ಸ್ಮೃತಿ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್
Palash Muchhal vs Vidnyan Mane: ಭಾರತ ಮಹಿಳಾ ಕ್ರಿಕೆಟ್ ತಾರೆಯಾದ ಸ್ಮೃತಿ ಮಂಧಾನಾ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ರದ್ದಾದ ಬಗ್ಗೆ ಹೊಸ ತಿರುವು. ಮರಾಠಿ ನಟ ವಿದ್ಯಾನ್ ಮಾನೆ, ಪಲಾಶ್ ನಡವಳಿಕೆಯೇ ಮದುವೆ ರದ್ದಿಗೆ ಕಾರಣ, ಅಲ್ಲದೆ ₹40 ಲಕ್ಷ ವಂಚನೆ ಆರೋಪ ಮಾಡಿದ್ದಾರೆ. ಆದರೆ, ಪಲಾಶ್ ಈ ಆರೋಪಗಳನ್ನು ನಿರಾಕರಿಸಿ, ವಿದ್ಯಾನ್ ಮಾನೆ ವಿರುದ್ಧ ₹10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದು ತಮ್ಮ ಖ್ಯಾತಿಗೆ ಕಳಂಕ ತರುವ ಪಿತೂರಿ ಎಂದಿದ್ದಾರೆ.

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಅವರ ವಿವಾಹ ರದ್ದಾಗಿದ್ದು ಹಳೆಯ ವಿಚಾರ. ಮಾಜಿ ಪ್ರೇಮಿಗಳಿಬ್ಬರು ಕಳೆದ ಡಿಸೆಂಬರ್ನಲ್ಲೇ ಮದುವೆ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವ ಕಾರಣಕ್ಕೆ ರದ್ದಾಯಿತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಇವರಿಬ್ಬರ ಮದುವೆ ರದ್ದತಿಯ ಬಗ್ಗೆ ಆಘಾತಕ್ಕಾರಿ ಹೇಳಿಕೆ ನೀಡಿದ್ದ ಮರಾಠಿ ನಟ ಮತ್ತು ನಿರ್ಮಾಪಕ ವಿದ್ಯಾನ್ ಮಾನೆ (Vidnyan Mane) ಪಲಾಶ್ ಅವರ ನಡವಳಿಕೆಯೇ ಮದುವೆ ರದ್ದತಿಗೆ ಕಾರಣ ಎಂದಿದ್ದರು. ಇದು ಮಾತ್ರವಲ್ಲದೆ ಪಲಾಶ್ ಚಿತ್ರದ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅವರು ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಲಾಶ್, ಇದೆಲ್ಲವೂ ತಮ್ಮ ಖ್ಯಾತಿಗೆ ಕಳಂಕ ತರುವ ಪಿತೂರಿ ಎಂದಿದ್ದು, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ
ಅಷ್ಟಕ್ಕೂ ಇವರಿಬ್ಬರ ಮದುವೆ ರದ್ದತಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದ ವಿದ್ಯಾನ್ ಮಾನೆ, ‘ಸ್ಮೃತಿ ಹಾಗೂ ಪಲಾಶ್ ಅವರ ಮದುವೆ ಸಮಾರಂಭದಲ್ಲಿ ನಾನು ಕೂಡ ಹಾಜರಿದ್ದೆ. ಅಂದು ಪಲಾಶ್ ಒಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಅದು ಭಯಾನಕ ದೃಶ್ಯವಾಗಿತ್ತು. ಇದಾದ ಬಳಿಕ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು, ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಅವರನ್ನು ಥಳಿಸಿದರು. ಇದಾದ ಬಳಿಕ ಮದುವೆ ಮುರಿದುಬಿದ್ದಿತು’ ಎಂದಿದ್ದರು.
40 ಲಕ್ಷ ರೂಪಾಯಿಗಳ ಹೂಡಿಕೆ
ಇನ್ನು ಪಲಾಶ್ ವಿರುದ್ಧ ವಂಚನೆ ಮತ್ತು ಆರ್ಥಿಕ ದುರುಪಯೋಗದ ಗಂಭೀರ ಆರೋಪಗಳನ್ನು ಹೊರಿಸಿದ್ದ ವಿದ್ಯಾನ್ ಮಾನೆ, ‘ಪಲಾಶ್ ಸಿನಿಮಾದ ಹೆಸರಿನಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದರು, ಆದರೆ ಆ ಚಿತ್ರವನ್ನು ನಿರ್ಮಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ. ನಾನು ಸ್ಮೃತಿಯ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾಗಿದ್ದೆ. ಈ ಸಮಯದಲ್ಲಿ ಪಲಾಶ್ ನನ್ನ ಬಳಿ ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿದರು. ಅಲ್ಲದೆ ಆರು ತಿಂಗಳೊಳಗೆ ಸಿನಿಮಾವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ನಾನು ಪಾಲಾಶ್ ಸಿನಿಮಾದ ಮೇಲೆ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಆದಾಗ್ಯೂ, ಮದುವೆ ರದ್ದಾದ ನಂತರ ಪಲಾಶ್ ನನ್ನ ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದರು.
ಮದುವೆ ಮನೆಯಲ್ಲೇ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್
10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ
ಇದೀಗ ವಿದ್ಯಾನ್ ಮಾನೆ ಅವರ ಆರೋಪಗಳನ್ನು ಸುಳ್ಳು ಎಂದಿರುವ ಪಲಾಶ್ ಮುಚ್ಚಲ್, ‘ನಾನು ತಮ್ಮ ವಕೀಲ ಶ್ರೇಯಂಶ್ ಮಿಥಾರೆ ಮೂಲಕ ವಿದ್ಯಾನ್ ಮಾನೆ ಅವರ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇನೆ. ವಿದ್ಯಾನ್ ಮಾನೆ ತಮ್ಮ ಹೆಸರು ಮತ್ತು ಪಾತ್ರಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾತ್ರ ಇಂತಹ ಸುಳ್ಳುಗಳನ್ನು ಹರಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸುವವರನ್ನು ತಾವು ಬಿಡುವುದಿಲ್ಲ ಎಂದು ಪಲಾಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sun, 25 January 26
