ಸುಪ್ರೀಂ ಛೀಮಾರಿ ಬೆನ್ನಲ್ಲೇ ಕರ್ನಾಟಕ ಅಲರ್ಟ್: ನಾಯಿ ಕಡಿತಕ್ಕೆ ಸಮಗ್ರ ಚಿಕಿತ್ಸಾ ಪ್ಲಾನ್ ರೂಪಿಸಿದ ಇಲಾಖೆ
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಪಟಾಣಿ ಮಕ್ಕಳು, ಮಹಿಳೆಯರ ಮೇಲೆಯೇ ಬೀದಿನಾಯಿಗಳ ದಾಳಿ ಹೆಚ್ಚಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲೂ ಪೋಷರರು ಭಯಪಡುವಂತಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ನಾಯಿಗಳ ಕಡಿತ ಹೆಚ್ಚಾಗಿದ್ದು, ಈ ಬಗ್ಗೆ ವರದಿ ಸಲ್ಲಿಸದ ಕರ್ನಾಟಕಕ್ಕೂ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಇದರ ಬೆನ್ನಲ್ಲೇ ಈಗ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ಬೆಂಗಳೂರು, ನವೆಂಬರ್ 7: ಬೆಂಗಳೂರಿನಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು (Stray Dogs) ದಾಂಗುಡಿ ಇಡುತ್ತಿದ್ದು, ಮಕ್ಕಳು-ಮಹಿಳೆಯರು ಹಾಗೂ ವಯೋವೃದ್ಧರ ಮೇಲೆ ಹೆಚ್ಚಾಗಿ ಎಗರಿ ಬೀಳುತ್ತಿವೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬೀದಿ ನಾಯಿ ದಾಳಿ ಪ್ರಕರಣ ಹೆಚ್ಚಾಗಿದ್ದು, ಜನರು ಪರದಾಡುವಂತಾಗಿದೆ. ಬೆಂಗಳೂರು, ಕರ್ನಾಟಕ (Karnataka) ಮಾತ್ರವಲ್ಲದೆ ದೇಶದಲ್ಲಿಯೇ ಬೀದಿ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಿರುವುದನ್ನು ಮನಗಂಡ ಸುಪ್ರೀಂಕೋರ್ಟ್ (Supreme Court) ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸತ್ತಿದ್ದು, ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಿತ್ತು. ಈ ಬಗ್ಗೆ ಮಾಹಿತಿ ನೀಡದ ಕಾರಣ ರಾಜ್ಯದ ಮೇಲೂ ಕೋರ್ಟ್ ಗರಂ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಬೀದಿ ನಾಯಿ ಕಡಿತಕ್ಕೆ ತುರ್ತು ಚಿಕಿತ್ಸಾ ಕ್ರಮಗಳಿಗೆ ಮುಂದಾಗಿದೆ.
ಕರ್ನಾಟಕದಲ್ಲಿ ತಿಂಗಳಿಗೆ 40 ಸಾವಿರ ನಾಯಿ ಕಡಿತ ಪ್ರಕರಣ
ಬೆಂಗಳೂರು ಸೇರಿದ್ದಂತೆ ರಾಜ್ಯದ್ಯಲ್ಲಿ ಪ್ರತಿ ತಿಂಗಳು 40 ಸಾವಿರ ನಾಯಿ ಕಡಿತ ಪ್ರಕರಣ ದಾಖಲಾಗುತ್ತಿವೆ. ಈ ಬಗ್ಗೆ ರಾಜ್ಯ ಸೇರಿ ದೇಶದ ಎಲ್ಲ ರಾಜ್ಯಗಳಿಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಈಗ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ನಾಯಿ ಕಡಿತದ ಚಿಕಿತ್ಸಾ ಕ್ರಮಗಳ ಸುಧಾರಣೆಗೆ ಮುಂದಾಗಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಗೆ ತುರ್ತು ಕ್ರಮಗಳನ್ನು ಆಸ್ಪತ್ರೆಯಲ್ಲಿ ವಹಿಸುವಂತೆ ಸೂಚಿಸಿದೆ.
ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಎಲ್ಲಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತದ ಚಿಕಿತ್ಸೆಯ ವ್ಯಾಕ್ಸಿನ್ ಔಷಧ ಲಭ್ಯತ್ಯ ಇಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಉಚಿತವಾಗಿ ಹಾಗೂ ತ್ವರಿತ ಚಿಕಿತ್ಸೆ ನೀಡುವ ಬಗ್ಗೆ ಸೂಚನೆ ನೀಡಿದ್ದು, ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸೇರಿದಂತೆ ಅವುಗಳ ನಿಯಂತ್ರಣ ಕ್ರಮಗಳ ಬಗ್ಗೆ ಕೋರ್ಟ್ ಸೂಚನೆ ಅನುಸರಿಸಲು ನಿರ್ದೇಶನ ನೀಡಿದೆ. ಪ್ರಾಣಿ ಪ್ರಿಯರು ಮತ್ತು ಸ್ಥಳೀಯ ಇಲಾಖೆಗಳ ಸಮನ್ವಯದ ಜೊತೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ಈ ವರ್ಷ 4 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ
2025 ಜನವರಿಯಿಂದ ನವೆಂಬರ್ 3 ತನಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 4,10,151 ಜನರಿಗೆ ನಾಯಿ ಕಡಿತವಾಗಿದೆ. ನಾಯಿ ಕಡಿತದಿಂದ 34 ಜನ ಮೃತಪಟ್ಟಿದ್ದಾರೆ. ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಮಾತ್ರವಲ್ಲದೆ ಉದ್ಯಮಿಗಳ ಮೇಲೂ ಬೀದಿ ನಾಯಿಗಳು ದಾಳಿ ಮಾಡಿರುವ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ.
ನಾಯಿ ಕಡಿತ ಪ್ರಕರಣಗಳ ವಿವರ
- ನಾಯಿ ದಾಳಿಯಿಂದ ರಾಜ್ಯದಲ್ಲಿ ಜನವರಿಯಿಂದ ನವೆಂಬರ್ ವರೆಗೆ 34 ಜನರು ಬಲಿ
- ಒಂದೇ ವಾರದಲ್ಲಿ 12,257 ಹೆಚ್ಚು ಜನರ ಮೇಲೆ ಬೀದಿ ನಾಯಿ ದಾಳಿ
- ಕಳೆದ ಒಂದು ವಾರದಲ್ಲಿ ನಾಯಿ ಕಡಿತದಿಂದ 3 ಜನರು ಸಾವು
- 2024 ರಲ್ಲಿ ರಾಜ್ಯದಲ್ಲಿ 3,61,622 ನಾಯಿ ಕಡಿತ ಪ್ರಕರಣ, 42 ಸಾವು
- 2025 ಜನವರಿಯಿಂದ ನವೆಂಬರ್ 2ರ ವರೆಗೆ 4,10,152 ನಾಯಿ ಕಡಿತ ಪ್ರಕರಣ, 34 ಸಾವು
ಇದನ್ನೂ ಓದಿ: ಬೀದಿನಾಯಿ ನಿಯಂತ್ರಣಕ್ಕೆ ಏನೆಲ್ಲ ಕ್ರಮ?: ಸುಪ್ರೀಂಗೆ ವರದಿ ಸಲ್ಲಿಸಿದ ಕರ್ನಾಟಕ
ಒಟ್ಟಿನಲ್ಲಿ ಸರ್ಕಾರ ಎಲ್ಲ ಇಲಾಖೆಗಳ ಜೊತೆಗೂಡಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕಿದೆ. ಇಲ್ಲದೆ ಹೋದರೆ ಬೀದಿ ನಾಯಿಗಳ ಹಾವಳಿ ಜನರ ನಿದ್ದೆಗೆಡಿಸಿವುದು ಪಕ್ಕಾ.



