ಧಾರವಾಡ: ಸೈನಿಕರು ತಮ್ಮ ಬಲು ಮುಖ್ಯವಾದ ವೇಳೆಯನ್ನು ಸೇನೆಯಲ್ಲಿಯೇ ಕಳೆಯುತ್ತಾರೆ. ತಮ್ಮ ಹೆಂಡತಿ ಮಕ್ಕಳಿಂದ ದೂರವಿದ್ದು ದೇಶ ಕಾಯುತ್ತಾರೆ. ಹೀಗಾಗಿ ಅವರಿಗೆ ಎಲ್ಲೆಡೆ ಗೌರವ ಇದೆ. ಆದರೆ ಧಾರವಾಡದಲ್ಲಿ 30 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶವನ್ನು ಕಾದ ವ್ಯಕ್ತಿಯ ಕುಟುಂಬಕ್ಕೆ ರಾಜಕೀಯ ಪುಢಾರಿಯೊಬ್ಬ ನಿರಂತರವಾಗಿ ತೊಂದರೆ ನೀಡುತ್ತಿರುವ ಆರೋಪ ಕೇಳಿ ಬರುತ್ತಿದೆ. ನಿವೃತ್ತಿ ಜೀವನದಲ್ಲಾದರೂ ಕೊಂಚ ನೆಮ್ಮದಿಯಾಗಿರೋಣ ಅಂದುಕೊಂಡಿದ್ದ ಮಾಜಿ ಯೋಧನ ಕುಟುಂಬಕ್ಕೆ ಈ ವ್ಯಕ್ತಿಯಿಂದಾಗಿ ತೊಂದರೆಯುಂಟಾಗಿದೆ. ಇದೀಗ ಮಾಜಿ ಯೋಧನ ಕುಟುಂಬಕ್ಕೆ ತಮ್ಮ ಮನೆಯಲ್ಲಿಯೇ ನೆಮ್ಮದಿಯಾಗಿ ಇರಲು ಆಗುತ್ತಿಲ್ಲ. ಇದರಿಂದಾಗಿ ನಿತ್ಯವೂ ದಂಪತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ, ಮರಳಿರುವ ಮಾಜಿ ಯೋಧನಿಗೆ ಸಂಕಷ್ಟ
ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದ ಪುಲಕೇಶಿ ಮನ್ನಿಕೇರಿ 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿಯ ಹೆಸರು ವನಮಾಲಾ. ವನಮಾಲಾ ಅವರ ತಂದೆಗೆ ಗಂಡು ಮಕ್ಕಳು ಇಲ್ಲದಿದ್ದರಿಂದ ಗ್ರಾಮದಲ್ಲಿನ ಮನೆ ಹಾಗೂ ಹೊಲವನ್ನು ತನ್ನ ಪುತ್ರಿಗೆ ನೀಡಿದ್ದಾರೆ. ಗ್ರಾಮದ ಹಳೆಯ ಮನೆಯಲ್ಲಿಯೇ ದಂಪತಿ ವಾಸವಾಗಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಪುಲಕೇಶಿ ನಿವೃತ್ತಿಯ ಬಳಿಕವೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಾಗ ಗ್ರಾಮಕ್ಕೆ ಬರುವ ಪುಲಕೇಶಿ ಅವರಿಗೆ ಇತ್ತೀಚಿಗೆ ದೊಡ್ಡ ಸಮಸ್ಯೆ ಶುರುವಾಗಿದೆ.
