ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
ಕಚ್ಚುವ ನಾಯಿಗಳನ್ನು ಗುರುತಿಸುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಶಾಲೆ, ಆಸ್ಪತ್ರೆಗಳಲ್ಲಿ ಅವುಗಳ ಇರುವಿಕೆಯನ್ನು ಪ್ರಶ್ನಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ನಾಯಿಗಳನ್ನು ಸಂತಾನಹರಣ, ಲಸಿಕೆ ನಂತರ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿದೆ. ಸಾರ್ವಜನಿಕ ಸುರಕ್ಷತೆಗಾಗಿ ನಾಯಿ ಕಡಿತ ಹೆಚ್ಚಳದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.

ನವದೆಹಲಿ, ಜನವರಿ 07: ‘‘ಬೀದಿ ನಾಯಿ(Stray Dog)ಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’’ ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಅಪಾಯಕಾರಿ ನಾಯಿಗಳನ್ನು ನಡವಳಿಕೆಯಿಂದ ಮಾತ್ರ ಗುರುತಿಸುವುದು ಅಸಾಧ್ಯವೆಂದಿದ್ದಾರೆ.
ರಸ್ತೆಗಳು ಮತ್ತು ಬೀದಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿನ ಸವಾಲನ್ನು ಪೀಠವು ಒತ್ತಿ ಹೇಳಿದೆ. ಶಾಲೆಗಳು, ಆಸ್ಪತ್ರೆಗಳು ಅಥವಾ ನ್ಯಾಯಾಲಯಗಳ ಒಳಗೆ ಬೀದಿ ನಾಯಿಗಳು ಏಕಿರಬೇಕು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅಂತಹ ಸೂಕ್ಷ್ಮ ಆವರಣಗಳಿಂದ ನಾಯಿಗಳನ್ನು ಓಡಿಸುವಲ್ಲಿ ನಿಮಗಾಗುವ ತೊಂದರೆಗಳೇನು ಎಂದು ಕೇಳಿದೆ.
ಕಳೆದ ವರ್ಷ ನವೆಂಬರ್ 7 ರಂದು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳಲ್ಲಿ ಆತಂಕಕಾರಿ ಹೆಚ್ಚಳ ಗಮನಿಸಿದ ಸುಪ್ರೀಂ ಕೋರ್ಟ್, ದೆಹಲಿ-ಎನ್‌ಸಿಆರ್‌ನಲ್ಲಿ ಸಂತಾನಹರಣ ಮಾಡಿ , ಲಸಿಕೆ ಹಾಕಿದ ನಂತರ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ತಕ್ಷಣವೇ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು.
ಮತ್ತಷ್ಟು ಓದಿ: ಶಾಲೆಗಳ ಸುತ್ತಮುತ್ತ ಬೀದಿ ನಾಯಿ ಉಪಟಳ ತಡೆಯಲು ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಬೀದಿ ನಾಯಿಗಳನ್ನು ಎಲ್ಲಿಂದ ಕರೆದುಕೊಂಡು ಹೋಗಿರುತ್ತೀರೋ ಮತ್ತೆ ಅದೇ ಸ್ಥಳಕ್ಕೆ ಬಿಡುವಂತೆಯೂ ಪೀಠವು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಎಲ್ಲಾ ದನಗಳು ಮತ್ತು ಇತರ ಬೀದಿ ಪ್ರಾಣಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾದ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ತೀರ್ಪು ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
