ಲಕ್ಕುಂಡಿ ಉತ್ಖನನ ಕಾರ್ಯ ಅಪಾಯದ ಹಂತಕ್ಕೆ: ಅಧಿಕಾರಿ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯ ಸದ್ಯ ಅಪಾಯದ ಹಂತದಲ್ಲಿದೆ. ಉತ್ಖನನ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಇನ್ನು ಟಿವಿ9 ವರದಿ ಬೆನ್ನಲ್ಲೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಗದಗ, ಜನವರಿ 27: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (excavation) ಕಾರ್ಯ ಇದೀಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಕೆಲ ಪ್ರಾಚ್ಯಾವಶೇಷಗಳು ಪತ್ತೆ ಆಗಿವೆ. ಈ ಮಧ್ಯೆ ಉತ್ಖನನ ಕಾರ್ಯ ಅಪಾಯದ ಹಂತ ತಲುಪಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಜೀವದ ಹಂಗು ತೊರೆದು ಸಿಬ್ಬಂದಿಗಳು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಕ್ಸ್‌ನಲ್ಲಿ ಬಿರುಕು: ಮಣ್ಣು ಕುಸಿಯುವ ಆತಂಕ
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು?
ಸ್ಥಳದಲ್ಲಿನ ಬಿರುಕುಗಳು, ದೊಡ್ಡ ಕಲ್ಲುಗಳಿಂದ ಉತ್ಖನನ ಕಾರ್ಯಕ್ಕೆ ಸವಾಲಾಗಿದೆ. ಸಿಬ್ಬಂದಿಗಳ ಸುರಕ್ಷತೆಗೆ ತಕ್ಷಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಟಿವಿ9 ವರದಿ ಮಾಡಿದ್ದು, ಲಕ್ಕುಂಡಿ ಪ್ರಾಧಿಕಾರದ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
ಉತ್ಖನನ ಸ್ಥಳದಲ್ಲಿ ನಾಲ್ಕು ಬಾಕ್ಸ್ ಮಾಡಿ ಶೋಧ ಕಾರ್ಯ ನಡೆಯುತ್ತಿದ್ದು, ಇದೀಗ ನಾಲ್ಕು ಬಾಕ್ಸ್ ಮದ್ಯದ ಮಣ್ಣು ಪೂರ್ಣವಾಗಿ ತೆಗೆದು, ಒಂದು ಬಾಕ್ಸ್ ಮಾಡಲಾಗುತ್ತಿದೆ. ಹೀಗಾಗಿ ಬಾಕ್ಸ್ ಗಳ ಮದ್ಯದ ಮಣ್ಣು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎರಡು ದಿನದಲ್ಲಿ ಮಣ್ಣು ತೆರವು ಮಾಡಲಾಗುವುದು.
ಉತ್ಖನ ಬಗ್ಗೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಅಪಸ್ವರ
ಇಂದು ಲಕ್ಕುಂಡಿ ಉತ್ಖನ ಸ್ಥಳಕ್ಕೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಭೇಟಿ ನೀಡಿದ್ದು, ಉತ್ಖನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮಣ್ಣು ಅಗೆಯುವುದು ಬಿಟ್ಟು ಯಂತ್ರಗಳಿಂದ ಮಣ್ಣು ತೆಗೆಯಬೇಕು. ಭೂಮಿಯಲ್ಲಿನ ಸಂಪತ್ತು ಪತ್ತೆ ಮಾಡುವ ಯಂತ್ರದಿಂದ ಶೋಧ ಮಾಡಬೇಕು ಎಂದಿದ್ದಾರೆ. ಲಕ್ಕುಂಡಿ ಉತ್ಸವ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಲಕ್ಕುಂಡಿ ಉತ್ಸವ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಉತ್ಖನನ ವೇಳೆ ಪತ್ತೆಯಾಗಿದ್ದೇನು?
ಬೆಟಗೇರಿಯಲ್ಲಿ ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಪತ್ತೆ ಆಗಿದ್ದು, ಯುದ್ಧದ ಭೀಕರತೆಯನ್ನ ಸಾರಿ ಸಾರಿ ಹೇಳುತ್ತಿವೆ. ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಅಪರೂಪದ ಬೃಹತ್ ಆಕಾರದ ವೀರಗಲ್ಲುಗಳು. ಭೂಲೋಕ, ಮಧ್ಯಲೋಕ, ದೇವಲೋಕದ ಕಥೆ ಹೇಳುತ್ತಿವೆ.
9, 10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಯುದ್ದಗಳು ಆಗಿರುವ ಕುರುಹುಗಳು ಪತ್ತೆಯಾಗಿವೆ. ಇನ್ನು ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಉತ್ಖನನ ಮಾಡುವ ವೇಳೆ ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆ ಆಗಿದೆ.
ಇದನ್ನೂ ಓದಿ: ಗದಗ: ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಗಣರಾಜ್ಯೋತ್ಸವ ದಿನ ಭರ್ಜರಿ ಉಡುಗೊರೆ ನೀಡಿದ ಸರ್ಕಾರ
ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಸದ್ಯ ಉತ್ಖನನ ಜಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ಬಾಕ್ಸ್ಗಳ ಮದ್ಯದ ಮಣ್ಣು ತೆರವು ಮಾಡಿ, ಒಂದೇ ಬಾಕ್ಸ್ ಮಾಡಿ, ಉತ್ಖನನ ಮುಂದುವರಿಸಲು ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ. ಉತ್ಖನನ ವೇಳೆ ಏನೆಲ್ಲಾ ಸಂಪತ್ತು ಸಿಗಲಿದೆ ಎನ್ನುವದು ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.