ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರ ಪರಿಕಲ್ಪನೆಯ ಮಹತ್ವದ ಕಾರ್ಯಕ್ರಮ ಬಣ್ಣದರ್ಪಣೆ ಕಾರ್ಯಕ್ರಮಕ್ಕೆ ಇಂದು(ಅಕ್ಟೋಬರ್ 29) ಚಾಲನೆ ದೊರೆತಿದೆ. ಕುಂದುಗೋಳದ ಹರಭಟ್ಟ ಶಾಲೆಯ ಆವರಣದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ವುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖುದ್ದಾಗಿ ಕಳೆಗುಂದಿರುವ ಸರ್ಕಾರಿ ಶಾಲೆಯ ಗೋಡೆಗೆ ಪೇಂಟ್ ಮಾಡಿ ಅಭಿಯಾನಕ್ಕೆ ಪ್ರೇರೆಪಣೆ ನೀಡಿದರು. ಇನ್ನು ಪ್ರಲ್ಹಾದ್ ಜೋಶಿ ಅವರಿಗೆ ಸಾಥ್ ನೀಡಿದ ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರು ಕೂಡ ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಬಣ್ಣದರ್ಪಣೆ ಅಭಿಯಾನ ಬೆಂಬಲಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚಿ ಹೊಸ ರೂಪ ನೀಡುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ಆರಂಭವಾಗಿದ್ದು ಒಂದು ವರ್ಷದ ವರೆಗೆ ನಡೆಯಲಿದೆ. ಪ್ರತಿ ತಿಂಗಳು 100 ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಬಣ್ಣ ಲೇಪನವಾಗಲಿದೆ. ವರ್ಷದೊಳಗೆ ಒಟ್ಟು 1177 ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಬಣ್ಣದರ್ಪಣೆ ಸೇವಾ ಕಾರ್ಯದ ಮೂಲಕ ಸರಕಾರಿ ಶಾಲಾ ಕಾಲೇಜುಗಳನ್ನು ರಂಗೇರಿಸುವ ಯೋಜನೆ ಮತ್ತು ಯೋಚನೆಗೆ ಶಾಲಾ ಹಳೆ ವಿದ್ಯಾರ್ಥಿಗಳ ಮತ್ತು ಆಯಾ ಪ್ರದೇಶದ ಜನರು, ಸಂಘ ಸಂಸ್ಥೆಗಳ ಹೆಚ್ಚಿನ ಸಹಕಾರವನ್ನ ಪ್ರಲ್ಹಾದ್ ಜೋಶಿ ಕೋರಿದ್ದಾರೆ. “ಕ್ಷಮತಾ” ಸೇವಾ ಸಂಸ್ಥೆಯ ಮೂಲಕ ಪ್ರತಿ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಬಣ್ಣ ವಿತರಿಸಲಾಗುತ್ತಿದೆ.
ಈ ಸೇವಾ ಕಾರ್ಯದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ನಮ್ಮ ಜೀವನ ರೂಪಿಸಿದ ನಮ್ಮೂರ ಶಾಲೆಗಳನ್ನು ಚೆಂದಗಾಣಿಸಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದ್ದಾರೆ. ಶಿಕ್ಷಕರು, ಶಾಲಾ ಸಮಿತಿಗಳು, ವಿದ್ಯಾರ್ಥಿ, ಯುವಕರ ಸಂಘಗಳು, ಸಂಘ ಸಂಸ್ಥೆಗಳು ಯಾರೇ ಮುಂದೆ ಬಂದು ಉಚಿತವಾಗಿ ಬಣ್ಣ ಪಡೆದು ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಬಹುದಾಗಿದೆ. ಇದಕ್ಕಾಗಿ ಆನ್ ಲೈನ್ ನೊಂದಣಿಯನ್ನ ಕೂಡ ಆರಂಭಿಸಲಾಗಿದೆ.
ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತೆ ಜೋಶಿ ಕರೆ
ಈ ವೇಳೆ ಮಾತನಾಡಿದ ಪ್ರಲ್ಹಾದ್ ಜೋಶಿ, ಬಣ್ಣದರ್ಪಣೆ ಸೇವಾ ಕಾರ್ಯದ ಮೂಲಕ ಸರಕಾರಿ ಶಾಲಾ ಕಾಲೇಜುಗಳನ್ನು ರಂಗೇರಿಸುವ ನಮ್ಮ ಯೋಜನೆ ಮತ್ತು ಯೋಚನೆಗೆ ಶಾಲಾ-ಕಾಲೇಜುಗಳ ಹಳೆ ವಿದ್ಯಾರ್ಥಿಗಳ ಮತ್ತು ಆಯಾ ಪ್ರದೇಶದ ಜನರ ಸಹಕಾರ ಅತ್ಯಗತ್ಯವಾಗಿದೆ. “ಕ್ಷಮತಾ” ಸೇವಾ ಸಂಸ್ಥೆಯ ಮೂಲಕ ನಾವು ಪ್ರತೀ ಶಾಲಾ ಕಾಲೇಜುಗಳಿಗೆ ಬಣ್ಣ ವಿತರಿಸಲಿದ್ದು, ಈ ಸೇವಾ ಕಾರ್ಯದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ನಮಗೆ ಜೀವನ ರೂಪಿಸಿದ ನಮ್ಮೂರ ಶಾಲೆಗಳನ್ನು ಚೆಂದಗಾಣಿಸಬೇಕು ಎಂದರು.
ಬಣ್ಣದರ್ಪಣೆ ಅಭಿಯಾನವು ಇಡೀ ದೇಶಕ್ಕೆ ಮಾದರಿಯಾಗಬೇಕೆಂಬ ಎಂಬ ಅಭಿಲಾಷೆ ವ್ಯಕ್ತಪಡಿಸಿದ ಸಚಿವರು, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜನರ ಸಂಖ್ಯೆ ಮತ್ತು ಉತ್ಸಾಹದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಈ ಅಭಿಯಾನದ ಮೂಲಕ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳು ಬಣ್ಣ ಕಾಣಲು ಜನರ ಸಹಕಾರ ಮತ್ತು ಅಮೂಲ್ಯ ಸಮಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಬಣ್ಣದರ್ಪಣೆ ಅಭಿಯಾನವು ಇಡೀ ದೇಶಕ್ಕೆ ಮಾದರಿಯಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿರುವ ಪ್ರಲ್ಹಾದ್ ಜೋಶಿ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜನರ ಸಂಖ್ಯೆ ಮತ್ತು ಉತ್ಸಾಹ ನೋಡಿ ಯೋಜನೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
Published On - 10:22 pm, Sat, 29 October 22