Padma Awards 2026: ರೋಹಿತ್, ಹರ್ಮನ್ಪ್ರೀತ್ ಸೇರಿದಂತೆ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ
Padma Awards 2026: 2026ರ ಗಣರಾಜ್ಯೋತ್ಸವದ ಮುನ್ನಾದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕ್ರೀಡಾ ವಿಭಾಗದಲ್ಲಿ ಹಲವು ಸಾಧಕರು ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಾಯಕರಾದ ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಜೊತೆಗೆ ಟೆನಿಸ್ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ದೊರಕಿದೆ. 131 ವ್ಯಕ್ತಿಗಳಿಗೆ ನೀಡಲಾದ ಈ ಪ್ರಶಸ್ತಿಗಳಲ್ಲಿ ಕ್ರೀಡಾ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗಿದೆ.

2026 ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು ಭಾರತ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆ ಪ್ರಕಾರ ಕ್ರೀಡಾ ವಿಭಾಗದಲ್ಲೂ ವಿವಿದ ಸಾಧಕರಿಗೆ ಈ ಗೌರವ ಸಂದಿದೆ. ಅದರಲ್ಲೂ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಐಸಿಸಿ ಟ್ರೋಫಿಗೆ ಮುನ್ನಡೆಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪುರುಷರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರ ಜೊತೆಗೆ ದೇಶದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರರಲ್ಲಿ ಒಬ್ಬರಾದ ವಿಜಯ್ ಅಮೃತರಾಜ್ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜನವರಿ 25 ರ ಭಾನುವಾರದಂದು, ಸರ್ಕಾರವು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿದಂತೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತು. ಈ ವರ್ಷ, ಸರ್ಕಾರವು ಒಟ್ಟು 131 ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ, ಅದರಲ್ಲಿ ಐವರಿಗೆ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣವೂ ಸೇರಿದೆ. ಹದಿಮೂರು ಜನರಿಗೆ ಪದ್ಮಭೂಷಣ ಮತ್ತು ಒಟ್ಟು 113 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಒಬ್ಬರಿಗೆ ಪದ್ಮಭೂಷಣ ಮತ್ತು ಎಂಟು ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡ ಕಳೆದ ವರ್ಷ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಹೀಗೆ ರೋಹಿತ್ ಶರ್ಮಾ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡನೇ ಐಸಿಸಿ ಟ್ರೋಫಿಗೆ ಮುನ್ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇತ್ತ ಕಳೆದ ನವೆಂಬರ್‌ನಲ್ಲಿ, ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಿದ್ದರು. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಐಸಿಸಿ ಟ್ರೋಫಿಯಾಗಿದೆ. ಇದೀಗ ಈ ಸಾಧನೆಗಳಿಗಾಗಿ, ಈ ಇಬ್ಬರು ದಿಗ್ಗಜರನ್ನು ಗೌರವಿಸಲಾಗಿದೆ.
ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿ
- ವಿಜಯ್ ಅಮೃತರಾಜ್ (ಟೆನಿಸ್) – ಪದ್ಮಭೂಷಣ
- ರೋಹಿತ್ ಶರ್ಮಾ (ಕ್ರಿಕೆಟ್) – ಪದ್ಮಶ್ರೀ
- ಹರ್ಮನ್ಪ್ರೀತ್ ಕೌರ್ (ಕ್ರಿಕೆಟ್) – ಪದ್ಮಶ್ರೀ
- ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್) – ಪದ್ಮಶ್ರೀ
- ಬಲದೇವ್ ಸಿಂಗ್ (ಹಾಕಿ) – ಪದ್ಮಶ್ರೀ
- ಭಗವಾನ್‌ದಾಸ್ ರಾಯ್ಕ್ವಾರ್ (ಸಾಂಪ್ರದಾಯಿಕ ಸಮರ ಕಲೆಗಳು) – ಪದ್ಮಶ್ರೀ
- ಕೆ.ಪಜನಿವೇಲ್ (ಸಿಲಂಬಂ)- ಪದ್ಮಶ್ರೀ
- ಸವಿತಾ ಪುನಿಯಾ (ಹಾಕಿ)- ಪದ್ಮಶ್ರೀ
- ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ನಿಧನ) – ಪದ್ಮಶ್ರೀ (ಕುಸ್ತಿ ತರಬೇತುದಾರ)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
