ಬೆಳಗಾವಿಯಲ್ಲಿ ಶ್ವಾನಗಳ ಅಟ್ಟಹಾಸ: ಒಂದೇ ವರ್ಷದಲ್ಲಿ 10 ಜನರನ್ನು ಬಲಿ ಪಡೆದ ಬೀದಿನಾಯಿಗಳು
ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಹತ್ತು ಜನರು ನಾಯಿ ಕಡಿತದಿಂದ ಸಾವನ್ನಪ್ಪಿದ್ದು, 21,703 ಜನರಿಗೆ ಕಚ್ಚಿದೆ. ಸದ್ಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದಿಂದ ಪರಿಹಾರಕ್ಕೆ ಒತ್ತಾಯ ಹೆಚ್ಚಾಗಿದೆ.

ಬೆಳಗಾವಿ, ಜನವರಿ 14: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಬೀದಿ ನಾಯಿಗಳ (Stray Dog) ಅಟ್ಟಹಾಸ ಜೋರಾಗಿದೆ. ಮಕ್ಕಳ ಮೇಲೆ ನಾಯಿಗಳ ದಾಳಿ ಮುಂದುವರೆದಿದ್ದು, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಒಂದು ವರ್ಷದ ಅವಧಿಯಲ್ಲಿ ನಾಯಿ ಕಡಿತಕ್ಕೆ 10 ಜನ ಬಲಿಯಾಗಿದ್ದು, ಎಲ್ಲರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮಹಾನಗರ ಪಾಲಿಕೆಯಲ್ಲಿ ನಾಯಿ ಹಿಡಿಯುವ ಚರ್ಚೆ ಕೂಡ ನಡೆದಿದೆ.
ಬೀದಿ ನಾಯಿಗೆ ನಲುಗಿದ ಜನರು
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬೀದಿ ನಾಯಿಗಳ ದಾಳಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಂದು ಚಿಕ್ಕೋಡಿ ಪಟ್ಟಣದ ವೆಂಕಟೇಶ ಗಲ್ಲಿಯಲ್ಲಿ ಬೀದಿ ನಾಯಿಗಳು ಹಿಂಡು ಕಟ್ಟಿಕೊಂಡು ಮನೆ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ದಾಳಿ ನಡೆಸಿವೆ. ಸ್ಥಳೀಯರು ಮಗುವನ್ನ ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯ
ರುತ್ವಿಕ್ ಕುದರೆ ಎಂಬ ಮಗುವಿನ ಮೇಲೆ ದಾಳಿ ಮಾಡಿದ್ದ ನಾಯಿಗಳು, ಮುಖ ಕಚ್ಚಿ ಗಾಯಗೊಳಿಸಿದ್ದು ಮಗುವಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಪಕ್ಕದಲ್ಲೇ ಘಟನೆ ಆಗಿದ್ದು ಹೀಗಾಗಿ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡುವಂತೆ ಅಂಗನವಾಡಿ ಶಿಕ್ಷಕಿ ಮನವಿ ಮಾಡಿಕೊಂಡಿದ್ದಾರೆ. ಇತ್ತ ಅಧಿಕಾರಿಗಳ ಗಮನಕ್ಕೆ ತಂದರೂ ನಾಯಿಗಳನ್ನ ಹಿಡಿಯುವ ಕೆಲಸ ಆಗುತ್ತಿಲ್ಲ ಎಂದು ಬಾಲಕನ ತಂದೆ ಆನಂದ ಕುದರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿ ನಗರದಲ್ಲಿ ಒಂದು ಮಗುವಿಗೆ ನಾಯಿ ಕಚ್ಚಿ ಗಾಯಗೊಳಿಸಿತ್ತು. ಹೀಗೆ ಪ್ರತಿಯೊಂದು ಭಾಗದಲ್ಲೂ ನಾಯಿಗಳ ಅಟ್ಟಹಾಸ ಜೋರಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಹತ್ತು ಜನರು ಸಾವು
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ 2025 ಒಂದು ವರ್ಷದ ಅವಧಿಯಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 10 ಜನ ನಾಯಿ ಕಡಿತದಿಂದಲೇ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 21,703 ಜನರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಾಯಿಗಳ ಪರಾಕ್ರಮ ಮೆರೆಯುತ್ತಿದ್ದರು ಜಿಲ್ಲಾಡಳಿತ ಸೈಲೆಂಟ್ ಆಗಿದೆ ಅನ್ನೋ ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನೀಡಿದ ದಾಖಲೆಗಳೇ ನಾಯಿಗಳ ದಾಳಿಯ ಭೀಕರತೆ ಬಿಚ್ಚಿಡುತ್ತಿದೆ. ಬೀದಿ ನಾಯಿ ದಾಳಿ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೂಡ ಚರ್ಚೆ ಆಗಿದ್ದು, ನಾಯಿಗಳ ಸ್ಥಳಾಂತರ ಹಾಗೂ ಸಂತಾನಹರಣ ಚಿಕಿತ್ಸೆ ಕುರಿತು ಕೂಡ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾಯಿಗಳ ಸ್ಥಳಾಂತರಕ್ಕೆ ಪ್ಲ್ಯಾನ್ ಮಾಡಿದ್ದು, ಅದಕ್ಕೆ ಬೇಕಾದ ಶೆಲ್ಟರ್ ಕೂಡ ನಿರ್ಮಾಣ ಮಾಡಿ ಸರಿ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು
ಬೆಳಗಾವಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಇತ್ತಿಚೇಗೆ ಬೀದಿ ನಾಯಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರ ಮೇಲೆ ದಾಳಿ ನಡೆಸಿವೆ ಅನ್ನೋದಕ್ಕೆ ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶಗಳೇ ಸಾಕ್ಷಿ. ಇತ್ತ ನಾಯಿ ದಾಳಿಯಿಂದ 10 ಜನ ಕಳೆದ ವರ್ಷದಲ್ಲಿ ಸಾವನ್ನಪ್ಪಿರುವುದು ಭಯ ಹುಟ್ಟಿಸಿದೆ. ಸದ್ಯ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಿರುವ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡಬೇಕಿದೆ. ಜೊತೆಗೆ ನಾಯಿ ಕಚ್ಚಿಸಿಕೊಂಡವರು ಕೂಡ ತಕ್ಷಣ ಚಿಕಿತ್ಸೆ ಪಡೆದುಕೊಂಡು ಜೀವ ಉಳಿಸಿಕೊಳ್ಳುವುದು ಒಳಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:51 pm, Wed, 14 January 26