T20 World Cup 2026: ಪಾಕ್ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್
Pakistan T20 World Cup 2026 Squad: 2026ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಪಾಕ್, ಈ ಬಾರಿ ತಂಡದಲ್ಲಿ 7 ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಬಾಬರ್ ಆಝಂ ತಂಡದಲ್ಲಿ ಉಳಿದಿದ್ದರೂ, ಮೊಹಮ್ಮದ್ ರಿಜ್ವಾನ್ ಮತ್ತು ಹ್ಯಾರಿಸ್ ರೌಫ್‌ಗೆ ಸ್ಥಾನವಿಲ್ಲ. ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುವ ಟೂರ್ನಿಗೆ ಪಾಕ್ ಸಿದ್ಧತೆ ನಡೆಸಿದೆ.

2026 ರ ಟಿ20 ವಿಶ್ವಕಪ್ (T20 World Cup 2026) ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ವಿಶ್ವಕಪ್ ಟೂರ್ನಿಗಾಗಿ 20 ತಂಡಗಳಲ್ಲಿ 15 ತಂಡಗಳನ್ನು ಪ್ರಕಟಿಸಲಾಗಿತ್ತು. ಇದೀಗ ಜನವರಿ 25 ರಂದು ಪಾಕಿಸ್ತಾನ ವಿಶ್ವಕಪ್ ಟೂರ್ನಿಗಾಗಿ ತನ್ನ ತಂಡವನ್ನು ಸಹ ಪ್ರಕಟಿಸಿದೆ. ಈ ಟೂರ್ನಿಗಾಗಿ ತಂಡವನ್ನು ಘೋಷಿಸಿದ 16 ನೇ ದೇಶ ಪಾಕಿಸ್ತಾನ. ಕಳೆದ ವಿಶ್ವಕಪ್ ತಂಡಕ್ಕೆ ಹೋಲಿಸಿದರೆ ಈ ಬಾರಿ ಪಾಕಿಸ್ತಾನ ತಂಡದಲ್ಲಿ 7 ಬದಲಾವಣೆಗಳನ್ನು ಮಾಡಲಾಗಿದೆ. ಗಮನಾರ್ಹವಾಗಿ ನಾಯಕನೂ ಸಹ ಬದಲಾಗಿದ್ದಾನೆ. ಹೀಗಾಗಿ ಪಾಕಿಸ್ತಾನ ತಂಡದಿಂದ ಯಾರನ್ನು ಹೊರಹಾಕಲಾಗಿದೆ ಮತ್ತು ಯಾರಿಗೆ ಅವಕಾಶ ನೀಡಲಾಗಿದೆ? ಎಂಬುದನ್ನು ನೋಡುವುದಾದರೆ..
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಬಾಬರ್ ಆಝಂ ನಾಯಕತ್ವದಲ್ಲಿ, ಪಾಕಿಸ್ತಾನ ಗುಂಪು ಹಂತದಲ್ಲಿಯೇ ತನ್ನ ಪ್ರಯಾಣ ಮುಗಿಸಿತ್ತು. ಅಲ್ಲದೆ ಯುಎಸ್ಎಯಂತಹ ದುರ್ಬಲ ತಂಡದ ವಿರುದ್ಧವೂ ಸೋತಿತ್ತು. ಆದ್ದರಿಂದ, ಈಗ ಪಿಸಿಬಿ ತನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಆಯ್ಕೆ ಸಮಿತಿಯು ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆಯಾದರೂ, ಅನುಭವಿ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಹ್ಯಾರಿಸ್ ರೌಫ್‌ಗೆ ತಂಡದಿಂದ ಗೇಟ್ಪಾಸ್ ನೀಡಿದೆ.
7 ಆಟಗಾರರು ಔಟ್
ಅಜಮ್ ಖಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ 7 ಆಟಗಾರರು ಕಳೆದ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು.
7 ಆಟಗಾರರಿಗೆ ಮೊದಲ ಅವಕಾಶ
ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್ ಮತ್ತು ಉಸ್ಮಾನ್ ತಾರಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಏಳು ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.
ಕಳೆದ ಟಿ20ವಿಶ್ವಕಪ್‌ನಲ್ಲಿ ಪಾಕ್ ಪ್ರದರ್ಶನ
ಕಳೆದ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ ಒಟ್ಟು 4 ಪಂದ್ಯಗಳನ್ನು ಆಡಿತ್ತು. ಈ 4 ಪಂದ್ಯಗಳಲ್ಲಿ ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಮೆರಿಕ ಮತ್ತು ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದ್ದವು. ಇತ್ತ ಪಾಕಿಸ್ತಾನ ದುರ್ಬಲ ಕೆನಡಾ ಮತ್ತು ಐರ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿತ್ತು.
T20 World Cup 2026: ಟೀಂ ಇಂಡಿಯಾ ಪಾಕಿಸ್ತಾನ ತಂಡಕ್ಕಿಂತ ಬಲಿಷ್ಠವಾಗಿದೆ; ಕಮ್ರಾನ್ ಅಕ್ಮಲ್
ಟಿ20 ವಿಶ್ವಕಪ್ಗೆ ಪಾಕ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