ದಂಪತಿ ಮನೆಗೆ ಹೊಂದಿಕೊಂಡೇ ರುದ್ರಪ್ಪ ನಾಯ್ಕರ್ ಅನ್ನುವ ವ್ಯಕ್ತಿಯ ಮನೆ ಇದೆ. ಎರಡೂ ಮನೆಗಳ ಮಧ್ಯೆ ಒಂದೇ ಗೋಡೆ ಇದೆ. ಈ ಗೋಡೆಯಲ್ಲಿ ಇಬ್ಬರದೂ ಪಾಲು ಇದೆ. ಆದರೆ ತನ್ನ ಹಳೆ ಮನೆ ಕೆಡವಿ ಹೊಸ ಮನೆ ಕಟ್ಟುವಾಗ ಬೇಕಂತಲೇ ಎರಡೂ ಮನೆಗಳ ನಡುವಿನ ಗೋಡೆ ಬೀಳುವ ಹಾಗೆ ರುದ್ರಪ್ಪ ನಾಯ್ಕರ್ ಕುತಂತ್ರ ಮಾಡಿದ್ದಾನೆ ಅನ್ನುವುದು ಪುಲಕೇಶಿ ಅವರ ಆರೋಪ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎರಡೂ ಮನೆಯವರು ಕುಳಿತುಕೊಂಡು ಈ ಬಗ್ಗೆ ಚರ್ಚೆ ನಡೆಸಿ, ತಮ್ಮೊಳಗೆ ಒಂದು ನಿರ್ಣಯ ಮಾಡಿಕೊಳ್ಳಬೇಕು. ಬಳಿಕವಷ್ಟೇ ಹಳೆಯ ಮನೆಯ ದುರಸ್ತಿ ಕಾರ್ಯ ಆರಂಭಿಸಬೇಕು. ಆದರೆ ಇಂಥ ಯಾವುದೇ ವಿಚಾರಕ್ಕೆ ಹೋಗದೇ ರುದ್ರಪ್ಪ ಏಕಾಏಕಿ ತನ್ನ ಹಳೆಯ ಮನೆಯನ್ನು ಜೆಸಿಬಿ ಯಂತ್ರ ಬಳಸಿ ಕೆಡವಿ ಹಾಕಿದ್ದಾನೆ. ಈ ವೇಳೆ ಇಬ್ಬರಿಗೂ ಸೇರಿದ್ದ ಗೋಡೆಯ ಅರ್ಧ ಭಾಗ ಹೊಡೆದಿದೆ. ಆದರೂ ಪುಲಕೇಶಿ ಸುಮ್ಮನಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ರುದ್ರಪ್ಪ ಗೋಡೆಯ ಕೆಳ ಭಾಗದಲ್ಲಿ ಸುಮಾರು ಹತ್ತು ಅಡಿ ಗುಂಡಿ ತೋಡಿ, ಅಲ್ಲಿ ನೀರು ನಿಲ್ಲುವಂತೆ ಮಾಡಿದ್ದಾನೆ. ಯಾವಾಗ ಕೆಲವು ದಿನಗಳವರೆಗೆ ನೀರು ನಿಂತಿತೋ ಅಲ್ಲಿಗೆ ಮಣ್ಣಿನ ಗೋಡೆಯೆಲ್ಲಾ ನೆನೆದು ಕುಸಿದು ಬಿದ್ದಿದೆ. ಇದರಿಂದಾಗಿ ಗೋಡೆಯಿಲ್ಲದ ಮನೆಯಲ್ಲಿಯೇ ಪುಲಕೇಶಿ-ವನಮಾಲಾ ಜೀವನ ನಡೆಸುವಂತಾಗಿದೆ.
ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ರುದ್ರಪ್ಪ ನಾಯ್ಕರ್
ರುದ್ರಪ್ಪ ನಾಯ್ಕರ್ ಮಾಜಿ ಸಚಿವ ವಿನಯ ಕುಲಕರ್ಣಿ ಅವರೊಂದಿಗೆ ಗುರುತಿಸಿಕೊಂಡಿದ್ದಾನೆ. ಗ್ರಾಮದಲ್ಲಿ ವಿನಯ ಕುಲಕರ್ಣಿ ಅವರ ಹೆಸರು ಹೇಳಿಕೊಂಡು ತನ್ನ ಕೆಲಸವನ್ನು ಮಾಡಿಸಿಕೊಳ್ಳುವ ಬಗ್ಗೆ ಗ್ರಾಮಸ್ಥರಲ್ಲಿ ತಕರಾರು ಇದೆ. ತನ್ನ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ರಾಜಕೀಯ ನಾಯಕರ ಹೆಸರು ಹೇಳಿಕೊಳ್ಳುವುದು ಮೊದಲಿನಿಂದಲೂ ರುದ್ರಪ್ಪನಿಗೆ ಅಂಟಿಕೊಂಡಿರುವ ಅಭ್ಯಾಸ. ಇದೀಗ ತಾನು ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಅಂತಾ ಹೇಳಿಕೊಂಡು, ಅದೇ ಪ್ರಭಾವ ಬಳಸಿಕೊಂಡು ದಂಪತಿಯ ದೂರನ್ನು ಸಹ ಪೊಲೀಸರು ಗಂಭೀರವಾಗಿ ಪರಿಗಣಿಸದಂತೆ ಮಾಡಿದ್ದಾನೆ ಅನ್ನುವುದು ಪುಲಕೇಶಿ ಅವರ ಆರೋಪ. ಇದೆಲ್ಲದರಿಂದ ನೊಂದ ದಂಪತಿ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಕೋರ್ಟ್ ತಡೆಯಾಜ್ಞಯನ್ನು ಕೂಡ ನೀಡಿತ್ತು. ಆದರೆ ಇದೇ ವೇಳೆ ಮತ್ತೊಂದು ಕುತಂತ್ರ ಮಾಡಿದ ರುದ್ರಪ್ಪ ನಾಯ್ಕರ್, ಪುಲಕೇಶಿ ಅವರು ಬೆಂಗಳೂರಿಗೆ ಹೋದಾಗ ವನಮಾಲಾ ಅವರನ್ನು ಯಾಮಾರಿಸಿ, ಗ್ರಾಮ ಪಂಚಾಯತ್ ನಿಂದ ಪರಿಹಾರ ಕೊಡಿಸೋದಾಗಿ ಹೇಳಿ, ಮಳೆಯಿಂದಾಗಿ ಮನೆ ಬಿದ್ದಿದೆ ಅಂತಾ ದಾಖಲೆ ಸೃಷ್ಟಿಸಿದ್ದಾನೆ. ಇದೇ ದಾಖಲೆ ಇಟ್ಟುಕೊಂಡು ರುದ್ರಪ್ಪ ಕೋರ್ಟ್ ಮೊರೆ ಹೋಗಿದ್ದರಿಂದ ಕೋರ್ಟ್ ಪುಲಕೇಶಿ ಅವರ ಪ್ರಕರಣವನ್ನು ವಜಾಗೊಳಿಸಿದೆ.
