್ ವೆಂಪತಿ, ಶುಭಾ ವೇಂಕಟೇಶ್ ಐಯ್ಯಂಗಾರ್, ಡಾ.ಸುರೇಶ್ ಹನಗವಾಡಿ, ಟಿ.ಟಿ. ಜಗನ್ನಾಥನ್ ಕೂಡ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಶತಾವಧಾನಿ ಆರ್. ಗಣೇಶ್ ಅವರಿಗೆ ಪ್ರಸಕ್ತ ಸಾಲಿನ ಪದ್ಮ ಭೂಷಣ ಪ್ರಶಸ್ತಿ ಒಲಿದು ಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.