IND vs NZ: ಅಭಿ, ಸೂರ್ಯ ಸಿಡಿಲಬ್ಬರದ ಅರ್ಧಶತಕ; ಟಿ20 ಸರಣಿ ಗೆದ್ದ ಟೀಂ ಇಂಡಿಯಾ
India vs New Zealand T20: ಗುವಾಹಟಿ ಟಿ20 ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು ಏಕಪಕ್ಷೀಯವಾಗಿ ಸೋಲಿಸಿ, 3-0 ಅಂತರದಲ್ಲಿ ಐದು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತವು ತನ್ನದೇ ಆದ ಸತತ 13ನೇ ಟಿ20 ಸರಣಿ ಗೆಲುವಿನ ದಾಖಲೆಯನ್ನು ಮುರಿದಿದೆ. ಅಭಿಷೇಕ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕಗಳು ಟೀಂ ಇಂಡಿಯಾವನ್ನು ಕೇವಲ 10 ಓವರ್‌ಗಳಲ್ಲಿ ಗುರಿ ತಲುಪಲು ನೆರವಾದವು.

ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೂರನೇ ಟಿ20 ಪಂದ್ಯವನ್ನೂ ಸಹ ಆತಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಈ ಮೂಲಕ 3-0 ಅಂತರದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಐದು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮಾತ್ರವಲ್ಲದೆ ಸತತ 13ನೇ ಟಿ20 ಸರಣಿಯನ್ನು ಗೆಲ್ಲುವ ಮೂಲಕ ತನ್ನದೇ ಹಳೆದ ದಾಖಲೆಯನ್ನು ಮುರಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 153 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಮುಟ್ಟಿತು. ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದರು.
ಕಿವೀಸ್ಗೆ ಮತ್ತೆ ಕಳಪೆ ಆರಂಭ
ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಓವರ್‌ನಿಂದಲೇ ಪ್ರಾಬಲ್ಯ ಸಾಧಿಸಿತು. ಕೇವಲ 30 ಓವರ್ ಮಾತ್ರ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಕಳಪೆ ಆರಂಭ ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಹರ್ಷಿತ್ ರಾಣಾ ಮೂರನೇ ಎಸೆತದಲ್ಲಿಯೇ ಆರಂಭಿಕ ಡೆವೊನ್ ಕಾನ್ವೇ ಅವರನ್ನು ಔಟ್ ಮಾಡುವ ಮೂಲಕ ಮೊದಲ ಹೊಡೆತ ನೀಡಿದರು. ಮುಂದಿನ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ರಚಿನ್ ರವೀಂದ್ರ ಅವರನ್ನು ಔಟ್ ಮಾಡಿದರು. ನಂತರ, ಆರನೇ ಓವರ್‌ನಲ್ಲಿ, ಜಸ್ಪ್ರೀತ್ ಬುಮ್ರಾ ಪಂದ್ಯದ ಮೊದಲ ಎಸೆತದಲ್ಲೇ ಟಿಮ್ ಸೀಫರ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಮೂರು ವಿಕೆಟ್ ಪಡೆದ ಬುಮ್ರಾ
ಇಲ್ಲಿಂದ ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್ಮನ್ ತಂಡವನ್ನು ಮುನ್ನಡೆಸುತ್ತಾ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಸುಮಾರು ಒಂದು ವರ್ಷದ ನಂತರ ತಂಡಕ್ಕೆ ಮರಳಿದ ಸ್ಪಿನ್ನರ್ ರವಿ ಬಿಷ್ಣೋಯ್ ಈ ಪಾಲುದಾರಿಕೆಯನ್ನು ಮುರಿದರು. ಬಿಷ್ಣೋಯ್ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಔಟ್ ಮಾಡಿದರು. ಹಾರ್ದಿಕ್ ಪಾಂಡ್ಯ ತಕ್ಷಣವೇ ಡ್ಯಾರಿಲ್ ಮಿಚೆಲ್ ಅವರನ್ನು ಔಟ್ ಮಾಡಿ ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದರಾದರೂ ಅದು ಸಾಕಾಗಲಿಲ್ಲ. ಭಾರತದ ಪರ ಬುಮ್ರಾ ಮೂರು ವಿಕೆಟ್‌ಗಳನ್ನು ಪಡೆದರೆ, ಹಾರ್ದಿಕ್ ಮತ್ತು ಬಿಷ್ಣೋಯ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಮೊದಲ ಎಸೆತದಲ್ಲೇ ಸಂಜು ಔಟ್
ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಕಳಪೆ ಆರಂಭವನ್ನು ಪಡೆಯಿತು, ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಕ್ಲೀನ್ ಬೌಲ್ಡ್ ಆದರು. ಆದರೆ ಅದಾದ ನಂತರ, ನ್ಯೂಜಿಲೆಂಡ್‌ಗೆ ಉಸಿರಾಡಲು ಒಂದು ಕ್ಷಣವೂ ಸಮಯ ಸಿಗಲಿಲ್ಲ. ಇಶಾನ್ ಕಿಶನ್ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸಿ ಮುಂಬರುವ ಬಿರುಗಾಳಿಯ ಸೂಚನೆಯನ್ನು ನೀಡಿದರು. ಅಭಿಷೇಕ್ ಹಾಗೂ ಇಶಾನ್ ಒಟ್ಟಾಗಿ ಕೇವಲ 3.1 ಓವರ್‌ಗಳಲ್ಲಿ ತಂಡವನ್ನು 50 ರನ್ಗಳ ಗಡಿ ದಾಟಿಸಿದರು.
ಸೂರ್ಯ, ಅಭಿಷೇಕ್ ಸ್ಫೋಟಕ ಬ್ಯಾಟಿಂಗ್
ಮುಂದಿನ ಎಸೆತದಲ್ಲೇ ಇಶಾನ್ ಔಟ್ ಆದರೂ, ಅಭಿಷೇಕ್ ಮೇಲೆ ಅದು ಯಾವುದೇ ಪರಿಣಾಮ ಬೀರಲಿಲ್ಲ, ಅವರು ಪ್ರತಿ ಎಸೆತವನ್ನೂ ಬೌಂಡರಿ ಗೆರೆ ದಾಟಿಸುತ್ತಲೇ ಇದ್ದರು. ಇದರ ಪರಿಣಾಮವಾಗಿ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಮತ್ತು ನ್ಯೂಜಿಲೆಂಡ್ ವಿರುದ್ಧ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ನಂತರ ನಾಯಕ ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಆಟವಾಡಿ ತಮ್ಮ ಸತತ ಎರಡನೇ ಅರ್ಧಶತಕದೊಂದಿಗೆ ಹಿಂದಿನ ಪಂದ್ಯದಿಂದ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. 10 ನೇ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯ ಬೌಂಡರಿ ಬಾರಿಸಿ ಕೇವಲ 60 ಎಸೆತಗಳಲ್ಲಿ ತಂಡದ ಗೆಲುವು ಖಚಿತಪಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Sun, 25 January 26