ಎಲ್ಲ ಸಹಿಸಿಕೊಂಡರೂ ಮತ್ತೆ ಮತ್ತೆ ಜಗಳ, ಹಲ್ಲೆ
ಇಷ್ಟೆಲ್ಲ ಆದ ಮೇಲೆ ಜಗಳವಾದರೂ ಏಕೆ ಅಂದುಕೊಂಡು ತಮ್ಮ ಜಾಗದಲ್ಲಿಯೇ ಗೋಡೆಯನ್ನು ನಿರ್ಮಿಸಿಕೊಳ್ಳಲು ಪುಲಕೇಶಿ ನಿರ್ಧರಿಸಿದ್ದಾರೆ. ನಿರಂತರವಾಗಿ ಮಳೆ-ಗಾಳಿಯಿಂದಾಗಿ ಪತ್ನಿ ವನಮಾಲಾ ಅವರ ಆರೋಗ್ಯ ಬಿಗಡಾಯಿಸಿದ್ದನ್ನು ಗಮನಿಸಿ, ಗೋಡೆ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಇಲ್ಲಿಯೂ ರುದ್ರಪ್ಪ ತನ್ನ ತಾಕತ್ತು ಪ್ರದರ್ಶನ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಗೋಡೆ ಕಟ್ಟಿಕೊಳ್ಳದಂತೆ ಜಗಳಕ್ಕೆ ನಿಂತಿದ್ದಾನೆ. ಕೊನೆಗೆ ದಂಪತಿಯ ಮೇಲೆ ರುದ್ರಪ್ಪ ಹಾಗೂ ಆತನ ಮಕ್ಕಳೆಲ್ಲ ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ದಂಪತಿ ಆತಂಕಗೊಂಡಿದ್ದಾರೆ. ಯಾವಾಗಲಾದರೂ ರುದ್ರಪ್ಪ ಬಂದು ಮತ್ತೆ ಹಲ್ಲೆ ಮಾಡಬಹುದು ಅನ್ನುವುದೇ ಇದಕ್ಕೆ ಕಾರಣ. ಹಲ್ಲೆಯ ಬಳಿಕ ದಂಪತಿ ಗರಗ್ ಠಾಣೆಗೆ ಹೋಗಿ ದೂರು ನೀಡಲು ಯತ್ನಿಸಿದರೆ, ಅಲ್ಲಿ ರುದ್ರಪ್ಪ ತನ್ನ ಪ್ರಭಾವ ಮೀರಿ ಪ್ರಕರಣ ದಾಖಲಾಗದಂತೆ ತಡೆದಿದ್ದಾನೆ ಅನ್ನುವುದು ದಂಪತಿಯ ಆರೋಪ.
ಇನ್ನು ಘಟನೆ ಬಗ್ಗೆ ಟಿವಿ-9 ಡಿಜಿಟಲ್ ಗೆ ಪ್ರತಿಕ್ರಿಯೆ ನೀಡಿದ ಧಾರವಾಡ ಎಸ್ಪಿ ಕೃಷ್ಣಕಾಂತ್, ನೊಂದವರು ಬಂದು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಹೇಳುತ್ತಾರೆ. ಇದು ಸಿವಿಲ್ ವ್ಯಾಜ್ಯವಾಗಿರುವುದರಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಹೀಗಾಗಿ ನೊಂದ ದಂಪತಿ ಬಂದು ದೂರು ನೀಡಿದರೆ ಕೂಡಲೇ ಸೂಕ್ರ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಹೇಳಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಮದ್ರಾಸ್ ಹೈಕೋರ್ಟ್ ಅನುಮತಿ