ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ: ಒಂದೇ ದಿನ 36ಕ್ಕೂ ಅಧಿಕ ಮಂದಿ ಮೇಲೆ ದಾಳಿ
ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಶಿವಮೊಗ್ಗ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಂದೇ ದಿನ 36ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿವೆ. ಭದ್ರಾವತಿಯಲ್ಲಿ 11, ಧಾರವಾಡದಲ್ಲಿ 15 ಹಾಗೂ ಬಾಗಲಕೋಟೆಯಲ್ಲಿ 10ಕ್ಕೂ ಹೆಚ್ಚು ಮಂದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಸಾರ್ವಜನಿಕರು ಆತಂಕಗೊಂಡಿದ್ದು, ಬೀದಿ ನಾಯಿಗಳನ್ನು ಹಿಡಿಯದ ಸ್ಥಳೀಯ ಆಡಳಿತಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ/ ಧಾರವಾಡ, ಜನವರಿ 27: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ಶಿವಮೊಗ್ಗದ ಭದ್ರವಾತಿ, ಧಾರವಾಡ ಮತ್ತು ಬಾಗಲಕೋಟೆ ಸೇರಿ ವಿವಿಧೆಡೆ ನಿನ್ನೆ ಒಂದೇ ದಿನ 36ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಭದ್ರಾವತಿಯಲ್ಲಿ 11 ಜನರಿಗೆ ಹುಚ್ಚು ನಾಯಿ ಕಡಿದಿದ್ದರೆ, ಧಾರವಾಡದಲ್ಲಿ 15ಕ್ಕೂ ಅಧಿಕ ಮಂದಿ ಇಂತಹುದ್ದೇ ಪ್ರಕರಣದಲ್ಲಿ ಗಾಯಗೊಂಡಿದ್ದಾರೆ. ಅತ್ತ ಬಾಗಲಕೋಟೆಯಲ್ಲಿಯೂ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿದೆ.
ಹೊಳೆಹೊನ್ನೂರಲ್ಲಿ ಹುಚ್ಚುನಾಯಿ ಅಟ್ಟಹಾಸ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ನಿನ್ನೆ ಒಂದೇ ದಿನ ಮಕ್ಕಳೂ ಸೇರಿದಂತೆ ಒಟ್ಟು 11 ಮಂದಿಗೆ ಹುಚ್ಚು ನಾಯಿ ಕಡಿದಿದೆ. ಗಾಯಗೊಂಡಿರುವ ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಕುರಿತಂತೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ತಕ್ಷಣವೇ ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಲಾಗಿದೆ. ಹೊಳೆಹೊನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರೂ ದೂರಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಶ್ವಾನಗಳ ಅಟ್ಟಹಾಸ; ಒಂದೇ ವರ್ಷದಲ್ಲಿ 10 ಜನರನ್ನು ಬಲಿ ಪಡೆದ ಬೀದಿನಾಯಿಗಳು
ರಸ್ತೆಯಲ್ಲಿ ತಿರುಗಾಡುತ್ತಿದ್ದವರ ಮೇಲೆ ಅಟ್ಯಾಕ್
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿಯೂ ರಾತ್ರಿ ವೇಳೆ ರಸ್ತೆಯಲ್ಲಿ ತಿರುಗಾಡುತ್ತಿದ್ದವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಜನರಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೆಲವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೂ ದಾಖಲಿಸಲಾಗಿದೆ. ಇನ್ನು ಘಟನೆ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ದಾಳಿ ಮಾಡಿದ ಹುಚ್ಚುನಾಯಿ ಹಿಡಿದು ಕೊಂದಿದ್ದು, ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರವಚನ ಮುಗಿಸಿ ತೆರಳುತ್ತಿದ್ದವರ ಮೇಲೆ ದಾಳಿ
ಪ್ರವಚನ ಮುಗಿಸಿ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ 10ಕ್ಕೂ ಅಧಿಕ ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಹಳೆ ಬಾಗಲಕೋಟೆಯ ತೆಂಗಿನಮಠ ಓಣಿಯಲ್ಲಿ ನಡೆದಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಪೈಕಿ ಪುಟ್ಟ ಮಕ್ಕಳೂ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪದೇ ಪದೇ ಅವುಗಳು ದಾಳಿ ನಡೆಸುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
